ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ತಿರುಗಾಡಿದರೆ ರೌಡಿಶೀಟರ್ ಕೇಸು ಫಿಕ್ಸ್: ಪೊಲೀಸ್ ಕಮಿಷನರ್ ಎಚ್ಚರಿಕೆ

ರಾಜ್ಯ

ಅಪ್ರಾಪ್ತರು ಕ್ರೈಂ ಫೀಲ್ಡಿನತ್ತ ಆಕರ್ಷಿತರಾಗುವುದನ್ನು ತಡೆಯಲು ಬೆಳಗಾವಿ ಪೊಲೀಸರಿಂದ ಆಂಟಿ ಸ್ಟಾಬ್ಯುಲಿಂಗ್ ವಿಂಗ್ ರಚನೆ

ಬೆಳಗಾವಿ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದುಕೊಂಡು ಸಮಾಜದಲ್ಲಿ ಭಯಭೀತಿ ಸೃಷ್ಟಿಸುವ ಸಮಾಜ ವಿದ್ರೋಹಿಗಳ ಕೃತ್ಯ ಮಿತಿಮೀರುತ್ತಿದ್ದು ಪೊಲೀಸ್ ಇಲಾಖೆ ಇದೀಗ ಇದಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದೆ.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿ ಮಾಂಜ್ ಸನದಿ ಎಂಬಾತನ ಮೇಲೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಅಪ್ರಾಪ್ತ ಇಬ್ಬರು ಯುವಕರು ಭಾಗಿಯಾಗಿದ್ದು, ಕ್ರೈಂ ಲೋಕದತ್ತ ಅಪ್ರಾಪ್ತರು ಭಾಗಿಯಾಗುತ್ತಿರುವುದು ಬೆಳಗಾವಿ ಜಿಲ್ಲೆಯ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮೀಸೆ ಮೂಡದ ಯುವಕರು ಕ್ರೈಂ ಫೀಲ್ಡಿನತ್ತ ಆಕರ್ಷಿತರಾಗುವುದನ್ನು ತಡೆಯಲು ಬೆಳಗಾವಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಆಂಟಿ ಸ್ಟಾಬ್ಯುಲಿಂಗ್ ವಿಂಗ್ (ವಿರೋಧಿ ಇರಿತ ಘಟಕ) ವನ್ನು ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದು, ಚಾಕು, ತಲವಾರು ಸೇರಿದಂತೆ ಮಾರಕಾಸ್ತ್ರ ಹಿಡಿದು ತಿರುಗಾಡಿದರೆ ನೇರವಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ಬುಕ್ ಮಾಡಿ ರೌಡಿಶೀಟರ್ ತೆರೆಯುವುದಾಗಿ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಎಚ್ಚರಿಕೆ ನೀಡಿದ್ದಾರೆ.

ಅಪ್ರಾಪ್ತರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಘಟನೆ ಹೆಚ್ಚುತ್ತಿರುವುದರಿಂದ ವಿಶೇಷ ತಂಡದ ಕಾರ್ಯಾಚರಣೆ ಮೂಲಕ ಕ್ರಿಮಿನಲ್ ಗಳನ್ನು ಸದೆಬಡಿಯಲು ಮುಂದಾಗಿದ್ದಾರೆ.