ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕುಟುಂಬಗಳಿಗೆ ಕೊಳವೆ ಬಾವಿ ಕೊಡುಗೆ ನೀಡಿದ ಜಮಾತೇ ಇಸ್ಲಾಂ ಹಿಂದ್ ಸಂಘಟನೆ.

ಕರಾವಳಿ

ಸಾಮಾಜಿಕ ಕಾರ್ಯಕರ್ತನ ಸೇವೆಗೆ ಕೊಳ್ನಾಡು ಜನತೆಯ ಶಹಬ್ಬಾಸ್.

ವಿಟ್ಲ : ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕೊಳ್ನಾಡು ಗ್ರಾಮದ ಅರುವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಜೆ.ಐ.ಹೆಚ್. ಸಂಘಟನೆಯ ಕಾರ್ಯಕರ್ತರೊಬ್ಬರು ಕೊಳವೆ ಬಾವಿ ಕೊರೆಸಿ ಹೃದಯವಂತಿಕೆ ಮೆರೆದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಸೆರ್ಕಳ ಪರಿಸರದ ಸುಮಾರು ಅರುವತ್ತು ಮನೆಗಳಿಗೆ ಈವರೆಗೆ ಪಂಚಾಯತು ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಕಳೆದ ಆರು ತಿಂಗಳಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಕಾರಣ ಪರಿಸರದ ಕುಟುಂಬಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು.

ಸರ್ಕಾರದಿಂದ ಹೊಸದಾಗಿ ಕೊಳವೆ ಬಾವಿ ತೆಗೆಸಲು ಸ್ಥಳೀಯರು ಮನವಿ ಮಾಡಿದ್ದರೂ ಅದೆಲ್ಲವೂ ಮಂಜೂರಾತಿ ಆಗಬೇಕಿದ್ದರೆ ಹಲವು ತಿಂಗಳುಗಳ ಕಾಲ ಕಾಯಬೇಕಾಗಿದೆ‌. ಪಂ.ಕೊಳವೆ ಬಾವಿಯ ಪರಿಸರದಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ಕೊಳವೆ ಬಾವಿಯಿಂದ ದಿನಕ್ಕೆ ಎರಡು ಗಂಟೆ ನೀರು ಕೊಡುವಂತೆ ವಿನಂತಿಸಿದ್ದರೂ ರಾಜಕೀಯ ನುಸುಳಿದ ಕಾರಣ ಆತ ನಿರಾಕರಿಸಿದ್ದಾನೆ. ಇದರಿಂದಾಗಿ ಪರಿಸರದ ನಿವಾಸಿಗಳು ನೀರಿಗಾಗಿ ಒದ್ದಾಡುವಂತಾಯಿತು.

ಇದರ ಮಾಹಿತಿ ಪಡೆದ ದ.ಕ.ಜಿಲ್ಲಾ ಜಮಾತೇ ಇಸ್ಲಾಂ ಹಿಂದ್ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ ಎಂಬವರು ಸ್ಥಳಕ್ಕಾಗಮಿಸಿ ಸ್ಥಳೀಯರ ಜೊತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿ ಈ ವಿಚಾರವನ್ನು ಸಂಘಟನೆಯ ಜಿಲ್ಲಾ ಮುಖಂಡರಿಗೆ ತಿಳಿಸಿ ತಕ್ಷಣವೇ ಸಂಘಟನೆಯ ಸಾಮಾಜಿಕ ಕಾರ್ಯಗಳ ಅನ್ವಯ ಬಿಡುಗಡೆ ಮಾಡಿಸಿದರು‌. ಶಿವರಾತ್ರಿಯಂದು ಬೆಳಗ್ಗೆ ಹೊಸದಾಗಿ ಕೊಳವೆ ಬಾವಿ ತೆಗೆದು ಸಂಘಟನೆಯ ಸಾಮಾಜಿಕ ಕಾರ್ಯಕ್ಕೆ ಭಗವಂತನೂ ಮಿಡಿದಂತಾಗಿದೆ.

ಸ್ಥಳೀಯರು ಅಲ್ಪಸ್ವಲ್ಪ ಕುಡಿಯಲು ನೀರು ಸಿಕ್ಕರೆ ಸಾಕೆಂಬ ಆತಂಕದ ನಡುವೆಯೇ ಭಗವಂತನ ಇಚ್ಛೆಯಿಂದ ಮೂವತ್ತು ಅಡಿ ಎತ್ತರಕ್ಕೆ ನೀರು ಚಿಮ್ಮುವ ಮೂಲಕ ಪರಿಸರದ ಅಷ್ಟೂ ಜನರ ಕನಸು ನನಸಾಗಿದೆ. ನೆರವೇರಿದೆ ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ, ಪತ್ನಿ ಅಸ್ಮಾ ಹಸೈನಾರ್ (ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ) ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು, ಪಂ. ಸದಸ್ಯರಾದ ಪದ್ಮನಾಭ ಕುಳಾಲು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಇಂತಿಯಾಝ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಹಸೈನಾರ್ ಕಾರ್ಯಕ್ಕೆ ಸಾರ್ವಜನಿಕರ ಅಭಿನಂದನೆ.

ಜಮಾತೇ ಇಸ್ಲಾಂ ಹಿಂದ್ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಮಾಧ್ಯಮ ಜೊತೆ ಮಾತನಾಡುತ್ತಾ, ಜಿಲ್ಲೆಯಾದ್ಯಂತ ಈವರೆಗೆ ಇದೇ ರೀತಿಯ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಸಾರ್ವಜನಿಕ ಕೊಳವೆ ಬಾವಿ ತೆಗೆದು ಸಂಘಟನೆಯು ಸಾಮಾಜಿಕ ಕಾರ್ಯ ಮಾಡಿದೆ. ವಿಟ್ಲ ಪಡ್ನೂರು, ಕೊಳ್ನಾಡು, ಮಂಚಿ, ಇರಾ ಮತ್ತು ಬೋಳಂತೂರು ಗ್ರಾಮಗಳಲ್ಲಿ ಈವರೆಗೆ ಹದಿನಾರು ಕೊಳವೆ ಬಾವಿಗಳನ್ನು ಕೊರೆದು ಪಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಸಂಪೂರ್ಣ ಖರ್ಚು-ವೆಚ್ಚಗಳ ಜವಾಬ್ದಾರಿಯನ್ನು ಸಂಘಟನೆಯೇ ಭರಿಸುತ್ತದೆ. ಅದಲ್ಲದೇ ತೀರಾ ಬಡ ಕುಟುಂಬಗಳಿಗೆ ಈವರೆಗೆ ಜಿಲ್ಲೆಯಾದ್ಯಂತ ಹಲವು ಮನೆಗಳನ್ನು ನೀಡುವ ಮೂಲಕ ಸಂಘಟನೆಯು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು. ಹಸೈನಾರ್ ತಾಳಿತ್ತನೂಜಿ ಅವರ ಸೇವಾ ಕಾರ್ಯಕ್ಕೆ ಹಾಗೂ ಜಿಲ್ಲಾ ಜೆ.ಐ.ಹೆಚ್.ಸಂಘಟನೆಗೆ ಗ್ರಾಮದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.