ಶರಣ್ ಪಂಪ್ವೆಲ್, ಮುರುಳಿ ಭಟ್ ಬಳಿಗೆ ಹೋದ್ರೂ ನ್ಯಾಯ ಸಿಕ್ಕಿಲ್ಲ; ನಾವು ಹಿಂದೂಗಳಲ್ಲವೇ: ಸಂತ್ರಸ್ತ ಯುವತಿ ತಾಯಿಯ ಪತ್ರಿಕಾಗೋಷ್ಠಿ
ಅಬಾರ್ಷನ್ ಮಾಡಿಸಿ 10 ಲಕ್ಷ ಕೊಟ್ತೇವೆ; ಊರು ಬಿಟ್ಟು ಹೋಗಿ: ಬಿಜೆಪಿ ಮುಖಂಡನಿಂದ ಧಮ್ಕಿ.!
ಪುತ್ತೂರು ಬಿಜೆಪಿ ಲೀಡರ್ ಪುತ್ರನ ಕೃಷ್ಣಲೀಲೆ ಕಹಾನಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಪುತ್ತೂರು ನಗರ ಸಭೆಯ ಸದಸ್ಯ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ ಗರ್ಭವತಿ ಮಾಡಿ ಮಗುವನ್ನು ಕರುಣಿಸಿ ಭೂಗತನಾಗಿದ್ದಾನೆ. ಏಳು ವರ್ಷದ ಪ್ರೀತಿ ಪ್ರೇಮ ಪ್ರಣಯ ಇದೀಗ ಭಾರೀ ಸದ್ದು ಮಾಡುತ್ತಿದೆ. ಮದುವೆ ಮಾಡಿಸುತ್ತೇವೆ ಎಂದು ನಂಬಿಸಿ ಕೈ ಕೊಟ್ಟ ಬಿಜೆಪಿ ಲೀಡರ್ ಕುಟುಂಬದ ವಿರುದ್ಧ ಇದೀಗ ಯುವತಿ ಕುಟುಂಬಸ್ಥರು ಪತ್ರಿಕಾಗೋಷ್ಠಿ ನಡೆಸಿ ಒಟ್ಟಾರೆ ನಡೆದಿರುವ ವಿದ್ಯಮಾನಗಳನ್ನು ಬಯಲಿಗೆ ತಂದಿದ್ದಾರೆ.
ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂತ್ರಸ್ತ ಯುವತಿಯ ತಾಯಿ ತಮ್ಮ ಮೇಲಾಗಿರುವ ಅನ್ಯಾಯದ ಬಗ್ಗೆ ಬಿಚ್ಚಿಟ್ಟಿದ್ದಾರೆ. ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ನನ್ನ ಮಗಳು ಹಾಗೂ ಕೃಷ್ಣ ಜೆ ರಾವ್ ಅವರದ್ದು ಏಳೂ ವರ್ಷದ ಪ್ರೀತಿ. ಯುವಕನೆ ಮೊದಲು ಪ್ರಪೋಸ್ ಮಾಡಿದ್ದು, ನನ್ನ ಮಗಳನ್ನು ಮಂಗಳೂರು ಅಥೆನಾ ಹಾಸ್ಪಿಟಲ್ ನಲ್ಲಿ ಟೆಸ್ಟ್ ಮಾಡಿದಾಗ ಏಳೂವರೆ ತಿಂಗಳು ಎಂಬುದು ಗೊತ್ತಾಯಿತು. ಈ ಸಂದರ್ಭದಲ್ಲಿ ಆ ಯುವಕ ಕೂಡ ಆಸ್ಪತ್ರೆಗೆ ನಮ್ಮ ಜೊತೆಗೆ ಬಂದಿದ್ದ . ಯುವಕನ ಮನೆಯವರು ಮಗುವನ್ನು ತೆಗೆಸುವಂತೆ ನಿರಂತರ ಒತ್ತಡ ಹಾಕುತ್ತಿದ್ದರು. ಮಗಳು ಏಳೂವರೆ ತಿಂಗಳ ಗರ್ಭಿಣಿ ಯಾಗಿರುವುದರಿಂದ ಅಬಾರ್ಷನ್ ಮಾಡಿಸಲು ಸಾಧ್ಯವಿಲ್ಲ, ಮಗಳ ಜೀವಕ್ಕೆ ಅಪಾಯವಾಗಬಹುದೆಂದು ಆಸ್ಪತ್ರೆಯವರು ತಿಳಿಸಿದ್ದರು.

ಮಗುವನ್ನು ತೆಗೆಸದಿದ್ದರೆ ಮಗ ಸೂಸೈಡ್ ಮಾಡುತ್ತೇನೆ, ನಮ್ಮ ಕುಟುಂಬದ ಮಾನ ಮರ್ಯಾದೆ ಬೀದಿಗೆ ಬರುತ್ತದೆ. ಆತನ ಭವಿಷ್ಯ ಹಾಳಾಗುತ್ತದೆ. ಅಬಾರ್ಷನ್ ಮಾಡಿಸಲು ತಗಲುವ 4.5 ಲಕ್ಷ ಕೊಡುವುದಾಗಿ ಯುವಕನ ತಂದೆ ಜಗನ್ನಿವಾಸ್ ರಾವ್ ನಿರಂತರವಾಗಿ ಒತ್ತಡ ಹಾಕುತ್ತಿದ್ದರು ಎಂಬುದಾಗಿ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ಖುದ್ದು ನಿಂತು ಮಗನನ್ನು ಒಪ್ಪಿಸಿ ಮದುವೆ ಮಾಡಿಸುತ್ತೇವೆ, 21 ವರ್ಷ ಪ್ರಾಯ ಯುವಕನಿಗೆ ಆಗಲಿ ಎಂದು ಯುವಕನ ತಂದೆ ಭರವಸೆ ನೀಡಿದ್ದರು. ಎಫ್ ಐ ಆರ್ ವಾಪಾಸು ಪಡೆಯಿರಿ ಎಂದಿದ್ದರು. ಜೂನ್ 23 ಕ್ಕೆ 21 ವರ್ಷ ಪೂರ್ತಿಯಾಗುತ್ತಿದ್ದಂತೆ ಯುವಕನ ಕುಟುಂಬ ಉಲ್ಟಾ ಹೊಡೆದಿದ್ದು, ಈಗ ಯುವಕ ನಾನು ಮದುವೆಯಾಗಲ್ಲ, ಮಗು ನನ್ನದಲ್ಲ ಅನ್ನುತ್ತಿದ್ದಾನೆ. ಒಂದೂವರೆ ತಿಂಗಳು ಇವರ ಭರವಸೆ ನಂಬಿ ಕಾದರೂ ಕೊನೆಗೆ ಯುವಕನ ತಂದೆ ಮಗನನ್ನೇ ಅಡಗಿಸಿಟ್ಟು ಓಡಿ ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನನಗಾದ ಅನ್ಯಾಯದ ಬಗ್ಗೆ ಹಿಂದೂ ಸಂಘಟನೆಗಳ ನಾಯಕರಾದ ಶರಣ್ ಪಂಪ್ವೆಲ್, ಮುರುಳಿ ಭಟ್ ರ ಬಳಿಗೆ ಹೋದ್ರೂ ನನಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ನಾವು ಹಿಂದೂಗಳಲ್ಲವೇ ಎಂದು ಸಂತ್ರಸ್ತ ಯುವತಿ ತಾಯಿ ಕಣ್ಣೀರು ಹಾಕಿದ್ದಾರೆ.
ಶಾಸಕ ಅಶೋಕ್ ರೈ ಮದುವೆ ಮಾಡಿಸುವ ಭರವಸೆ ನೀಡಿದ್ದರೂ ಈಗ ಯಾವುದೇ ಮಾತನಾಡುತ್ತಿಲ್ಲ. ಎಫ್ ಐ ಆರ್ ತೆಗೆಸುವಂತೆ ನನ್ನ ಬಳಿ ಹೇಳಿದ್ದರು ಅಂದಿರುವ ಯುವತಿಯ ತಾಯಿ, ಹಿಂದೂ ಸಂಘಟನೆಯ ಮುಖಂಡರೊಬ್ಬರು 10 ಲಕ್ಷ ರೂಪಾಯಿ ಕೊಡಿಸುವುದಾಗಿ, ಅಬಾರ್ಷನ್ ಮಾಡುವಂತೆ ಹೇಳಿರುವುದಾಗಿ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಊರು ಬಿಟ್ಟು ಹೋಗುವಂತೆ ಯುವಕನ ತಂದೆ ಬೆದರಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
