ಕೋಟಾ ಶ್ರೀನಿವಾಸ್ ಪೂಜಾರಿ ಮಂತ್ರಿಯಿದ್ದ ಸಂದರ್ಭದಲ್ಲಿ ಭೋವಿ ನಿಗಮದಲ್ಲಿನ ಕೋಟಿ ಕೋಟಿ ಹಣ ಲೂಟಿ: ಗೂಳಿಹಟ್ಟಿ ಶೇಖರ್

ಕರಾವಳಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಆದ ಬಳಿಕ ಈ ತನಿಖೆ ನಿಂತಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೋವಿ ನಿಗಮದಲ್ಲಿನ 100 ಕೋಟಿ ರೂ. ಅವ್ಯವಹಾರದ ತನಿಖೆ ನಡೆಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೊಸದುರ್ಗ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಆಗ್ರಹಿಸಿದ್ದಾರೆ. ಸದ್ಯ ವಾಲ್ಮೀಕಿ ನಿಗಮದ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಮಂತ್ರಿಯಿದ್ದ ಸಂದರ್ಭದಲ್ಲಿ ಭೋವಿ ನಿಗಮದಲ್ಲಿನ ಕೋಟಿ ಕೋಟಿ ಹಣ ನುಂಗಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಒತ್ತಾಯಿಸಿದ್ದಾರೆ.

ಈ ಹಗರಣದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ನೇರವಾಗಿ ಜವಾಬ್ದಾರಿ ಆಗಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಅಂತ ಪ್ರಾಮಾಣಿಕ ದೇಶದಲ್ಲಿ ಇಲ್ಲ ಅಂತಾರೆ. ಆದರೆ, ಅವರು 50-60 ಕೋಟಿ ಆಸ್ತಿ ಮಾಡಿದ್ದಾದರೂ ಹೇಗೆ.? ಅವರಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಗೊತ್ತಿಲ್ಲ. ಅಂದು ನಿಗಮದಲ್ಲಿನ 100-120 ಕೋಟಿ ರೂ. ಅವ್ಯವಹಾರ ನಡೆಯಿತು. ದುಡ್ಡೆಲ್ಲಾ ನುಂಗಿ ಹಾಕಿದರು. ಸಚಿವರಾಗಿದ್ದವರಿಗೆ 15% ಹಾಗೂ ನಿಗಮದ ಅಧ್ಯಕ್ಷರಿಗೆ, ಆಡಳಿತ ಮಂಡಳಿಗೆ 5% ಪರ್ಸೆಂಟ್ ತೆಗೆದುಕೊಂಡಿದ್ದಾರೆ. ಒಂದೇ ಒಂದು ರೂ. ಫಲಾನುಭವಿಗಳಿಗೆ ತಲುಪಿಲ್ಲ.

ನಮ್ಮ ಸಮಾಜದ ಲೀಡರ್‌ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅವತ್ತಿನ ಬೊಮ್ಮಾಯಿ ಸರ್ಕಾರದಲ್ಲಿ ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಇಬ್ಬರು ಈ ಪ್ರಕರಣದಲ್ಲಿ ಮರ್ಡರ್ ಕೂಡಾ ಆಗಿದ್ದಾರೆ. 100 ಕೋಟಿ ರೂ. ಹಣ ತಿಂದು ಹಾಕಿದ್ದಾರೆ. ನಾನು ನೇರವಾಗಿ ಹೇಳಿದ್ದೇನೆ, ಇದರಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಪಾಲಿದೆ ಎಂದು. ಎಷ್ಟು ತೊಗೊಂಡಿದ್ದಾರೆ ಎಂಬುದು ತನಿಖೆ ಬಳಿಕ ತಿಳಿಯುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಆದ ಬಳಿಕ ಈ ತನಿಖೆ ನಿಂತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಾಹೇಬರೇ ಭೋವಿ ನಿಗಮದ ತನಿಖೆ ಯಾಕೆ ನಿಲ್ಲಿಸಿದ್ದೀರಾ? ಶುರು ಮಾಡಿಸಿ ಎಂದು ಶೇಖರ್ ಆಗ್ರಹಿಸಿದ್ದಾರೆ.

ನಮ್ಮ ಸಮಾಜದ ಎಂಎಲ್‌ಸಿ ಪುತ್ರ ಕೂಡಾ 30 ಕೋಟಿ ರೂ. ನುಂಗಿದ್ದಾರೆ. ಪಾಪ ನಿಮಗೆ ಸಿಗೋದೆಲ್ಲಾ ಬರಿ ಎಸ್ಸಿ ಎಸ್ಟಿಗಳೇ . ಪಾಪ ಸಚಿವ ನಾಗೇಂದ್ರ ಎಸ್ಟಿ, ಬಿಟ್ಟಿ ಸಿಕ್ಕಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರರ ರಾಜೀನಾಮೆ ಕೇಳುತ್ತಿದ್ದೀರಲ್ವಾ? SC-ST, ಹಿಂದುಳಿದವರು ಕರ್ಮ ಮಾಡಿ ಹುಟ್ಟಿದ್ದೇವೆ ಎಂದು ಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.