ಸೋಷಿಯಲ್ ಮೀಡಿಯಾದಲ್ಲಿ ಆರೋಪ – ಪ್ರತ್ಯಾರೋಪ; ಪೊಲೀಸ್ ದೂರು; ಇಲಾಖೆ ಮೌನ
ಮಂಗಳೂರು ಉದ್ಯಮಿ, ಧಾರ್ಮಿಕ ಮುಖಂಡ ಮುಮ್ತಾಜ್ ಅಲಿ ಸುಸೈಡ್ ಕೇಸ್ ಪ್ರಕರಣ ಕಗ್ಗಂಟಾಗಿಯೇ ಉಳಿದಿದ್ದು, ದಿನಕ್ಕೊಂದು ವಿಚಿತ್ರ ತಿರುವು ಪಡೆಯುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ಆರೋಪ -ಪ್ರತ್ಯಾರೋಪಗಳಲ್ಲಿ ತೊಡಗಿದ್ದು ಅಮಾಯಕರನ್ನು ಸಿಲುಕಿಸಲಾಗುತ್ತಿದೆ ಅನ್ನುವ ಆರೋಪಗಳು ಕೇಳಿ ಬರತೊಡಗಿದೆ. ಮುಮ್ತಾಜ್ ಅಲಿ ಸುಸೈಡ್ ಕೇಸ್, ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಈವರೆಗೂ ಆರು ಜನ ಆರೋಪಿಗಳನ್ನು ಬಂಧಿಸಿದ್ದು, ಈ ಮಧ್ಯೆಯೇ ಈ ಘಟನೆಯ ಹಿಂದೆ ವಕ್ಫ್ ಅಧ್ಯಕ್ಷ, ಮಾಜಿ ಅಧ್ಯಕ್ಷರು ಶಾಮೀಲಾಗಿದ್ದಾರೆ ಎಂದು ಮುಮ್ತಾಜ್ ಅಲಿ ಸಹೋದರ ಖಾಸಗಿ ಮಾಧ್ಯಮವೊಂದರಲ್ಲಿ ಹೆಸರನ್ನು ರಿವೀಲ್ ಮಾಡಿದ್ದರು. ಇದನ್ನೇ ಕೆಲವು ಸೋಷಿಯಲ್ ಮೀಡಿಯಾ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡು ಮುಮ್ತಾಜ್ ಅಲಿಯವರ ಆಪ್ತ ಸ್ನೇಹಿತನಾದ ಆಸೀಫ್ ಹೋಮ್ ಪ್ಲಸ್ ಈ ಪ್ರಕರಣದಲ್ಲಿ ಇರುವುದಾಗಿ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ವೈಯಕ್ತಿಕ ಇಮೇಜಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಆಸೀಫ್ ಹೋಮ್ ಪ್ಲಸ್ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಆಸಿಡ್ ಎರಚುವ ಬೆದರಿಕೆ ಹಾಕಿರುವುದಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ನಮ್ಮೂರ ಸುದ್ದಿ ‘ ವಾಟ್ಸಾಪ್ ಗ್ರೂಪ್ ನಲ್ಲಿ ಅಕ್ಬರ್ ಕೃಷ್ಣಾಪುರ ಎಂಬಾತ 20 ಸೆಕೆಂಡ್ ನ ವಾಯ್ಸ್ ಮೆಸೇಜ್ ಹರಿಯಬಿಟ್ಟು “ಇವರನ್ನೆಲ್ಲಾ ಏನು ಮಾಡಬೇಕೆಂದರೆ, ಮೊದಲು ಅಡ್ಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದನ್ನು ಬೈಕಂಪಾಡಿಯ ಅಂಗರಗುಂಡಿಯವರು ಮಾಡಬೇಕು. ಮುಖ ತೋರಿಸಬಾರದು. ಆಸಿಡ್ ಎರಚಬೇಕು” ಅನ್ನುವ ಆಡಿಯೋ ಭಾರೀ ವೈರಲ್ ಆಗಿದ್ದು ಜೀವಬೆದರಿಕೆ ಹಾಕಿರುವುದಾಗಿ ನಾಸಿರ್ ಲಕ್ಕಿ ಸ್ಟಾರ್ ದೂರಿನಲ್ಲಿ ತಿಳಿಸಿದ್ದಾರೆ. ಆ ನಂತರ ಅಕ್ಬರ್ ಕೃಷ್ಣಾಪುರ ಮಗದೊಂದು ಆಡಿಯೋ ವೈರಲ್ ಆಗಿದ್ದು, ಅದು ಕ್ಷಮಾಪನ ಆಡಿಯೋ ಆಗಿತ್ತು.

ಮುಮ್ತಾಜ್ ಅಲಿ ಪ್ರಕರಣ ದಿನಕಳೆದಂತೆ ವಿಚಿತ್ರ ತಿರುವು ಪಡೆಯುತ್ತಿದ್ದು, ಕುಟುಂಬಸ್ಥರು ಕೆಲವೊಂದು ಹೈ ಪ್ರೊಫೈಲ್ ಬ್ಯಾರಿಗಳ ಹೆಸರನ್ನು ಬಹಿರಂಗವಾಗಿ ಹೇಳುತ್ತಿದ್ದು , ಬಕಪಕ್ಷೀಯಂತೆ ಕಾಯುತ್ತಿರುವ ಸೋಷಿಯಲ್ ಮೀಡಿಯಾ ಕಿಡಿಗೇಡಿಗಳು ಉಪ್ಪು ಖಾರ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಕಾನೂನು ಪರಿಧಿಯಲ್ಲಿ ತೊಂದರೆಗೊಳಗಾಗುತ್ತಿದ್ದಾರೆ. ಈ ಮಧ್ಯೆಯೇ ತಮಗಾಗದ ಅಮಾಯಕರನ್ನು ಸಿಲುಕಿಸಿ ಸೋಷಿಯಲ್ ಮೀಡಿಯಾ ವೀರರು ವೈರಲ್ ಮಾಡಿ ವಿಘ್ನ ಸಂತೋಷ ಪಡುತ್ತಿದ್ದಾರೆ. ಇತ್ತ ಅಮಾಯಕರನ್ನು ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳನ್ನು ನೇಮಿಸಿದ್ದು, ಸಾರ್ವಜನಿಕವಾಗಿ ಹರಿದಾಡುತ್ತಿರುವ ಸುದ್ಧಿಗೆ ಸ್ಪಷ್ಟನೆ ನೀಡಬೇಕಿದೆ. ಇಲ್ಲವಾದರೆ ದಿನಕ್ಕೊಂದು ಹೆಸರುಗಳು ತೇಲಿ ಬಂದು ಅವರ ವೈಯಕ್ತಿಕ ಇಮೇಜಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಇದು ಇನ್ನಷ್ಟು ಅನಾಹುತಕ್ಕೆ ಕಾರಣವಾಗಬಹುದು. ‘ಇಲಿಗೆ ಆಟ ಬೆಕ್ಕಿಗೆ ಪ್ರಾಣ ಸಂಕಟ’ ಅನ್ನುವಂತೆ ಈ ಪ್ರಕರಣ ತಿರುವು ಪಡೆಯುತ್ತಲೇ ಇರುತ್ತದೆ. ಇದರ ಹಿಂದೆ ಇರುವ ಪ್ರತ್ಯಕ್ಷ ಅಥವಾ ಪರೋಕ್ಷ ಆರೋಪಿಗಳ ಮೇಲೆ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲಾಖೆ ಮೌನಕ್ಕೆ ಜಾರಿರುವುದರಿಂದ ಇದು ಇನ್ನಷ್ಟು ಎಡವಟ್ಟಿಗೆ ಕಾರಣವಾಗಬಹುದು. ಇಲಾಖೆ ಇನ್ನಾದರೂ ವಾಸ್ತವಾಂಶಗಳನ್ನು ಸಾರ್ವಜನಿಕರ ಮುಂದೆ ತೆರೆದಿಡಲಿ. ಈ ಪ್ರಕರಣದಲ್ಲಿ ಯಾರೆಲ್ಲಾ ಸೇರ್ಕೊಂಡಿದ್ದಾರೆ, ಯಾರನ್ನೆಲ್ಲಾ ಕೈ ಬಿಡಲಾಗಿದೆ, ಪ್ರತಿಷ್ಠಿತ ಕಾಕಾಗಳ ಆಟ ಎಷ್ಟು ಪಲವತ್ತಾಗಿದೆ ಎಂಬ ಮಾಹಿತಿಗೆ ಪ್ರಕರಣದ ಅಂತಿಮ ವರದಿಯವರೆಗೆ ಕಾಯಬೇಕಾಗಿದೆ.
