ವಿಟ್ಲ: ಸಿಂಗಾರಿ ಹಾಜಿ ಮನೆಯಲ್ಲಿ, ಇ ಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ: ಅಂತರಾಜ್ಯ ದರೋಡೆಕೋರನ ಬಂಧನ, ಕಾರು, ನಗದು ವಶ

ಕರಾವಳಿ
ವಿಟ್ಲ ಬೋಳಂತೂರಿನ ನಾರ್ಶ ಸಿಂಗಾರಿ ಬೀಡಿ ಮಾಲಕರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಜನವರಿ 3ರಂದು ರಾತ್ರಿ ದರೋಡೆ ಪ್ರಕರಣ ನಡೆದಿತ್ತು. 06 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 02/2025 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ದಿನಾಂಕ 23-01-2025 ರಂದು ಪ್ರಕರಣಕ್ಕೆ ಸಂಬಂದಿಸಿದಂತೆ ಕೊಲ್ಲಂ ಜಿಲ್ಲೆಯ ಆರೋಪಿ ಅನಿಲ್‌ ಫರ್ನಾಂಡಿಸ್‌ ಪ್ರಾಯ 49 ವರ್ಷ, ಎಂಬಾತನನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ KL-02-BP-1104ನೇ ನೊಂದಣಿ ನಂಬ್ರದ ಎರ್ಟಿಗಾ ಕಾರು, 5,00,000/-ರೂ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517ನೇ ನಂಬರ ಪ್ಲೇಟ್‌ನ್ನು ವಶಪಡಿಸಿಕೊಂಡಿದ್ದು, ಸ್ವಾದೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ- 11,00,000/- ರೂ ಆಗಬಹುದೆಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿರುತ್ತದೆ.