ಅಂದಾಜು 2.50 ಲಕ್ಷ ಮೌಲ್ಯದ 36 ಗ್ರಾಂ ತೂಕದ ಚಿನ್ನದ ಸರ ಪತ್ತೆ
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 5, 2024 ರಂದು ಸುಂದರಿ ಪೂಜಾರಿ (73 ವರ್ಷ) ರವರು ತನ್ನ ಮಗಳ ಮನೆಯಾದ ಅಶ್ವಥಪುರಕ್ಕೆ ಹೋಗಲು ನಾರಾವಿಯಿಂದ ಬಸ್ಸಿನಲ್ಲಿ ಹೊರಟು ಮದ್ಯಾಹ್ನ ಸುಮಾರು 2.30 ಗಂಟೆಗೆ ಮೂಡಬಿದ್ರೆಯ ಬಸ್ ಸ್ಯಾಂಡ್ ಗೆ ಬಂದು ಇಳಿದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದು, ಅಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಸುಂದರಿ ಪೂಜಾರಿ ರವರ ಬಳಿಗೆ ಬಂದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ನೋಡಿ, ಪರಿಚಿತನಂತೆ ವರ್ತಿಸಿ ಇದೇ ರೀತಿಯ ಚಿನ್ನದ ಸರವನ್ನು ಮಾಡಿಸಬೇಕಿದೆ ಎಂದು ನಂಬಿಸಿ ಅವರಲ್ಲಿದ್ದ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದು, ವಾಪಸು ನೀಡದೇ ಮೋಸ ಮಾಡಿರುವ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆಗೆ ಇಳಿದ ಮೂಡಬಿದ್ರೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಂಟ್ವಾಳ ತಾಲೂಕಿನ ಕೆಂಪುಗುಡ್ಡೆ ನಿವಾಸಿ ಸುರೇಶ್ ಯಾನೆ ಸಂತೋಷ (60 ವರ್ಷ) ಬಂಧಿಸಿ ವಿಚಾರಣೆ ನಡೆಸಿದಾಗ ಹಲವರಿಗೆ ನಂಬಿಸಿ ಮಕ್ಮಲ್ ಟೋಪಿ ಇಟ್ಟ ಪ್ರಕರಣ ಹೊರಬಂದಿದೆ.

ಆರೋಪಿ ಈ ಹಿಂದೆ ವೃದ್ಧ ಮಹಿಳೆಗೆ ವಂಚನೆ ಮಾಡಿ ಲಪಟಾಯಿಸಿದ ಎರಡೂವರೆ ಪವನ್ ತೂಕದ ಚಿನ್ನದ ಸರ ಮತ್ತು 2023 ನೇ ಇಸವಿಯ ನವಂಬರ್ ತಿಂಗಳಿನಲ್ಲಿ ಕಾರ್ಕಳ ತಾಲೂಕು ಕಸಬ, ಮನ್ನು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದ ಸುಮಾರು ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರವನ್ನು ಕೂಡ ಆರೋಪಿಯಿಂದ ಸ್ವಾಧಿನಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳ ಅಂದಾಜು 2,50,000/- ರೂ ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಆರೋಪಿ ಮೇಲೆ ಪುತ್ತೂರು ಟೌನ್ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ, ನ್ಯಾಯಾಲಯವು ವಾರೆಂಟ್ ಹೊರಡಿಸಿದೆ.
ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, DCP ಯವರಾದ ಸಿದ್ದಾರ್ಥ ಗೊಯಲ್ IPS (ಕಾ&ಸು), ದಿನೇಶ್ ಕುಮಾರ್ DCP (ಅ& ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಕೃಷ್ಣಪ್ಪ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
