ಫಿತ್ರ್ ಝಕಾತಿನ ತತ್ವ ಮತ್ತು ಸಿದ್ಧಾಂತಗಳ ಬೆಳಕಿನಲ್ಲಿ ಅವುಗಳ ವಿತರಣೆಯಲ್ಲಿ ಸುಧಾರಿತ ಕ್ರಮವೊಂದರ ಅವಶ್ಯಕತೆ ಇದೆಯೇ.? ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ವಿಶೇಷ ಸುದ್ದಿ

✍️. ಅಶ್ಫಕ್ ಅಹ್ಮದ್ ಕಾಟಿಪಳ್ಳ

ಫಿತ್ರ್ ಝಕಾತಿನ ತತ್ವ ಮತ್ತು ಸಿದ್ಧಾಂತಗಳ ಬೆಳಕಿನಲ್ಲಿ ಅವುಗಳ ವಿತರಣೆಯಲ್ಲಿ ಸುಧಾರಿತ ಕ್ರಮವೊಂದರ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಕಾಲ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಫಿಕ್ಹ್ ಗಳ ಪರಿಷ್ಕರಣೆ ಮತ್ತು ಸುಧಾರಣೆಯನ್ನು ಧಾರ್ಮಿಕ ಪಂಡಿತರು ಕೂಲಂಕುಷವಾಗಿ ಸಂಶೋದಿಸಿ ಸಮುದಾಯದ ಒಳಿತಿಗಾಗಿ ಯಾರದ್ದೆ ಮೂಲಾಜಿಲ್ಲದೆ ಧೀನಿ ಕಾರ್ಯವನ್ನು ನಿರ್ವಹಿಸಬೇಕಾಗಿದೆ.

ಧಾರ್ಮಿಕ ವಿದ್ವಾಂಸರು ತಮ್ಮ ಸುತ್ತಲಿನ ವಾಸ್ತವಗಳಿಗೆ ಪ್ರತಿಕ್ರಿಯೆಯಾಗಿ ನೀಡುವ ಕೆಲವೊಂದು ತೀರ್ಪುಗಳನ್ನು ನಾವು ಕಂಡುಕೊಂಡಿದ್ದೇವೆ, ಈ ಫತ್ವಾಗಳಲ್ಲಿ ಕೆಲವು ಬಳಕೆಯಲ್ಲಿಲ್ಲ, ಏಕೆಂದರೆ ಅವುಗಳು ಬೇರೆ ಪರಿಸ್ಥಿತಿ ಮತ್ತು ಸನ್ನಿವೇಶಗಳಿಗೆ ಸೇರಿದವುಗಳು. ಕೆಲವು ಮಾಗಿದ ಕೆಲವು ಇನ್ನೂ ಪಕ್ವವಾಗಿಲ್ಲದಂತವುಗಳು ..!!!

ನಿಜವಾಗಿ ದಾನಗಳು (ಝಕಾತ್) ಇರುವುದು – ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹನು ವಿಧಿಸಿರುವ ಕಡ್ಡಾಯ ನಿಯಮ. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
(ಪವಿತ್ರ ಕುರ್ ಆನ್ 9:66)

ಇಬ್ನು ಅಬ್ಬಾಸ್ ಅವರಿಂದ ವರದಿಯಾಗಿದೆ. “ಉಪವಾಸ ಮಾಡಿದ ವ್ಯಕ್ತಿಯು ಏನಾದರೂ ವ್ಯರ್ಥ ಮಾತು ಅಥವಾ ಅಶ್ಲೀಲ ಭಾಷೆಯನ್ನೇನಾದರೂ ಆಡಿದ್ದಿದ್ದರೆ ಅದರ ಪರಿಹಾರಾರ್ಥ ಮತ್ತು ಬಡವರಿಗೆ ಆಹಾರ ನೀಡಲು ಫಿತ್ರ್ ಝಕಾತನ್ನು ಕಡ್ಡಾಯ ಗೊಳಿಸಲಾಗಿದೆ. ಈದ್ ನಮಾಜಿಗಿಂತ ಮುಂಚೆ ಪಾವತಿಸಿದರೆ ಅದು ಸ್ವೀಕೃತ ಝಕಾತ್ ಆಗಿದೆ, ನಂತರ ನೀಡಿದರೆ ಅದು ಕೇವಲ (ಸದಕ) ದಾನವಾಗಿದೆ…”(ಅಬೂ ದಾವೂದ್)

ತೇಜೋಮಯವಾದ ಕುರ್ ಆನ್ ಮತ್ತು ಹದೀಸಿನ ಆಶಯಗಳು ಫಿತ್ರ್ ಝಕಾತಿನ ಫಲಾನುಭವಿಗಳನ್ನು ಈ ಕಾಲಘಟ್ಟದಲ್ಲಿ
ಸಂಶೋಧನೆಗೆ ಒಳಪಡಿಸಲು ಪ್ರೇರೇಪಿಸುತ್ತದೆ. ಇದೀಗ ಪವಿತ್ರ ಮಾಸ ರಂಜಾನಿನ ಹೊಸ್ತಿಲಲ್ಲಿರುವ ನಮಗೆ, ಉಪವಾಸ ಹಿಡಿದು ಫಿತ್ರ್ ಝಕಾತ್ ನೀಡಿ ಕೃತಾರ್ಥರಾಗುವ ಸಮಯ ಮತ್ತೊಮ್ಮೆ ಬಂದಿದೆ. ಚಿಂತಿಸುವ ಮಂದಿಗೆ ಫಿತ್ರ್ ಝಕಾತಿನ ವಿತರಣೆಯಲ್ಲಿ ಕೆಲವೊಂದು ಮೂಲಭೂತ ಪ್ರಶ್ನೆಗಳು ಕುರ್ ಆನ್ ಮತ್ತು ಹದೀಸಿನ ಉಪದೇಶದ ಬೆಳಕಿನಲ್ಲಿ ಉದ್ಭವಿಸುವುದು ಸಹಜವಾಗಿದೆ.

ವಾಸ್ತವದಲ್ಲಿ ಫಿತ್ರ್ ಝಕಾತ್, ಹಬ್ಬದ ದಿವಸ ಯಾರೂ ಹಸಿದಿರಬಾರದೆoಬ ಉದಾತ್ತ ತತ್ವದೊಂದಿಗೆ ಪ್ರತಿಷ್ಠಾಪಿಸಲ್ಪಟ್ಟಿದೆ. ಹದೀಸ್ ಪ್ರಕಾರ ಈದ್ ನಮಾಜಿಗೆ ಮುಂಚೆ ನೀಡಿದರೆ ಮಾತ್ರ ಝಕಾತ್ ಎಂದೂ.. ನಂತರ ನೀಡಿದರೆ ಸದಕ ಎಂದು ಘೋಷಿಸಿದೆ. ಬಹುತೇಕ ಫಿತ್ರ್ ಝಕಾತಿಗೆಂದು ನೀಡಲ್ಪಟ್ಟ (ಅಯಾ ಪ್ರದೇಶಕ್ಕೆ ಅನುಗುಣವಾಗಿ) ಅಕ್ಕಿ ಹಬ್ಬದ ಊಟಕ್ಕೆ ಬಳಕೆಯಾಗದೆ ನಂತರದ ದಿನಗಳ ಸಾಮಾನ್ಯ ಊಟಕ್ಕೆ ಉಪಯೋಗವಾಗುವುದು ಅನುಭವವೇದ್ಯವಾಗಿದೆ. ಹೀಗೆ ನೀಡಲ್ಪಟ್ಟ ಅಕ್ಕಿಯ ಪಾತ್ರವು ಝಕಾತ್ ವ್ಯಾಪ್ತಿಗೆ ಬಾರದೆ ಸದಕಾದ ವ್ಯಾಪ್ತಿಗೆ ಬರುವುದರಿಂದ ಫಿತ್ರ್ ಝಕಾತ್ ಸಂದಾಯದ ಋಣ ಬಾಕಿಯಾದಂತಾಗಬಹುದಲ್ಲವೇ.(ಈ ವಿಷಯಕ್ಕೆ ಸಂಬಂಧಿಸಿ ಧಾರ್ಮಿಕ ಪಂಡಿತರು ಸ್ಪಷ್ಟಣೆ ನೀಡಬೇಕಾಗಿದೆ) ಆದುದರಿಂದ ಅದನ್ನು ವಿತರಿಸುವ ನಮ್ಮ ಕ್ರಮ ಮತ್ತು ಅದನ್ನು ಪಡೆಯುವ ವರ್ಗದ ಬಗ್ಗೆ ಸಂಶೋಧನೆಯೊಂದು ಅತ್ಯಾವಶ್ಯಕವಾಗಲೂಬಹುದು.

ಶರೀಯತ್ ಮತ್ತು ಫಿಕ್ಹ್ ನಡುವೆ ಆಗಾಧವಾದ ವ್ಯತ್ಯಾಸವಿದೆ. ಶರೀಯತ್ ಎಂದರೆ ಅಲ್ಲಾಹು ಮತ್ತು ರಸೂಲರ ಮೂಲಕ ಲಭಿಸಿರುವ ಜೀವನ ಕ್ರಮದ ಮಾರ್ಗದರ್ಶನವಾಗಿದೆ. ಶರೀಯತ್ತನ್ನು ಎಂದೂ ಬದಲಾಯಿಸಲಾಗದು. ಆದರೆ ಶರೀಯತ್ತನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಫಿಕ್ಹ್ ನಿಯಮಗಳ ಸುಧಾರಣೆ, ಪರಿಷ್ಕರಣೆ ಕಾಲದ ಬೇಡಿಕೆಯಾಗಿರುತ್ತದೆ. ಸುಧಾರಣೆ ಮತ್ತು ಪರಿಷ್ಕರಣೆಯ ಪ್ರಸ್ತಾವನೆಗೆ ಬಹುತೇಕ ಮಂದಿ ವಿವಾದ ಮತ್ತು ಆಕ್ಷೇಪವನ್ನು ತರುವುದಿದೆ. ಕಾಲ, ಕಾಲದ ಪರಿಸ್ಥಿತಿಗಳಿಗನುಗುಣವಾಗಿ ಕರ್ಮ ಶಾಸ್ತ್ರಗಳ ನಿಯಮಗಳ ಪರಿಷ್ಕರಣೆ ಮತ್ತು ಸುಧಾರಣೆಗೆ ಇಸ್ಲಾಮ್ ಅನುಮತಿಸುತ್ತದೆ (ಅನುಮತಿಸಿದೆ) ಎಂಬುವುದು ವಾಸ್ತವಿಕತೆಯಾಗಿದೆ.

ಫಿತ್ರ್ ಝಕಾತ್ ಕಡ್ಡಾಯವಾಗಿ ವಿತರಿಸಬೇಕು ಎಂಬುವುದು ಶರೀಯತ್ ಆಗಿದೆ, ಅದರ ವಿತರಣೆಯ ಕ್ರಮವು ಫಿಕ್ಹ್ ಆಗಿದೆ.ಸಹಾಬಿಗಳ ಮತ್ತು ಖುಲಫಾ- ಉರ್-ರಾಶಿದೀನ್ ಗಳ ಕಾಲದ ಹಲವಾರು ಸುಧಾರಣೆ ಮತ್ತು ಪರಿಷ್ಕರಣೆ ಇದಕ್ಕೆ ಪುರಾವೆಯಾಗಿದೆ.

ಆಯಾ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಆಹಾರ ಧಾನ್ಯವೇ ಫಿತ್ರ್ ಝಕಾತಿನ ವಸ್ತು ಆಗಬೇಕಿoದಿರುವಾಗ, ಹಬ್ಬದ ದಿನದಂದು ಎಲ್ಲಾ ಮನೆಗಳಲ್ಲಿ ಬಾಡೂಟ ಸಿದ್ಧಗೊಳ್ಳುವಾಗ ಸಾಮಾನ್ಯ ಅನ್ನದ (ಕಜೆ)ಅಕ್ಕಿಯ ವಿತರಣೆ ಪ್ರಶ್ನಾರ್ಹವಾಗುತ್ತದೆ ಮತ್ತು ಆ ಬಗ್ಗೆ ಸುಧಾರಣೆಗೆ ದಾರಿ ಮಾಡಿ ಕೊಡುತ್ತದೆ.(ಕೆಲವರು ಕಡಿಮೆ ಬೆಲೆಯ ರೇಶನ್ ಅಕ್ಕಿಯನ್ನು ವಿತರಿಸುವವರು ಇದ್ದಾರೆ)

ಅಂದು ಯಾರೂ ಹಸಿದಿರಬಾರದೆoಬ ಧ್ಯೇಯವನ್ನಿಟ್ಟು, ತನ್ನ ಮನೆಯಲ್ಲಿ ಬಾಡೂಟ ತಯಾರಿಸಿ ಬಡವನ ಮನೆಗೆ ಸಾಮಾನ್ಯ ಅನ್ನದ ಅಕ್ಕಿಯ ವಿತರಣೆಮಾಡುವುದು, ಕುರ್ ಆನ್ ಪ್ರತಿಪಾದಿಸುವ “ತನಗೆ ಬಯಸಿದ್ದು ಇತರರಿಗೆ ಬಯಸುವ ತನಕ ನಿನ್ನ ವಿಶ್ವಾಸ (ಈಮಾನ್) ಪೂರ್ತಿಯಾಗದು” ಎಂಬ ತತ್ವಕ್ಕೆ ವಿರುದ್ಧವಾಗಿದೆ.

ಫಿತ್ರ್ ಝಕಾತಿನ ಪಾವತಿ ಈದ್ ನಮಾಝಿಗಿಂತ ಮುಂಚಿತವಾಗಿ ನೀಡಬೇಕು ಎಂಬ ತತ್ವವು ಅಂದು ಬಡವರ ಮನೆಯಲ್ಲೂ ಹಬ್ಬದೂಟ ಸಿದ್ಧವಾಗಬೇಕು ಎಂಬುದನ್ನು ಸೂಚಿಸುತ್ತದೆ. ಅದನ್ನು ಪಡೆಯಬೇಕಾದವರು ಮುಂದಿನ ಒಂದು ದಿನಕ್ಕೆ ಬೇಕಾಗುವ ಸಂಪೂರ್ಣ ಆಹಾರ ಧಾನ್ಯ ತನ್ನ ಬಳಿ ಇರದ ಬಡವರಾಗಿರಬೇಕು ಎಂಬುವುದು ಇನ್ನೊಂದು ತತ್ವವಾಗಿದೆ. ಆದರೆ ಬಹುತೇಕ ಅಕ್ಕಿಗಳು ಅಂದು ವಿತರಣೆಯಾಗುವುದು ತುಪ್ಪದ ಅನ್ನ ಅಥವಾ ಬಿರಿಯಾನಿ ಮಾಡಿ ಉಣ್ಣುವ ಮತ್ತು ಮುಂದಿನ ದಿನಗಳಿಗೆ ಸಂಪೂರ್ಣ ಆಹಾರ ಸಾಮಾಗ್ರಿಗಳಿರುವ ಮನೆಯವನಿಗೆ ಎಂಬುದನ್ನು ಗಮನಿಸಬೇಕಾಗಿದೆ.

ಫಿತ್ರ್ ಝಕಾತಿನ ಅಕ್ಕಿ ಅನಿಯಮಿತವಾಗಿ ಸಂಗ್ರಹವಾಗುವ ಕೆಲವು ಮನೆಯವರು ತಮಗೆ ಅಕ್ಕಿಯ ಬದಲಿ ಹಣ ನೀಡುವಂತೆ ಕೇಳಿದ ಕೆಲವು ಪ್ರಮೇಯಗಳು ಇವೆ.

ಅರ್ಹ ಬಡ ಮತ್ತು ನಿರ್ಗತಿಕ ಕುಟುಂಬವನ್ನು, ಬಹಳಷ್ಟು ಪೂರ್ವಭಾವಿ ಸಿದ್ಧತೆಯೊಂದಿಗೆ ಗುರುತಿಸಿ, ಫಿತ್ರ್ ಝಕಾತನ್ನು, ಹಬ್ಬದಂದು ವ್ಯಾಪಕವಾಗಿ ಬಳಸಲ್ಪಡುವ ತುಪ್ಪದ ಅನ್ನದ ಅಕ್ಕಿ ಅಥವಾ ಬಿರಿಯಾನಿ ಅಕ್ಕಿಯೊಂದಿಗೆ ಹಬ್ಬದೂಟ ತಯಾರಿಕೆಗೆ ಬೇಕಾದ ಇತರ ಪದಾರ್ಥಗಳನ್ನು ದಾನವಾಗಿ ನೀಡುವ ಮೂಲಕ ಫಿತ್ರ್ ಝಕಾತಿಗೆ ಜೀವ ತುಂಬಬೇಕಾಗಿದೆ.

ಈ ನಿಟ್ಟಿನಲ್ಲಿ ವಿದ್ವಾಂಸರು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಕಾಲಾನುಸಾರ ಸುಧಾರಿತ ಮತ್ತು ಪರಿಷ್ಕೃತ ಫಿತ್ರ್ ಝಕಾತ್ ವಿತರಣೆಯ ಬಗ್ಗೆ ಧರ್ಮ ವಿಧಿ (ಫತ್ವ) ನೀಡಬೇಕಾದ ಅವಶ್ಯಕತೆ ಇದೆ.