ಕೆಂಪು, ಕಲ್ಲು ಕ್ವಾರೆ ಪರ್ಮೀಟ್ ಗಾಗಿ ಲಕ್ಷಾಂತರ ರೂಪಾಯಿ ಪೀಕಿಸುವ ಆರೋಪ
ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 25 ಕಡೆ ದಾಳಿ ನಡೆಸಿದ್ದು, ಭ್ರಷ್ಟರ ಬೇಟೆ ಆರಂಭಿಸಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಎಂ.ಸಿ ಕೃಷ್ಣವೇಣಿ ಅವರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆಯೇ ಕೃಷ್ಣವೇಣಿ ಅವರ ಬೆಂಗಳೂರು, ಚಿಕ್ಕಾಬಳ್ಳಾಪುರದ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಕೃಷ್ಣವೇಣಿ ಅವರು ಮಂಗಳೂರಿಗೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿದ್ದರು. ಈ ಮೊದಲು ಚಿಕ್ಕಾಬಳ್ಳಾಪುರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯಾಗಿದ್ದರು.
ಕೃಷ್ಣವೇಣಿ ಅವರ ಕಂಕನಾಡಿ ಸಮೀಪದ ವೆಲೆನ್ಸಿಯಾದಲ್ಲಿರುವ ನಿವಾಸ ಹಾಗೂ ಮಲ್ಲಿಕಟ್ಟೆ ಗಣಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಪತ್ರಗಳ ತಪಾಸಣೆ ನಡೆಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಯಾದ ಕೃಷ್ಣವೇಣಿ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿದ್ದು. ಕೆಂಪು ಕಲ್ಲು ಪರ್ಮೀಟ್ ಗಾಗಿ ಕನಿಷ್ಠ ಐವತ್ತು ಸಾವಿರ, ಕೆಂಪು ಕಲ್ಲು ಕ್ವಾರೆ ಪರ್ಮೀಟ್ ಗಾಗಿ ಎರಡು ಲಕ್ಷ ರೂಪಾಯಿ ಪೀಕಿಸುತ್ತಿದ್ದರು ಅನ್ನುವ ಆರೋಪವಿದೆ.
