ಸಜಿಪ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಸ್ಥಾನದಿಂದ ಖತರ್ನಾಕ್ ಶಾಫಿ ನಂದಾವರ ವಜಾ..

ಕರಾವಳಿ

ಇತ್ತ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸತ್ತಾರ್ ಸುರತ್ಕಲ್ ಉಚ್ಛಾಟನೆ

ಕೆಟ್ಟ ಮೇಲೆ ಬುದ್ಧಿ ಬಂತು.. ಧಾರ್ಮಿಕ ಸಂಘಟನೆಗಳಿಗೆ ಇದೊಂದು ಪಾಠವಾಗಲಿ

ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಅನ್ನುತ್ತಾರಲ್ಲ ಆ ಸ್ಥಿತಿಯಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಘಟನೆಗಳ ಕಥೆ. ಎಲ್ಲಿಂದಲೋ ಬಂದ ಅಡ್ರೆಸ್ ಇಲ್ಲದ ವ್ಯಕ್ತಿಯನ್ನು ಹೂಗುಚ್ಛ, ಶಾಲು ಕೊಟ್ಟು ಅಧ್ಯಕ್ಷ ಕುರ್ಚಿ ನೀಡಿ ಸನ್ಮಾನಿಸಿದರೆ ಆತ ಇದನ್ನೆಲ್ಲ ಮಾಡದೆ ಇನ್ನೇನೂ ಮಾಡಲು ಸಾಧ್ಯ. ಮೂಲತಃ ಪಡುಬಿದ್ರಿಯ ನಿವಾಸಿಯಾದ ಶಾಫಿ ಯನ್ನು ನಂದಾವರ ಜಮಾಅತಿಗರು ತಲೆಯ ಮೇಲೆ ಹೊತ್ತುಕೊಂಡು ಮಸೀದಿಯ ಪದಾಧಿಕಾರಿಯನ್ನಾಗಿ ಮಾಡಿದರು. ಅಲ್ಲಿನ ಸಜಿಪ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಂತೂ ಈತನಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಕುಳ್ಳಿರಿಸಿತು. ಈ ರೇಂಜ್ ವ್ಯಾಪ್ತಿಯಲ್ಲಿ ಹಿರಿಯರು, ಸಜ್ಜನ ವ್ಯಕ್ತಿಗಳು ಇದ್ದರೂ ಅವರನ್ನೆಲ್ಲಾ ಮೂಲೆಗೆ ಸರಿಸಿ ಇನ್ನೊಂದು ಸಂಘಟನೆ ವಿರುದ್ಧ ಮಸಲತ್ತು ನಡೆಸಲು, ನಾಲ್ಕೈದು ಖ್ಯಾತ ಉಲಮಾರ ಸಂಪರ್ಕವಿದೆ; ಸಂಘಟನೆಗೆ ಐದೋ ಹತ್ತೋ ಸಾವಿರ ನೀಡುತ್ತಾನೆ ಅನ್ನುವ ಕಾರಣಕ್ಕೆ ವಿಷಸರ್ಪವನ್ನು ಬಗಲಲ್ಲಿ ಇಟ್ಟುಕೊಂಡು ಸಜೀಪ ರೇಂಜ್ ಮಾಡಿದ್ದು ಎಡವಟ್ಟೆ. ಇದೀಗ ಉದ್ಯಮಿ, ಧಾರ್ಮಿಕ ನೇತಾರ ಮುಮ್ತಾಜ್ ಅಲಿ ಹನಿಟ್ರ್ಯಾಪ್ ಕೇಸಿನಲ್ಲಿ ಶಾಫಿ ಹೆಸರು ಥಳಕು ಹಾಕಿಕೊಂಡಾಗ ಸಜಿಪ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹುದ್ದೆಯಿಂದ, ಜಿಲ್ಲಾ ಕೌನ್ಸಿಲರ್ ಸ್ಥಾನದಿಂದ ವಜಾಗೊಳಿಸಿದೆ.

ಈ ಶಾಫಿ ನಂದಾವರನ ಖತರ್ನಾಕ್ ಕೆಲಸಗಳು ಸಜಿಪ ರೇಂಜ್ ಗೆ ಇದೀಗ ಗೊತ್ತಾದುದೇನೂ ಅಲ್ಲ. ನಂದಾವರ ಜಮಾಅತಿನಲ್ಲಿ ಫಜೀತಿ ಉಂಟು ಮಾಡಿ ಜಮಾಅತಿಗರೇ ತದುಕಿ ಊರಿನಿಂದ ಓಡಿಸಿದಾಗಲೂ ಈ ರೇಂಜ್ ನವರು ಎಚ್ಚೆತ್ತುಕೊಳ್ಳಬೇಕಿತ್ತು. ತಮ್ಮದೇ ಸಂಘಟನೆಯ ಖ್ಯಾತ ಧಾರ್ಮಿಕ ಪಂಡಿತರೊಬ್ಬರನ್ನು ಹನಿಟ್ರ್ಯಾಪ್ ಹೆಸರಿನಲ್ಲಿ ಖೆಡ್ಡಾಕ್ಕೆ ಬೀಳಿಸಲು ಪ್ರಯತ್ನಿಸಿದ ವಿಚಾರ ಸಾರ್ವಜನಿಕವಾಗಿ ಸುದ್ಧಿಯಾಗದಿದ್ದರೂ, ಸಂಘಟನೆಯ ಪ್ರಮುಖ ನಾಯಕರು, ಜಿಲ್ಲೆಯ ಕೆಲವೊಂದು ಧಾರ್ಮಿಕ ಪಂಡಿತರಿಗೆ ತಿಳಿಯದ ವಿಷಯವೇನಲ್ಲ. ಆಗಲೂ ಈತನನ್ನು ವಜಾ ಮಾಡಿದ್ದರೆ ತಮ್ಮ ರೇಂಜ್ ಗೂ ಒಂದು ಬೆಲೆಯಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಎಲ್ಲವೂ ಗೊತ್ತಿದ್ದು ಈ 420, ಖತರ್ನಾಕ್ ವ್ಯಕ್ತಿಯನ್ನು ಜವಬ್ದಾರಿಯುತ ಸಂಘಟನೆಯ ಅಧೀನದಲ್ಲಿರುವ ಕಮಿಟಿಯಲ್ಲಿ ಉಚ್ಘಾಟಿಸದೆ ಹಾಗೆಯೇ ಬಿಟ್ಟಿದ್ದು, ಇದೀಗ ಎಲ್ಲವೂ ಕೆಟ್ಟ ನಂತರ ಅಮಾನತುಗೊಳಿಸಿದರೆ ನಿಮ್ಮ ಜವಾಬ್ದಾರಿ ಮುಗಿಯಿತೇ? ಶಾಫಿ ನಂದಾವರ ಅನ್ನುವ ವ್ಯಕ್ತಿ ಈ ಪರಿ ಕ್ರಿಮಿನಲ್ ಆಗಿ ಬೆಳೆಯಲು ನಿಮ್ಮದು ಕೂಡಾ ಕಾಣಿಕೆ ಇದೆ ಅನ್ನುವುದನ್ನು ಮರೆಯಬಾರದು.

ಇದು ಧಾರ್ಮಿಕ ಸಂಘಟನೆಗಳಿಗೆ ಪಾಠವಾಗಬೇಕು. ಇದು ಇಲ್ಲಿನ ಒಂದೇ ಪ್ರಶ್ನೆಯಲ್ಲ. ಶಾಫಿ ಯಂತೆ ಹಲವು ಮಂದಿ ಸಜ್ಜನ ಮುಖವಾಡ ಧರಿಸಿ ಧಾರ್ಮಿಕ ಸಂಘಟನೆಯೊಳಗೆ ನುಸುಳಿಕೊಂಡಿದ್ದಾರೆ. ಕೆಲವು ಉಲಮಾರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಇಂತಹವರಿಗೆ ಮಣೆ ಹಾಕುತ್ತಿದ್ದಾರೆ. ಕೆಲವರು ಹೇಳಬಹುದು, ಒಮ್ಮೆಲೇ ಬಾವಿಗೆ ಹಾರಿದರೆ ನಮಗೇಗೆ ಗೊತ್ತಾಗುತ್ತದೆ ಎಂದು. ಅದು ಸತ್ಯ ಕೂಡ. ಆದರೆ ಒಂದೆರಡು ಘಟನೆ ನಡೆದಾಗ ಆತ ಇನ್ನೊಂದು ಸಂಘಟನೆಯ ವಿರುದ್ಧ ಇದ್ದಾನೆ; ಆತನಿಗೆ ಉಲೇಮಾಗಳ ಕನೆಕ್ಷನ್ ಇದೆ; ಆತನಿಗೆ ಚೇಲಾಗಳಿದ್ದಾರೆ; ಇದರಿಂದ ಧಾರ್ಮಿಕ ಸಂಘಟನೆಗೆ ಆ ಪರಿಸರದಲ್ಲಿ ಹಿನ್ನಡೆಯಾಗುತ್ತದೆ ಎಂದೆಲ್ಲಾ ಸಬೂಬು ನೀಡಿ ಅವರನ್ನು ಬಚಾವ್ ಮಾಡುತ್ತಾರೆ ಅಲ್ಲವೇ. ಇದು ರಾಜಕೀಯ ಪಕ್ಷವಲ್ಲ. ಧಾರ್ಮಿಕ ಸಂಘಟನೆ. ಅಂತಹದ್ದು ಎಷ್ಟೇ ದೊಡ್ಡ ಪ್ರಭಾವಶಾಲಿ ಮಾಡಿದರೂ ಆವಾಗಲೇ ಕಿತ್ತು ಹಾಕಿದರೆ ಸಂಘಟನೆಗೂ ಒಳ್ಳೆಯದು; ಇಂತಹ ಮುಜುಗರದಿಂದ ತಪ್ಪಿಸಿಕೊಳ್ಳಬಹುದು. ಎಲ್ಲವೂ ಮುಗಿದ ಮೇಲೆ ಸಾಚಾ ಆಗಲು ಪ್ರಯತ್ನಿಸಿದರೆ ಯಾರೂ ನಂಬುವುದಿಲ್ಲ. ಇನ್ನಾದರೂ ಧಾರ್ಮಿಕ ಪಂಡಿತರು ಇಂತಹ ಖತರ್ನಾಕ್ ವ್ಯಕ್ತಿಗಳನ್ನು ತಮ್ಮ ಎಡ ಬಲಗಳಲ್ಲಿ ಇರಿಸುವ ಮುನ್ನ ಜಾಗೃತಗೊಳ್ಳಬೇಕು. ಧಾರ್ಮಿಕ ಹಿನ್ನಲೆಯ ಎಲ್ಲಾ ಸಂಘಟನೆಗಳು ಇನ್ನಾದರೂ ಇದರಿಂದ ಪಾಠ ಕಲಿಯಬೇಕು.

ಈ ನಡುವೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಸತ್ತಾರ್ ಸುರತ್ಕಲ್ ಎಂಬವನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿರುವುದಾಗಿ ಜಿಲ್ಲಾ ಅಧ್ಯಕ್ಷರಾದ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.