ಸ್ಟಿಂಗ್ ರಾಣಿ ‘ಲಾಕ್’ ಆದರೆ ಕರಾವಳಿಯ ಕಾಂಗೈ ನಲ್ಲಿ ಕಂಪನ.. ಪ್ರಭಾವಿಗಳ ಭವಿಷ್ಯಕ್ಕೆ ಕುತ್ತು.!
ಜೆಡಿಎಸ್ ಗೂ ಟೆನ್ಷನ್..’ರೋಷ’ ರಾಮಯ್ಯ.. ಬಿಜೆಪಿ ನಿರಾಳ.!
‘ಇದು ನನ್ನ ಸರ್ಕಾರವಲ್ಲ..ಮುಖ್ಯಮಂತ್ರಿ ಬೇರೆಯವರು..ದಸರಾ ಅವ್ಯವಸ್ಥೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಡಿರುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಭಾರಿ ಕಂಪನಕ್ಕೆ ಕಾರಣವಾಗಿದೆ. ತಮ್ಮ ವಿರುದ್ಧ ಹಲವು ದಿನಗಳಿಂದ ಸ್ಟಿಂಗ್ ಕೋಲಾಹಲ ಎದ್ದರೂ ‘ಮೌನರಾಮಯ್ಯ’ ಆಗಿದ್ದ ಮಾಜಿ ಸಿಎಂ ದಸರಾ ಮುಗಿಯುತ್ತಿದ್ದಂತೆ ‘ರೋಷ ರಾಮಯ್ಯ’ ಆಗಿ ಬದಲಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಸಂಕಷ್ಟ ತಂದುಕೊಡಲಿದೆ ಅನ್ನುವ ವ್ಯಾಖ್ಯಾನ ರಾಜಕೀಯ ವಿಶ್ಲೇಷಕರಿಂದ ಕೇಳಿಬರುತ್ತಿದೆ. ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್, ಸಿಡಿಗಳು ಹೊಸದೇನಲ್ಲ. ರಾಜಕಾರಣಿಗಳ ಸಿನೆಮಾಗಳು ಬಿಡುಗಡೆಯಾಗಿ ಹಲ್ ಚಲ್ ಎಬ್ಬಿಸಿದ್ದು ಇದೆ. ಬಾಂಬೆ ಬಾಯ್ಸ್ ಗಳ ಸಿಡಿ ಸುದ್ದಿಗೆ ಗ್ರಾಸವಾಗಿದ್ದು ಇದೆ. ಆದರೆ ಇದೀಗ ಖುದ್ದು ಮಾಜಿ ಸಿಎಂ ಅವರೇ ಮೌನ ಬಿಟ್ಟು ನನ್ನ ವಿರುದ್ಧ ದುರುದ್ದೇಶಪೂರಿತ ಕಾರ್ಯಾಚರಣೆ ನಡೆಸಲಾಗಿದೆ. ಇದರ ಹಿಂದೆ ಸ್ವಪಕ್ಷೀಯದವರ ಕೈವಾಡವಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಬಹಿರಂಗವಾಗಿಯೇ ರೋಷ ವ್ಯಕ್ತಪಡಿಸುವ ಮೂಲಕ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ರಾಡಿ ಎಬ್ಬಿಸಿದ ಸ್ಟಿಂಗ್ ಕೋಲಾಹಲಕ್ಕೆ ಟಿಸ್ಟ್ ಕೊಟ್ಟಿದ್ದಾರೆ.
ಅಸಲಿಗೆ ಸ್ಟಿಂಗ್ ಆಪರೇಷನ್ ವಿರುದ್ಧ ಸರಕಾರ ಸಮರ್ಪಕ ತನಿಖೆ ನಡೆಸುತ್ತಾ ಅನ್ನುವುದೇ ಇದೀಗ ಎದ್ದಿರುವ ಪ್ರಶ್ನೆ. ಕೆದಕಿದಷ್ಟು ಕಾಂಗ್ರೆಸ್ ನಾಯಕರಿಗೆ ಆಪತ್ತು ಕಟ್ಟಿಟ್ಟ ಬುತ್ತಿ. ಪಕ್ಷದ ಘಟಾನುಘಟಿಗಳ ಹೆಸರೇ ಸ್ಟಿಂಗ್ ನಲ್ಲಿ ತಳುಕು ಹಾಕಿರುವುದರಿಂದ ಒಂದಿಬ್ಬರ ಬಂಧನದ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಕುವ ಸಂಭವವೇ ಹೆಚ್ಚು. ಸ್ಟಿಂಗ್ ಸುಳಿಯಲ್ಲಿ ಸ್ವಪಕ್ಷೀಯದವರ ಪಾತ್ರವೇ ಪ್ರಮುಖವಾಗಿ ಕೇಳಿ ಬರುತ್ತಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆದರೆ ಸರಕಾರದ ಬುಡ ಅಲ್ಲಾಡುವುದಂತೂ ಖಚಿತ. ಅಂತಹ ರಿಸ್ಕ್ ತೆಗೆದುಕೊಳ್ಳಲು ಸರಕಾರ ಖಂಡಿತ ಹೋಗಲಾರದು. ಸ್ಟಿಂಗ್ ಆಪರೇಶನ್ ನಲ್ಲಿ ಕೇಳಿ ಬಂದಿರುವ ಒಂದೆರಡು ಹೆಸರುಗಳನ್ನು ಲಿಫ್ಟ್ ಮಾಡುವ ಮೂಲಕ ಕೇಸ್ ಕ್ಲೋಸ್ ಮಾಡಿದರೂ ಅಚ್ಚರಿಯಿಲ್ಲ.
ಆದರೆ ಸ್ಟಿಂಗ್ ವಿಚಾರ ಮಾಜಿ ಸಿಎಂ ನಡೆಯ ಮೇಲೆ ಅವಲಂಬಿತವಾಗಿದೆ.
ರಾಜ್ಯ ರಾಜಕಾರಣದ ಬಗ್ಗೆ ಅರಿವು ಇರುವವರಿಗೆ ಸಿದ್ದರಾಮಯ್ಯ ಬೇರೆ ರಾಜಕಾರಣಿ ರೀತಿ ಸುಲಭದಲ್ಲಿ ಸೋಲೋಪ್ಪಿಕೊಂಡು ಬಿಡುವವರು ಅಲ್ಲ. ಮೌನಿಯಾಗಿದ್ದೇ ಕೌಂಟರ್ ಗೇಮ್ ಆಡುವಲ್ಲಿ ನಿಸ್ಸೀಮರು. ಪೊಲೀಸ್ ದೂರು ಕೊಟ್ಟು ಎರಡು ವಾರ ಕಳೆದರೂ ರಾಜ್ಯ ಸರಕಾರ ಸ್ಟಿಂಗ್ ಕೋಲಾಹಲದ ಪ್ರಕರಣದ ತನಿಖೆ ನಡೆಸುವ ಕನಿಷ್ಠ ಕೆಲಸವನ್ನು ಮಾಡಿರಲಿಲ್ಲ. ಆದರೆ ಮಾಜಿ ಸಿಎಂ ರೋಷ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಸರಕಾರ ದಿಲ್ಲಿ ಮೂಲದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಚುರುಕುಗೊಳಿಸಿದ್ದಾರೆ. ಕೇರಳ ಮೂಲದ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡು ಬಂದಿದ್ದಾರೆ.

ಮಾಜಿ ಸಿಎಂ ವಿರುದ್ಧ ಹೆಣೆದ ಸ್ಟಿಂಗ್ ಅವರ ಕೈ ಕಟ್ಟಿಹಾಕುತ್ತದೆ ಎಂದು ಅವರ ವಿರೋಧಿಗಳು ಭಾವಿಸಿದ್ದರು. ಆದರೆ ಇದೀಗ ಅದರ ಸತ್ಯಾಸತ್ಯತೆ ಹೊರಬರಬೇಕು ಎಂದು ಖುದ್ದು ಮಾಜಿ ಸಿಎಂ ಫೀಲ್ಡಿಗೆ ಇಳಿದಿರುವುದರಿಂದ ತೋಡಿದ ಹಳ್ಳಕ್ಕೆ ಬೀಳುವವರು ಯಾರು.? ಅನ್ನುವ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಮಾಜಿ ಸಿಎಂ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ ಅನ್ನುವ ವಾತಾವರಣ ಸೃಷ್ಟಿಯಾಗಿರುವುದರಿಂದ ಅವರ ಬಗ್ಗೆ ಸಾರ್ವಜನಿಕವಾಗಿ ಅನುಕಂಪದ ಅಲೆ ಎದ್ದಿದೆ. ಇನ್ನೊಂದೆಡೆ ತಮ್ಮದೇ ಸರಕಾರ ಇದ್ದರೂ ತನಿಖೆಗೆ ಮೀನಮೇಷ ಎಣಿಸುತ್ತಿರುವುದು ಯಾಕೆ ಅನ್ನುವ ಬಗ್ಗೆ ಸರಕಾರದ ವಿರುದ್ಧವೇ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಸರಕಾರ ತನಿಖೆಯನ್ನು ವಿಳಂಬ ಮಾಡಿದರೆ ತಮ್ಮ ಕ್ಯಾಂಪಿನ ಪುತ್ರ ಹಾಗೂ ನಾಲ್ಕೈದು ಮಂದಿ ಸಚಿವರ ರಾಜಕೀಯ ಪ್ರಹಸನದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮುನ್ಸೂಚನೆಗಳು ಕಂಡುಬರುತ್ತಿದೆ. ಸ್ಟಿಂಗ್ ನ ಕಿಂಗ್ ಪಿನ್, ಪಿತಾಮಹ ರೆಲ್ಲರೂ ಬೀದಿಗೆ ಬೀಳುವವರೆಗೂ ಮಾಜಿ ಸಿಎಂ ವಿರಮಿಸಲಾರರು ಅನ್ನುವ ರೀತಿ ತೊಡೆ ತಟ್ಟಿ ನಿಂತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸರಕಾರದ ಕಿವಿ ಹಿಂಡುವ ಕೆಲಸ ಮಾಡಿದರೂ ಅಚ್ಚರಿಯಿಲ್ಲ. ಹಲವು ಗ್ಯಾರಂಟಿ ಕೊಟ್ಟು ಸುಭದ್ರವಾಗಿದ್ದ ಸರಕಾರ ಸ್ಟಿಂಗ್ ಎಡವಟ್ಟಿಗೆ ಆಹುತಿ ಪಡೆಯುತ್ತಾ.? ಅನ್ನುವುದೇ ಇದೀಗ ಎದ್ದಿರುವ ಕುತೂಹಲ.
ಈ ಮಧ್ಯೆ ಜೆಡಿಎಸ್ ‘ಕುಮಾರ’ ಬಿಡುವ ನಿರಂತರ ಬಾಣಗಳು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪಕ್ಷಕ್ಕೂ ಸಾಕಷ್ಟು ಡ್ಯಾಮೇಜ್ ಕೊಟ್ಟಿದೆ. ಆಡಳಿತಗಾರರ ಇಮೇಜ್ ಗೂ ದೊಡ್ಡ ಪೆಟ್ಟು ಕೊಟ್ಟಿದೆ. ಸ್ಟಿಂಗ್ ಸುಂಟರಗಾಳಿಯನ್ನು ಸಮರ್ಥವಾಗಿ ಎದುರಿಸಲು ಸರಕಾರ ವಿಫಲವಾಗಿದೆ. ಜೆಡಿಎಸ್ ಬತ್ತಳಿಕೆಯಿಂದ ಬರುವ ಒಂದೊಂದು ಮಾತಿನ ಅಸ್ತ್ರ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿದೆ. ಈ ನಡುವೆ ಸ್ಟಿಂಗ್ ಹಿಂದಿನ ಅಸಲಿ ವೀರರ ಬದಲು ಅದರ ವಿತರಕರನ್ನು ಮೊದಲು ಹೆಡೆಮುರಿ ಕಟ್ಟಿದರೆ ಕಳಂಕದಿಂದ ತಪ್ಪಿಸಿಕೊಳ್ಳಬಹುದು ಅನ್ನುವ ಸ್ಟ್ರಾಟಜಿ ಗೆ ಸರಕಾರ ಬಂದಂತಿದೆ. ಇದು ಸಹಜವಾಗಿ ಜೆಡಿಎಸ್ ಪಕ್ಷಕ್ಕೂ ಆತಂಕ ತಂದಿದೆ. ಈ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮೌನಿಯಾಗಿ ವೀಕ್ಷಿಸುತ್ತಿರುವ ಬಿಜೆಪಿ ಸಹಜವಾಗಿ ಒಟ್ಟಾರೆ ಸ್ಟಿಂಗ್ ಫಲಿತಾಂಶಕ್ಕಾಗಿ ಕಾದು ಕುಳಿತಿದೆ. ಅಲ್ಲಿ ಏನಾದರೂ ಆದರೆ ಅದರ ಲಾಭ ಗಳಿಕೆ ಬಿಜೆಪಿಗೆ ಸಿಗುತ್ತದೆ.
ಇನ್ನೊಂದೆಡೆ ಈ ಸ್ಟಿಂಗ್ ನ ದೊಡ್ಡ ನಂಟು ಇರುವುದು ಕರಾವಳಿ ಭಾಗದಲ್ಲಿ. ಸಂತ್ರಸ್ತೆ ಕೇರಳ ಮೂಲದವರಾಗಿದ್ದರೆ, ಇದರ ಹಿಂದಿರುವ ಎರಡು ವಿಲನ್ ಪಾತ್ರಗಳು ಕರಾವಳಿ ಮೂಲದ್ದು. ಒಂದು ವೇಳೆ ಈ ಪ್ರಕರಣದಲ್ಲಿ ಪುತ್ತೂರಾಣಿ ಅರೆಸ್ಟ್ ಆದರೆ ಇದರ ಹಿಂದಿರುವ ಹಲವು ಕರಾವಳಿ ಕಾಂಗೈ ನಾಯಕರ ಬಂಡವಾಳವೂ ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ. ಸ್ಟಿಂಗ್ ಹಿಂದೆ ಫೈನಾನ್ಸ್ ಒದಗಿಸಿದವರು, ಪುತ್ತೂರಾಣಿ, ಮಾಧ್ಯಮ ಪ್ರಮುಖನ ಜೊತೆಗೆ ಸಾಥ್ ಕೊಟ್ಟವರು ಹೀಗೆ ಎಲ್ಲರ ಆಸಲಿಯತ್ತು ಹೊರ ಬೀಳಲಿದೆ . ಹಾಗೇನಾದರೂ ಆದರೆ ಕರಾವಳಿ ಕಾಂಗೈನಲ್ಲಿ ಕಂಪನ ಕನ್ಫರ್ಮ್ . ಮುಂದಿನ ಸೀಟಿನ ನಿರೀಕ್ಷೆ, ನಿಗಮ-ಮಂಡಳಿಯ ಗೂಟದ ಕಾರಿನ ಕನಸು ಕಾಣುತ್ತಿದ್ದ ಹಲವು ನಾಯಕರ ರಾಜಕೀಯ ಭವಿಷ್ಯವೇ ನುಚ್ಚುನೂರಾಗಲಿದೆ. ಮೂಲವೊಂದರ ಪ್ರಕಾರ ಸ್ಟಿಂಗ್ ರಾಣಿಗೆ ಈ ಬಾರಿಯ ನಿಗಮ ಮಂಡಳಿಯಲ್ಲಿ ಪವರ್ ಫುಲ್ ಗಿಫ್ಟ್ ಕೊಡಲು ಸರಕಾರದ ಕಡೆಯಿಂದ ತಯಾರಿ ನಡೆದಿತ್ತಂತೆ. ಆದರೆ ಸ್ಟಿಂಗ್ ವಿಡಿಯೋ ಹೊರಬೀಳುತ್ತಿದ್ದಂತೆ ಆ ಹೆಸರನ್ನೇ ಡಿಲೀಟ್ ಮಾಡಲಾಯಿತಂತೆ. ಅತ್ತ ಎಂಎಲ್ಎ ಸೀಟು ಇಲ್ಲ, ಇತ್ತ ನಿಗಮ ಮಂಡಳಿಯೂ ಇಲ್ಲ. ನಸೀಬು ಕೆಟ್ಟರೆ ಏನಾಗುತ್ತದೆ ಅನ್ನುವುದಕ್ಕೆ ಸ್ಟಿಂಗ್ ರಾಣಿ ಒಂದೊಳ್ಳೆಯ ಉದಾಹರಣೆ. ಒಂದು ಸ್ಟಿಂಗ್ ಕರಾವಳಿಯ ಹಲವು ಕಾಂಗೈ ಪ್ರಭಾವಿಗಳ ನಿದ್ದೆ ಕಸಿದಿದೆ.
