ಗಣಿಗಾರಿಕೆಗೆ ನಡೆಸಲು ರಸ್ತೆ ನಿರ್ಮಾಣಕ್ಕೆ ವಿರೋಧ, ಗಣಿ ಧನಿಯಿಂದ ಜಾಗದ ಮಾಲಿಕನಿಗೆ ಪೈರಿಂಗ್; ಆಸ್ಪತ್ರೆಗೆ ದಾಖಲು

ರಾಜ್ಯ

ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಕನಗಾನಕೊಪ್ಪ ಎಂಬಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್‌ ರವಿ ಎಂಬುವವರ ಮೇಲೆ ಸಕಲೇಶ ಕುಮಾರ್‌ ಎಂಬಾತ ಫೈರಿಂಗ್‌ ಮಾಡಿದ್ದಾನೆ.

ಗುಂಡಿನ ದಾಳಿ ನಡೆಸಿರುವ ಸಕಲೇಶಕುಮಾರ್, ಬಿಜೆಪಿ ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಎನ್ನಲಾಗಿದೆ. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಚಿಕನ್ ರವಿ ಕಾಲಿಗೆ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ.

ಚಿಕ್ಕಬಳ್ಳಾಪುರದ ಕನಗಾನಕೊಪ್ಪದ ಬಳಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಕುಟುಂಬಸ್ಥರಿಂದ ಗಣಿಗಾರಿಕೆ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ. ಗಾಯಾಳು ರವಿಯನ್ನು ಮಂಚೇನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ತಲೆಗೆ ಕಲ್ಲಿನಿಂದ ಹೊಡೆದರು ಎಂಬ ಕಾರಣಕ್ಕೆ ಸಕಲೇಶಕುಮಾರ್‌ ಫೈರಿಂಗ್‌ ಮಾಡಿದ್ದಾನೆ ಎನ್ನಲಾಗಿದೆ. ತಲೆಗೆ ಯಾರೋ ಕಲ್ಲು ಹೊಡೆಯುತ್ತೀರಾ ಎಂದು ಗನ್ ಹಿಡಿದು ಸಕಲೇಶಕುಮಾರ್‌ ಬೆದರಿಸಿದ್ದು, ಸ್ಥಳದಲ್ಲಿದ್ದ ಜನ ಭಯಭೀತರಾಗಿದ್ದಾರೆ. ಇನ್ನು ಗಾಯಾಳು ಚಿಕನ್ ರವಿ ಕಾಲಿಗೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗುಂಡು ಹಾರಿಸಿದ ಸಕಲೇಶಕುಮಾರ್‌ನನ್ನು ಬಂಧಿಸಿದ್ದಾರೆ.

ಗಾಯಾಳು ರವಿಕುಮಾರ್ ಅಸ್ಪತ್ರೆಯಲ್ಲಿ ದಾಖಲಾಗಿದ್ದು, ನಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿತ್ತು. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ, ನಿನ್ನಿಂದಲೇ ಇಷ್ಟೆಲ್ಲಾ ಆಗುತ್ತಿರುವುದು ಎಂದು ಸಕಲೇಶಕುಮಾರ್‌ ಎಂಬಾತ ನನ್ನ ಮೇಲೆ ಗುಂಡು ಹಾರಿಸಿದ್ದಾನೆ. ಆತನ ಮೇಲೆ ನಾವು ಹಲ್ಲೆ ಮಾಡಿಲ್ಲ. ಗಾಳಿಯಲ್ಲಿ ಗುಂಡು ಹಾರಿಸುವಾಗ ಆತ ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಅಧಿಕಾರಿಗಳು ಲಂಚ ಪಡೆದು ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಾರೆ. ದಯವಿಟ್ಟು ಗಣಿಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದ್ದಾರೆ.