ಗ್ರಾಮ ಆಡಳಿತ ಅಧಿಕಾರಿಗಳನ್ನು ಬಿಡುವಿಲ್ಲದೆ ನಿರಂತರವಾಗಿ ದುಡಿಸಿಕೊಳ್ಳುತ್ತಿರುವ ಸರಕಾರ; ಅವರ ಸಂಕಷ್ಟಗಳಿಗೆ ಮಿಡಿಯುತ್ತಿಲ್ಲವೇಕೆ..?

ರಾಜ್ಯ

ವಾರದಿಂದ ನಡೆಯುತ್ತಿದೆ ಅನಿರ್ದಿಷ್ಟಾವಧಿ ಮುಷ್ಕರ.. ಕಂದಾಯ ಸಚಿವರೇ ಇನ್ನಾದರೂ ಕಣ್ಣು ತೆರೆಯಲಿ..?

ಸರಕಾರಿ ಹುದ್ದೆ ಪ್ರತಿಯೊಬ್ಬರ ಕನಸು. ಆದರೆ ಗ್ರಾಮ ಆಡಳಿತ ಅಧಿಕಾರಿ (ಈ ಹಿಂದೆ ಗ್ರಾಮ ಕರಣಿಕ ಅನ್ನುವ ಹೆಸರು) ಆಗಿ ಸರಕಾರಿ ಹುದ್ದೆ ಪಡೆದುಕೊಂಡವರ ವ್ಯಥೆಯಂತೂ ಹೇಳ ತೀರದಂತಹವು. ಯಾಕಾಗಿ ಈ ಹುದ್ದೆಗೆ ಬಂದು ಬಿಟ್ಟೇವೋ ಅನ್ನುವ ಕೀಳರಿಮೆ ಖಂಡಿತ ಮೂಡುವುದಂತೂ ಸುಳ್ಳಲ್ಲ. ಮೇಲಾಧಿಕಾರಿಗಳು ಎ.ಸಿ ರೂಮಿನಲ್ಲಿ ಕುಳಿತರೆ ಗ್ರಾಮ ಆಡಳಿತ ಅಧಿಕಾರಿಗಳು ಬಿಸಿಲು, ಮಳೆ ಲೆಕ್ಕಿಸದೆ ಜನರ ಬಳಿ ತೆರಳಬೇಕು. ಚುನಾಯಿತ ಜನ ಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಜನರ ಬಳಿ ತೆರಳಿದರೆ, ಈ ಗ್ರಾಮ ಆಡಳಿತ ಅಧಿಕಾರಿಗಳು ನಿರಂತರವಾಗಿ ಜನರ ಸಂಕಷ್ಟಕ್ಕೆ, ಮೇಲಾಧಿಕಾರಿಗಳು ಹೇಳುವ ಕೆಲಸವನ್ನು ಚಾಚೂ ತಪ್ಪದೆ ಪಾಲಿಸಬೇಕು. ಒಂದು ಕಡೆ ಜನಪ್ರತಿನಿಧಿಗಳು ಆರ್ಡರ್ ಮಾಡುವುದು, ಇನ್ನೊಂದು ಕಡೆ ಮೇಲಾಧಿಕಾರಿಗಳು ಹೇಳಿದಂತೆ ಕೇಳಬೇಕು, ಮಗದೊಂದು ಕಡೆ ಜನಸಾಮಾನ್ಯರ ಬೈಗುಳ ತಿನ್ನಬೇಕು. ಒಟ್ಟಾರೆ ಗ್ರಾಮ ಆಡಳಿತ ಅಧಿಕಾರಿಗಳ ಕೆಲಸ ಅಂದರೆ ಕಲ್ಲು ಮುಳ್ಳಿನ ಹಾದಿ ತರಹ.

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆಯಂತೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ರಾಜ್ಯವ್ಯಾಪಿ ಮುಷ್ಕರ ನಡೆಸಿತ್ತು. ಅವತ್ತು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಪರಿಣಾಮ ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಆದರೆ ಸರಕಾರ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸದ ಕಾರಣ ಫೆಬ್ರವರಿ 10 ರಿಂದ ಎಲ್ಲಾ ತಾಲೂಕು ಕೇಂದ್ರದ ಮುಂಭಾಗದಲ್ಲಿ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಎರಡನೇ ಹಂತದ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರಕ್ಕೆ ಕರೆ ಕೊಟ್ಟು ವಾರ ಕಳೆದರೂ ರಾಜ್ಯ ಸರಕಾರವಾಗಲಿ, ಕಂದಾಯ ಸಚಿವರಾಗಲಿ ಆಡಳಿತ ಅಧಿಕಾರಿಗಳ ಸಂಕಷ್ಟಕ್ಕೆ ಮಿಡಿಯದಿರುವುದು ದುರಂತ ಅನ್ನದೇ ವಿಧಿಯಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ನಿಜವಾಗಿ ತೊಂದರೆಗೊಳಗಾಗುತ್ತಿರುವುದು ಜನಸಾಮಾನ್ಯರು. ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ನೆನೆಗುದಿಗೆ ಬಿದ್ದಿದೆ.

ಅಷ್ಟಕ್ಕೂ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿರುವುದು ಸರಕಾರ ಈಡೇರಿಸಲಾಗದಂತಹ ಕೆಲಸವೇನಲ್ಲ. ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿಗಳಿಗೆ (ಶಾಸಕರುಗಳಿಗೆ) ದೂರವಾಣಿ ಬಿಲ್ಲು, ಆರೋಗ್ಯ ಖರ್ಚು, ಪ್ರಯಾಣ ಭತ್ಯೆ, ವಾಸಿಸಲು ಸುಸಜ್ಜಿತ ಮನೆ ಎಲ್ಲವೂ ಇವೆ. ಆದರೆ ಸರಕಾರದ ಬೊಕ್ಕಸ ತುಂಬಿಸುತ್ತಿರುವ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯನ್ನೊಮ್ಮೆ ನೋಡಿದರೆ ಗೊತ್ತಾಗುತ್ತದೆ. ರಾಜ್ಯ ಎಷ್ಟು ಅಭಿವೃದ್ಧಿಯ ಪಥದತ್ತ ಸಾಗಿದೆ ಎಂಬುದು. ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವಂತಹ ಹೆಚ್ಚಿನ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳಿವೆ. ಜನಸಾಮಾನ್ಯರು ಕೂಡ ಕಚೇರಿಗೆ ಹೋಗಲು ಭಯಪಡುವಂತಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿರುವುದರ ಪ್ರಮುಖ ಬೇಡಿಕೆಗಳಲ್ಲಿ ಇದು ಕೂಡ ಒಂದು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿಯನ್ನು ಸರಕಾರ ಕಲ್ಪಿಸಲಿ, ಉತ್ತಮ ಗುಣಮಟ್ಟದ ಟೇಬಲ್, ಚಯರ್, ಅಲ್ಮೆರಾ ಒದಗಿಸಲಿ ಹಾಗೂ ಪ್ರಿಂಟರ್, ಸ್ಕ್ಯಾನರ್, ಲ್ಯಾಪ್ ಟಾಪ್ ಒದಗಿಸಲಿ ಎಂಬುದು. ಇದು ಮೂಲಭೂತ ಸೌಲಭ್ಯವಾಗಿದ್ದು, ಪ್ರತಿಯೊಂದು ಶಾಸಕರ ಜವಾಬ್ದಾರಿಯೂ ಆಗಿದೆ. ಆದರೆ ಈವರೆಗೂ ಆಳಿದ ಸರಕಾರಗಳು ಈವರೆಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಿಸದಿರುವುದು ವಿಪರ್ಯಾಸ.

ಇನ್ನು ಗ್ರಾಮ ಆಡಳಿತ ಅಧಿಕಾರಿಗಳ ಸೇವೆ ವ್ಯಾಫ್ತಿ ಮೀರಿ ಮಾಡಬೇಕಾಗಿದೆ. ಹೊಸ ಹೊಸ ಗಣತಿಗಳು, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರೆ ಅದನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಗ್ರಾಮ ಆಡಳಿತ ಅಧಿಕಾರಿಗಳ ಹೆಗಲಿಗೆ. ಒಂದೆಡೆ ಕಂದಾಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು, ಇನ್ನೊಂದೆಡೆ ಸರಕಾರದ ಹೆಚ್ಚುವರಿ ಕಾರ್ಯಗಳನ್ನು ಇವರೇ ಮಾಡಬೇಕಿದೆ. ಏನಾದರೂ ತಪ್ಪು ಸಂಭವಿಸಿದರೆ ತಲೆದಂಡ ಕೂಡ ಇವರದ್ದೇ. ನಿರಂತರವಾಗಿ ಸರಕಾರಗಳು ಗ್ರಾಮ ಆಡಳಿತ ಅಧಿಕಾರಿಗಳನ್ನು ದುಡಿಸಿಕೊಳ್ಳುತ್ತಿದೆ. ಆದರೆ ಸೌಲಭ್ಯ ನೀಡುತ್ತಿಲ್ಲ. ಹೊಸದಾಗಿ ನಿಯುಕ್ತಿಗೊಂಡ ಗ್ರಾಮ ಆಡಳಿತ ಅಧಿಕಾರಿಗಳನ್ನು ಮೇಲಾಧಿಕಾರಿಗಳು ತಾಲೂಕು ಮಟ್ಟದ ಕೆಲಸಕ್ಕೆ ನಿಯೋಜಿಸುತ್ತಾರೆ. ಇದರಿಂದಾಗಿ ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳ ಕೊರತೆ ಉಂಟಾಗುತ್ತಿದೆ. ಕನಿಷ್ಠ ಮೂರು ಪಂಚಾಯತ್ ವ್ಯಾಪ್ತಿಯ ಜವಬ್ದಾರಿ ಹೊರಬೇಕಾದ ಸನ್ನಿವೇಶ ಉದ್ಭವಿಸಿದೆ. ಒಂದು ಪಂಚಾಯತ್ ವ್ಯಾಪ್ತಿಯನ್ನು ನಿಭಾಯಿಸುವುದೇ ಕಷ್ಟ. ಹಾಗಿರುವಾಗ ಪ್ರಭಾರಿಯಾಗಿ ಹೆಚ್ಚುವರಿಯಾಗಿ ನೇಮಕ ಮಾಡುವುದರಿಂದ ಯಾಂತ್ರಿಕ ರೀತಿಯಲ್ಲಿ ಕೆಲಸ ಮಾಡುವಂತೆ ಆಗಿದೆ.

ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಸರಕಾರ ನಿಯಮವನ್ನು ಬದಲಾಯಿಸಿದ್ದು, ಇದರಿಂದಾಗಿ ಒಂದು ಜಿಲ್ಲೆಯಲ್ಲಿ ಕೆಲಸ ಮಾಡಿದವರು ಇನ್ನೊಂದು ಜಿಲ್ಲೆಗೆ ವರ್ಗಾವಣೆಯಾಗಲು ಸಾಧ್ಯವಿಲ್ಲ. ಅಂತರ್ ಜಿಲ್ಲಾ ವರ್ಗಾವಣೆಯನ್ನು ಹಿಂಪಡೆಯಲಾಗಿದೆ. ಇದು ಗ್ರಾಮ ಆಡಳಿತ ಅಧಿಕಾರಿಗಳ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಕೌಟುಂಬಿಕ ಸಮಸ್ಯೆ, ಮಕ್ಕಳ ಲಾಲನೆ ಪಾಲನೆ, ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ ಗಳಿಗೆ ಕಾರಣವಾಗಿದೆ. ಸರಕಾರ ಕೆ.ಸಿ.ಎಸ್.ಆರ್ ನಿಯಮದಲ್ಲಿ ಬದಲಾವಣೆ ತಂದು ಅಂತರ್ ಜಿಲ್ಲಾ ವರ್ಗಾವಣೆ ಜಾರಿಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನು ಸ್ಥಳೀಯ ಮಟ್ಟದಲ್ಲಿ ಸೇವೆ ಸಲ್ಲಿಸುವುದರಿಂದ ರಕ್ಷಣೆ, ಪ್ರಯಾಣ ಭತ್ಯೆ, ಹೆಚ್ಚುವರಿಯಾಗಿ ನೀಡಿರುವ ಕೆಲಸವನ್ನು ಕಡಿತಗೊಳಿಸಿ ಆಯಾಯ ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸಲು ಆದೇಶಿಸುವಂತೆ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಕಳೆದ ಒಂದು ವಾರಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

ಸರಕಾರ, ಕಂದಾಯ ಸಚಿವರು ಗ್ರಾಮ ಆಡಳಿತ ಅಧಿಕಾರಿಗಳ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡಬೇಕಾಗಿದೆ. ಇವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕಿದೆ. ಕಂದಾಯ ಸಚಿವರೇ ಇನ್ನಾದರೂ ಕಣ್ಣು ತೆರೆಯಲಿ.