ಬಂಟ್ವಾಳ ತಾಲೂಕು ಮಂಚಿ ಗ್ರಾಮದಲ್ಲಿ ಬಲಿ ಪಡೆಯಲು ಕಾದು ಕುಳಿತಿದೆ ಧರೆ.. ಅಧಿಕಾರಿಗಳ ಬೇಜವಾಬ್ದಾರಿ..
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಮಂಚಿಬೈಲು ಎಂಬಲ್ಲಿ ಭೂಕುಸಿತದ ಭೀತಿಯಲ್ಲಿ ಬಡಕುಟುಂಬಗಳು ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿವೆ.
94c ಅಡಿಯಲ್ಲಿ ದಾಖಲೆ ಪಡೆದು ಕೂಲಿ ಜೀವನ ಮಾಡಿ ಬದುಕುತ್ತಿರುವ ಬಡಕುಟುಂಬಗಳು ಅಧಿಕಾರಿಗಳ ತೀರಾ ನಿರ್ಲಕ್ಷ್ಯದಿಂದಾಗಿ ಆತ್ಮಹತ್ಯೆಯೊಂದೇ ನಮಗುಳಿದ ಕೊನೆಯ ದಾರಿ ಎನ್ನುತ್ತಿವೆ.

ಬಡಕುಟುಂಬಗಳು ವಾಸಿಸುತ್ತಿರುವ ಗುಡ್ಡದ ಕೆಳಭಾಗದಲ್ಲಿ ಸುಮಾರು ಎಪ್ಪತ್ತು ಅಡಿಗಳಷ್ಟು ಆಳದಲ್ಲಿ ಮಳೆ ನೀರು ಹರಿಯುವ ತೋಡು ಇದೆ. ಮಳೆ ನೀರಿನ ಸೆಳೆತಕ್ಕೆ ಗುಡ್ಡ ಕುಸಿಯುತ್ತಿದ್ದು ಯಾವುದೇ ಕ್ಷಣ ಇನ್ನಷ್ಟು ಕುಸಿದು ಬೀಳುವ ಹಂತದಲ್ಲಿದೆ. ಎರಡು ವರ್ಷಗಳಿಂದ ಮಂಚಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ, ಕಂದಾಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಡೆಗೋಡೆ ನಿರ್ಮಿಸುವಂತೆ ಬಡಕುಟುಂಬಗಳು ಅಂಗಲಾಚಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಮತ್ತೆ ಭೂಕುಸಿತದ ಭೀತಿಯಲ್ಲಿ ಬಡಕುಟುಂಬಗಳಿಗೆ ನಿದ್ದೆಯಿಲ್ಲದಂತಾಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಆತ್ಮಹತ್ಯೆಯೊಂದೇ ನಮಗೆ ಉಳಿದಿರುವ ಕೊನೆಯ ದಾರಿ ಎಂದು ಬಡಕುಟುಂಬಗಳು ಕಣ್ಣೀರಿಡುತ್ತಿವೆ.
