ಉಡುಪಿ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಠದಲ್ಲಿ ಪೂಜಿಸುತ್ತಿದ್ದ ಪುರಾತನ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ ಇವರ ಮೇಲೆ ಕೇಳಿಬಂದಿದೆ. ಈ ಆರೋಪದ ಬೆನ್ನಲ್ಲೇ ಮಠಾಧೀಶರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಠದ ವಿಗ್ರಹಗಳನ್ನು ಮಾರಾಟ ಮಾಡಿದ ಆರೋಪ ಸ್ವಾಮೀಜಿ ಮತ್ತು ಸಿಬ್ಬಂದಿ ಮೇಲೆ ಕೇಳಿಬಂದಿದೆ. ಸ್ವಾಮೀಜಿ ವಿರುದ್ಧ ಶಿಷ್ಯ ವರ್ಗ ಗಂಭೀರ ಆರೋಪ ಮಾಡಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಜಡಿದು ಸ್ವಾಮೀಜಿ ಪರಾರಿಯಾಗಿದ್ದಾರೆ. ಸಾವಿರಾರು ವರ್ಷಗಳ ಪರಂಪರೆ ಇದ್ದ ವಿಗ್ರಹಗಳು ನಾಪತ್ತೆಯಾಗಿವೆ. ನರಸಿಂಹದೇವರು, ಗಣಪತಿ, ಮಹಿಷ ಮರ್ದಿನಿ ಸೇರಿದಂತೆ ಆರು ವಿಗ್ರಹಗಳು ನಾಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ, ಹಳೆಯ ಮೂರ್ತಿ ವಿಸರ್ಜನೆ ಮಾಡಿ ಹೊಸ ಮೂರ್ತಿ ಪ್ರತಿಷ್ಠೆಯಪಿಸಿದ್ದಾಗಿ ಹೇಳಿದ್ದರು. ಆದರೆ, ಈಗ ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಮಠದ ಶಿಷ್ಯ ಜಗದೀಶ್ ಐತಾಳ್ ಎಂಬವರ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಐತಾಳ್ ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ವಿಗ್ರಹಗಳು ವೆಬ್ ಸೈಟ್ ಒಂದರಲ್ಲಿ ಮಾರಾಟಕ್ಕಿರುವುದಾಗಿ ಪ್ರದರ್ಶಿಸಲಾಗಿತ್ತು. ಇದನ್ನು ಕಂಡು ಜಗದೀಶ್ ಐತಾಳ್, ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವೇಳೆ ಸ್ವಾಮೀಜಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವಿಷಯ ತಿಳಿದು ಸ್ವಾಮೀಜಿ ಪರಾರಿಯಾಗಿದ್ದಾರೆ.

ಬೆಂಗಳೂರಿನ ಪ್ರಸಿದ್ಧಿ ಐಡೋಲ್ಸ್ ಗೆ ವಿಗ್ರಹಗಳನ್ನು ಮಾರಾಟ ಮಾಡಿದ್ದರು. ನಾಗೇಂದ್ರ ಪ್ರಸಾದ್ ಈ ಕಂಪನಿಯ ಮಾಲೀಕರಾಗಿದ್ದಾರೆ. ನಾಗೇಂದ್ರಪ್ರಸಾದ್ ರನ್ನು ಪೊಲೀಸರು ವಶಕ್ಕೆ ಪಡೆದಾಗ ವಿಗ್ರಹ ಮಾರಾಟ ಮಾಡಿರುವ ವಿಷಯ ಬಯಲಾಗಿದೆ. ಅನಿಲ್ ಕುಮಾರ್, ಜಯಲಕ್ಷ್ಮಿ, ಶ್ರೇಯಸ್ ಎಂಬುವವರ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಮಠಾಧೀಶರ ಪತ್ತೆಕಾರ್ಯ ನಡೆಸುತ್ತಿದ್ದಾರೆ.
