ಆದಿಲ್ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ಧಯಿ ರಕ್ತಪಿಪಾಸುಗಳು ಕೊಂದೆ ಬಿಟ್ಟರು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮಾಡಿಕೊಂಡು 28 ವರ್ಷದ ಸೈಯದ್ ಆದಿಲ್ ಹುಸೈನ್ ಶಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಲವಾರು ವರ್ಷಗಳಿಂದಲೂ ಪಹಲ್ಗಾಮ್‌ಗೆ ಬರುವ ಪ್ರವಾಸಿಗರಿಗೆ ಕುದುರೆ ಸವಾರಿಯ ಸೇವೆ ನೀಡುತ್ತಿದ್ದರು. ಬೈಸರ್ ವ್ಯಾಲಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರನ್ನು ಸುರಕ್ಷಿತವಾಗಿ ಮರಳಿ ಅವರವರ ಹೋಟೆಲ್‌ಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಏಪ್ರಿಲ್ 22ರಂದೂ ಎಂದಿನಂತೆ ತಮ್ಮ ಕೆಲಸಕ್ಕೆ ಸೈಯದ್ ಹುಸೈನ್ ಆದಿಲ್ ಶಾ ತೆರಳಿದ್ದರು.
ಬೈಸರ್ ವ್ಯಾಲಿಯ ಕಡೆಗೆ ಹೊರಟಿದ್ದ ಇವರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಗುಂಡಿನ ಸದ್ದು ಕೇಳಿ ಬಂದಿತ್ತು. ಅಲ್ಲದೆ ತಕ್ಷಣವೇ ಅಲರ್ಟ್ ಆಗಿದ್ದ ಅವರು ಪ್ರವಾಸಿಗರನ್ನು ರಕ್ಷಿಸಲು ತಕ್ಷಣ ಎಚ್ಚರಿಕೆ ನೀಡುತ್ತಾರೆ. ಅಷ್ಟರಲ್ಲಿಯೇ ಇವರ ಬಳಿ ಬಂದ ಉಗ್ರ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಮುಂದಾಗುತ್ತಾನೆ. ಆಗ ಧೈರ್ಯದಿಂದ ಮುನ್ನುಗ್ಗಿ ಅವನ ಕೈಯಿಂದ ಗನ್ ಕಿತ್ತುಕೊಳ್ಳಲು ಹೋರಾಡಿದ್ದಾರೆ. ಹಲವು ಬಾರಿ ಉಗ್ರನೊಂದಿಗೆ ಕಾದಾಡಿದ್ದ ಸೈಯದ್ ಹುಸೈನ್ ಆದಿಲ್ ಶಾ ಕೊನೆಗೆ ಆ ರಣಹೇಡಿಯ ಗುಂಡಿಗೆ ಬಲಿಯಾಗಿದ್ದಾರೆ. ವಯಸ್ಸಾದ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಆದಿಲ್ ಒಬ್ಬರೇ ಆಧಾರವಾಗಿದ್ದರು. ಆದೆ ಇದೀಗ ಆ ಕುಟುಂಬ ಭವಿಷ್ಯದ ಬಗ್ಗೆ ಆತಂಕ ಮೂಡಿದೆ. ಮಗನನ್ನು ಕಳೆದುಕೊಂಡು ದುಖಃದಲ್ಲಿರುವ ಆದಿಲ್ ಅವರ ತಂದೆ ಸೈಯದ್ ಹೈದರ್ ಶಾ ಕಣ್ಣೀರಾಗಿದ್ದಾರೆ.ಈ ಪೈಶಾಚಿಕ ಕೃತ್ಯಕ್ಕೆ ಕಾರಣರಾದವರನ್ನು ಸುಮ್ಮನ್ನೇ ಬಿಡಬಾರದು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಮಗೆ ಇದ್ದ ಏಕೈಕ ಆಧಾರವೇ ಅವನಾಗಿದ್ದನು. ಕುದುರೆ ಸವಾರಿ ಮಾಡಿ ದಿನಕ್ಕೆ ಬರುತ್ತಿದ್ದ 300 ರಿಂದ 400 ರೂಪಾಯಿ ದುಡಿಮೆಯಲ್ಲಿ ನಮ್ಮ ಕುಟುಂಬ ಸಾಕುತ್ತಿದ್ದನು. ಈಗ ನಮಗೆ ಸಹಾಯ ಮಾಡಲು ಬೇರೆ ಯಾರೂ ಇಲ್ಲ ಎಂದು ಮೃತ ಸೈಯದ್ ಆದಿಲ್ ಶಾ ತಾಯಿ ಮಾಧ್ಯಮಗಳೆದುರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
ಇನ್ನೂ ಮೃತ ಅದಿಲ್ ಅಂತ್ಯಕ್ರಿಯೆಯಲ್ಲಿ ಖುದ್ದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಅಲ್ಲದೆ ಇಲ್ಲಿಗೆ ಬಂದಿದ್ದ ಅತಿಥಿಗಳನ್ನು ನಾವು ಶವದ ಪೆಟ್ಟಿಗೆಯಲ್ಲಿ ಕಳುಹಿಸುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಹಾಗೆಯೇ ಈ ಆದಿಲ್ ತನ್ನ ಕುಟುಂಬ ನಿರ್ವಹಣೆಗಾಗಿ ದಿನಾಲೂ ದುಡಿಮೆ ಮಾಡುತ್ತಿದ್ದರು. ಕೆಲಸಕ್ಕೆ ಹೋಗಿದ್ದ ಅವರನ್ನು ಪೆಟ್ಟಿಗೆಯಲ್ಲಿ ಮನೆಗೆ ತಂದಿರುವುದು ನನಗೆ ತೀವ್ರ ದುಖಃವಾಗಿದೆ. ಆದರೆ ಈ ಯುವಕನ ಧೈರ್ಯವನ್ನು ನಾವು ಮೆಚ್ಚಬೇಕು, ಉಗ್ರರ ವಿರುದ್ಧ ಆತನ ಸಾಹನ ನಿಜಕ್ಕೂ ನಮಗೆ ಗರ್ವವೆನಿಸುತ್ತದೆ. ಉಗ್ರರ ಕೈಯಲ್ಲಿನ ಗನ್ ಕಿತ್ತುಕೊಳ್ಳಲು ಆತ ಮಾಡಿರುವ ಸಾಹಸವನ್ನು ನಾವು ಗೌರವಿಸಬೇಕು ಎಂದು ಒಮರ್ ಅಬ್ದುಲ್ಲಾ ಆದಿಲ್ ಕುರಿತು ಭಾವಕಾರಾಗಿದ್ದಾರೆ.
ಈ ಕಾಶ್ಮೀರಿ ಮುಸ್ಲಿಂ ಆದಿಲ್ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ದಯಿ ರಕ್ತಪಿಪಾಸುಗಳು ಅವನ ಉಸಿರು ನಿಲ್ಲಿಸುವ ಮೂಲಕ ಅತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿರುವುದು ನಿಜಕ್ಕೂ ಈ ಉಗ್ರರ ವಿರುದ್ಧ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುವಂತೆ ಮಾಡಿದೆ.
