ಜುಲೈ 1 ರವರೆಗೆ ಆರೋಪಿಗಳನ್ನು ಎನ್ ಐಎ ವಶಕ್ಕೆ ನೀಡಿ ನ್ಯಾಯಾಲಯ ಆದೇಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಸುಹಾಸ್ ಶೆಟ್ಟಿ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಂಟ್ರಿಯಾಗಿ ತನಿಖೆ ನಡೆಸುತ್ತಿದ್ದು ಇದರ ಭಾಗವಾಗಿ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿ ಜೈಲು ಸೇರಿರುವ 8 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಸ್ಟಡಿ ಪಡೆದು ವಿಚಾರಣೆ ಆರಂಭಿಸಿದೆ. ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಈಗಾಗಲೇ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಮೇ 1 ರಂದು ಬಜಪೆ ಕಿನ್ನಿಪದವು ಎಂಬಲ್ಲಿ ರೌಡಿ ಶೀಟರ್ ಕಂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಯನ್ನು ದುಷ್ಕರ್ಮಿಗಳು ಹತ್ಯೆ ಗೈದಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಜಿಲ್ಲೆಯಲ್ಲಿ ದೊಡ್ಡ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಸುಹಾಸ್ ಶೆಟ್ಟಿ ಹತ್ಯೆ ಕೇಸ್ NIA ಗೆ ನೀಡುವಂತೆ ಆಗ್ರಹಿಸಿತ್ತು. ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಕೈವಾಡವಿದೆ, ಹತ್ಯೆಗೆ ವಿದೇಶದಿಂದ ಫಂಡಿಂಗ್ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಕೇಂದ್ರ ಗೃಹ ಇಲಾಖೆ ಈ ಕೇಸನ್ನು ಎನ್ ಐಎ ಗೆ ವಹಿಸಿ ಆದೇಶಿಸಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಬೆಂಗಳೂರಿನ 50ನೇ ಸಿಸಿಹೆಚ್ ನ್ಯಾಯಾಲಯ ಜುಲೈ 1 ರವರೆಗೆ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಎಂಟು ಆರೋಪಿಗಳನ್ನು ಎನ್ ಐಎ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಎನ್ ಐಎ ತಂಡ ಪ್ರತ್ಯೇಕ ಎಫ್ ಐ ಆರ್ ದಾಖಲಿಸಿ ತನಿಖೆ ಆರಂಭಿಸಿದೆ. ಇದೀಗ ಜಿಲ್ಲೆಯಲ್ಲಿ ಎನ್ ಐಎ ತನಿಖೆ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ.
