ರಾಜ್ಯ ಸರಕಾರದಿಂದ ಸೈಬರ್ ಅಪರಾಧ ಕಮಾಂಡ್ ಘಟಕ (CCPU) ಸ್ಥಾಪಿಸಿ ಆದೇಶ

ರಾಜ್ಯ

ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಸಂಬಂಧ ರಾಜ್ಯ ಸರ್ಕಾರ ಬುಧವಾರ ಹೊಸದಾಗಿ ಸೈಬರ್ ಅಪರಾಧ ತಡೆ ಘಟಕವನ್ನು (CCPU) ಸ್ಥಾಪಿಸಿ ಆದೇಶ ಹೊರಡಿಸಿದೆ. ಈ ಮೂಲಕ ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ಘಟಕ ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದ ಅತೀ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ರಾಬರಿ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಸೈಬ‌ರ್ ಅಪರಾಧಗಳು ವರದಿಯಾಗುತ್ತಿವೆ. ದೇಶದ ಮಹಾನಗರಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳಲ್ಲಿ ಶೇ.20ರಷ್ಟು ಸೈಬರ್ ಪ್ರಕರಣಗಳಾಗಿದ್ದು, ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಒಟ್ಟಾರೆಯಾಗಿ 52,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕವು ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಮಂಚೂಣಿಯಲ್ಲಿ ಇರುವುದರಿಂದ ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕವನ್ನು ಸೃಜಿಸುವಂತೆ ಸರ್ಕಾರಕ್ಕೆ ಡಿಜಿಪಿ ಪ್ರಸ್ತಾಪನೆ ಸಲ್ಲಿಸಿದ್ದರು. ಈ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿಸಿದೆ.

ಈ ಘಟಕದ ವ್ಯಾಪ್ತಿಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರುನಾಮಕರಣ ಮಾಡಿ ಒಳಪಡಿಸಲಾಗಿದೆ. ಅಲ್ಲದೆ ಸಿಐಡಿ ಸೈಬರ್ ಹಾಗೂ ಬೆಂಗಳೂರಿನ ಸೈಬರ್ ಠಾಣೆಗಳು ಸೇರಿ ಒಟ್ಟು 45 ಠಾಣೆಗಳು ಇದರ ಅಧೀನಕ್ಕೆ ಬರುತ್ತವೆ.

ಈ ಠಾಣೆಗಳು ಅಬಕಾರಿ ಕಾಯ್ದೆ, ಲಾಟರಿ ನಿಷೇಧ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಸೇರಿದಂತ ಇತರೆ ಕಾಯ್ದೆಗಳಲ್ಲಿ ತನಿಖೆ ನಡೆಸಬಹುದು ಎಂದಿದೆ. ಅಲ್ಲದೆ ಸೈಬರ್ ಕಮಾಂಡ್ ಘಟಕಕ್ಕೆ ನಾಲ್ವರು ಎಸ್ಪಿಗಳು ಸೇರಿದಂತೆ 193 ಅಧಿಕಾರಿ- ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಕೇಂದ್ರ ಸ್ಥಾನ, ವಲಯ ಕಛೇರಿ ಎಂದು ವಿಂಗಡಣೆ ಮಾಡಲಾಗಿದೆ. ವಲಯ ಕಛೇರಿಗಳಿಗೆ ನಾಲ್ಕು ಮಂದಿ ಎಸ್ಪಿಗಳನ್ನು ನೇಮಿಸಲಾಗಿದೆ. ಕೇಂದ್ರ ಸ್ಥಾನಕ್ಕೆ ಇಬ್ಬರು ಡಿವೈಎಸ್ಪಿಗಳು, ಪಿಐ ಇಬ್ಬರು, ಹತ್ತು ಮಂದಿ ಎಚ್ ಸಿ ಸೇರಿ ಕೇಂದ್ರ ಸ್ಥಾನದಲ್ಲಿ ಒಟ್ಟು 59ಮಂದಿ ಮತ್ತು ವಲಯ ಕಛೇರಿಗಳಿಗೆ 134 ಅಧಿಕಾರಿ-ಸಿಬ್ಬಂದಿ ಸೇರಿ ಒಟ್ಟು 193 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಡಿಜಿ-ಐಜಿಪಿ ಅ‍ವರ ಅಧಿಕಾರ ವ್ಯಾಪ್ತಿಯಿಂದ ಸೈಬರ್ ಅಪರಾಧ ತಡೆ ಘಟಕವನ್ನು ಹೊರಗಿಟ್ಟಿರುವ ಸರ್ಕಾರದ ನಿರ್ಧಾರ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಆದೇಶ ತಿದ್ದುಪಡಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.