ಕೋಮುವಾದಿಯೊಬ್ಬ ತುಳು ಅಕಾಡೆಮಿಯ ಮೆಂಬರ್.! ಮುಸ್ಲಿಂ ದ್ವೇಷಕಾರುವವನಿಗೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಿಂದಲೇ ಅಭಯ.!

ಕರಾವಳಿ

ನೇಮಕಾತಿ ಹಿಂದೆ ಕೈಚಳಕ ತೋರಿಸಿದ್ದೇ ಮಾಜಿ ಸಚಿವರೊಬ್ಬರ ಅತ್ಯಾಪ್ತ ಮಾಜಿ ಬ್ಯಾಂಕ್ ಅಧ್ಯಕ್ಷ.!

ಕರಾವಳಿಯಲ್ಲಿ ಯಾವ ಸರಕಾರ ಅಸ್ತಿತ್ವದಲ್ಲಿದೆ..? ಇಲ್ಲಿ ಅಧಿಕಾರ ನಡೆಸುವವರು ಬಿಜೆಪಿಯವರೋ.? ಕಾಂಗ್ರೆಸ್ಸಿಗರೋ.? ಅನ್ನುವ ಅನುಮಾನ ಪದೇ ಪದೇ ಸೃಷ್ಟಿಯಾಗುತ್ತಲೇ ಇದೆ. ಈ ಹಿಂದೆ ವಿವಿಧ ನಿಗಮಗಳಿಗೆ ನೇಮಕಾತಿ ನಡೆದಿತ್ತು. ನೇಮಕಾತಿಗೊಂಡ ಅರ್ಧದಷ್ಟು ಜನ ಸಂಘಿ ಹಿನ್ನೆಲೆ ಹೊಂದಿದವರಾಗಿದ್ದರು. ತೋರಿಕೆಗೆ ಕೆಲವರು ಕಾಂಗ್ರೆಸ್ ಪಕ್ಷದ ಸದಸ್ಯರಾದರೂ ರಾತ್ರಿಯಾಗುತ್ತಿದ್ದಂತೆ ಬಿಜೆಪಿಯಾಗುವವರ ಸಂಖ್ಯೆಯೇ ಹೆಚ್ಚು. ನಿಷ್ಠಾವಂತ ಕಾಂಗ್ರೆಸ್ಸಿಗರು ನಾಯಕರಿಗೆ ಜೈಕಾರ ಹಾಕಲು, ನಾಯಕರ ಹಿಂದೆ ಮುಂದೆ ಸುತ್ತಾಡುತ್ತಾ ಸೆಲ್ಫಿ ತೆಗೆಯಲು, ಬ್ಯಾನರ್ ಕಟ್ಟಲ್ಲಷ್ಟೇ ಸೀಮಿತರಾಗಿದ್ದಾರೆ. ಕನಿಷ್ಠ ಪಕ್ಷ ಅಂತಹ ಕಾರ್ಯಕರ್ತರನ್ನಾದರೂ ಗುರುತಿಸಿ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಿದ್ದರೆ ಜಿಲ್ಲೆಯಲ್ಲಿ ಪಕ್ಷ ಸ್ವಲ್ಪವಾದರೂ ಉಸಿರಾಡುತ್ತಿತ್ತು. ಆದರೆ ಕಾಂಗ್ರೆಸ್ಸಿನ ನಾ(ಲಾ)ಯಕರೆನಿಸಿಕೊಂಡವರು ಆರ್ಎಸ್ಎಸ್ ಚಿಂತನೆಯ, ಕಟ್ಟರ್ ಕೋಮುವಾದಿಗಳಿಗೆಲ್ಲ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಿ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡಿದೆ.

ಕರಾವಳಿ ಭಾಗದಲ್ಲಿ ಬಹುಸಂಖ್ಯಾತರು ಮಾತನಾಡುವ ಭಾಷೆ ತುಳು. ತುಳು ಭಾಷೆಯ ಅಭಿವೃದ್ಧಿಗಾಗಿ, ತುಳು ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ತುಳು ಸಾಹಿತ್ಯ ಅಕಾಡೆಮಿ ಅನ್ನುವುದಿದೆ. ಇದರ ಅಧ್ಯಕ್ಷರು, ಸದಸ್ಯರಾಗುವವರು ರಾಜಕೀಯ ರಹಿತವಾದರೂ ರಾಜ್ಯದಲ್ಲಿ ಯಾವ ಸರಕಾರ ಇದೆಯೋ ಆ ಪಕ್ಷದ ಪರ ನಿಷ್ಠೆ ಉಳ್ಳವರನ್ನು ಅಕಾಡೆಮಿಗೆ ನೇಮಕಾತಿ ಮಾಡಿಕೊಂಡು ಬಂದಿರುವುದು ಈವರೆಗಿನ ವಾಡಿಕೆ. ಇದೀಗ ತುಳು ಅಕಾಡೆಮಿ ಅಧ್ಯಕ್ಷರಾಗಿರುವವರು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದವರು, ಜನಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ಕೋಮುವಾದದ ವಿರುದ್ಧ ಚಿಂತನೆ ಉಳ್ಳವರಾಗಿದ್ದಾರೆ.

ಆದರೆ ಈ ಅಕಾಡೆಮಿಯ ಸದಸ್ಯರಾಗಿರುವ ಬಂಟ್ವಾಳ ಭಾಗದ ಮುನ್ನೂರಿನ ಕೊಟ್ಟಾರಿ ಎಂಬುವವರು ಸದಾ ಮುಸ್ಲಿಂ ದ್ವೇಷದ ಚಿಂತನೆ ಹೊಂದಿದವರಾಗಿದ್ದು, ತನ್ನ ನಾಟಕದಲ್ಲೂ ಈ ವ್ಯಕ್ತಿ ಸದಾ ಮುಸ್ಲಿಮರ ಬಗ್ಗೆ ಕೀಳಾಗಿ ಚಿತ್ರಿಸುವುದು, ಮುಸ್ಲಿಮರ ವಿರುದ್ಧ ದ್ವೇಷ ಕಾರುವ ನಿಂದನೆ ಪದ ಬಳಸಿರುವುದೆಲ್ಲ ಜಗಜ್ಜಾಹೀರು. ಇಂತಹ ವ್ಯಕ್ತಿಯನ್ನು ತುಳು ಅಕಾಡೆಮಿ ಸದಸ್ಯರಾಗಿ ನೇಮಕ ಮಾಡುವಲ್ಲಿ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರೊಬ್ಬರು ಶಿಫಾರಸು ಮಾಡಿರುವುದು ಇವರದ್ದು ಕಪಟ ಜಾತ್ಯತೀತತೆ ಅಲ್ಲವೇ.?

2022 ರ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯವನ್ನು ತುಳು ಅಕಾಡೆಮಿ ಸದಸ್ಯನಾದ ಕೊಟ್ಟಾರಿ ಎಂಬಾತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಈಗ ಶೇರ್ ಮಾಡುತ್ತಿರುವುದು ಹಿಂದಿನ ಉದ್ದೇಶವಾದರೂ ಏನು.?, ವಿಕ್ರಮ ಪತ್ರಿಕೆ ಎಂಬುವುದು ಆರ್ಎಸ್ಎಸ್ ನ ಮುಖವಾಣಿಯಾಗಿದ್ದು, ಅಕಾಡೆಮಿ ಸದಸ್ಯ ಶೇರ್ ಮಾಡಿರುವ ಸಂಪಾದಕೀಯದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮರನ್ನು ಅತ್ಯಂತ ತುಚ್ಛವಾಗಿ ಬರೆಯಲಾಗಿದ್ದು, ಮುಸ್ಲಿಂ ದ್ವೇಷ ಕಾರುವ ಬರಹಗಳಿವೆ. ಕಾಂಗ್ರೆಸ್ ಸರಕಾರದಿಂದಲೇ ನೇಮಕಗೊಂಡ ತುಳು ಸಾಹಿತ್ಯ ಅಕಾಡೆಮಿ ಸದಸ್ಯನೊಬ್ಬ ಮುಸ್ಲಿಂ ದ್ವೇಷ ಕಾರುವ ಪೋಸ್ಟ್ ಶೇರ್ ಮಾಡಿರುವುದು, ಈ ವ್ಯಕ್ತಿಯ ಮನಸ್ಥಿತಿ ಎಂತಹದ್ದು ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಮುಸ್ಲಿಂ ಸಮುದಾಯದ ಬಗ್ಗೆ ನಂಜುಕಾರುವಷ್ಟು ದ್ವೇಷ ಹೊಂದಿರುವ ಕಟ್ಟರ್ ಕೋಮುವಾದಿಯನ್ನು ಕಾಂಗ್ರೆಸ್ಸಿಗರು ಶಿಫಾರಸು ಮಾಡುವ ಅಗತ್ಯವಾದರೂ ಏನಿತ್ತು.? ಬೇರೆ ಪ್ರಜ್ಞಾವಂತ ತುಳು ಸಾಹಿತಿ, ಬರಹಗಾರರು ಇರಲಿಲ್ಲವೇ..?

ಕೊಟ್ಟಾರಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಲು ಬಂಟ್ವಾಳದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರೊಬ್ಬರ ಕೈವಾಡವಿದೆ. ಜಾತ್ಯತೀತತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಮುಖಂಡರೇ ಇಂತಹ ದ್ವೇಷ ಕಾರುವ ಸದಸ್ಯನನ್ನು ಶಿಫಾರಸು ಮಾಡಿದಂತೆ.! ಈಗ ಬಂಟ್ವಾಳದಲ್ಲಿ ಸೂಪರ್ ಸೀಡ್ ಆಗಿರುವ ಭೂ ಅಭಿವೃದ್ಧಿ ಬ್ಯಾಂಕ್ ನ ಮಾಜಿ ಅಧ್ಯಕ್ಷನ ಕೈ ಚಳಕದ ಮೂಲಕವೇ ಈತನನ್ನು ಸದಸ್ಯನಾಗಿ ಮಾಡಿದುದ್ದಂತೆ. ಎಂತಹ ವಿಪರ್ಯಾಸ ಅಲ್ಲವೇ.?

ಕೊಟ್ಟಾರಿ ತುಳು ಅಕಾಡೆಮಿ ನೇಮಕಾತಿಗೆ ಶಿಫಾರಸು ಮಾಡಿದ ಮಾಜಿ ಸಚಿವರ ಮನೆಗೆ ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ತಕರಾರು ಕೂಡ ಮಾಡಿದ್ದರಂತೆ. ಆದರೆ ಈ ಮಾಜಿಯ ಅತ್ಯಾಪ್ತ ಮಾಜಿ ಬ್ಯಾಂಕ್ ಅಧ್ಯಕ್ಷ ದಾರಿ ತಪ್ಪಿಸಿದ್ದೋ ಅನ್ನುವುದು ಗೊತ್ತಿಲ್ಲ.

ಕಾಂಗ್ರೆಸ್ ಸರಕಾರವಿದ್ದರೂ, ಅಲ್ಪಸಂಖ್ಯಾತ ಮತಗಳನ್ನು ನೆಚ್ಚಿ ರಾಜಕಾರಣ ಮಾಡುತ್ತಿದ್ದರೂ ಸಂಘಪರಿವಾರದ ಹಿನ್ನೆಲೆ ಹೊಂದಿದವರನ್ನು, ಮುಸ್ಲಿಂ ದ್ವೇಷಕಾರುವವರಿಗೆ ಕಾಂಗ್ರೆಸ್ಸಿಗರೆ ಅಧಿಕಾರ ಭಾಗ್ಯ ನೀಡುವುದಾದರೆ ಇದು ಎಷ್ಟನೇ ಗ್ಯಾರಂಟಿ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನೆ ಮಾಡುತ್ತಿದ್ದಾರೆ.