ಅಗಸ್ಟ್ 12 ರಂದು ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳೊಂದಿಗೆ ಮರಳು,ಕಲ್ಲು ಗಣಿಗಾರಿಕೆ ಸಂಬಂಧ ಬೆಂಗಳೂರಿನಲ್ಲಿ ಮಹತ್ವದ ಸಭೆ

ರಾಜ್ಯ

ಇನ್ನಾದರೂ ಸಮಸ್ಯೆ ಇತ್ಯರ್ಥವಾಗಬಹುದಾ.?

ದ.ಕ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಆಗಿರುವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು, ಕರಾವಳಿ ಭಾಗದವರೇ ಆದ ವಿಧಾನಸಭಾ ಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಅಗಸ್ಟ್ 12 (ಮಂಗಳವಾರ) ದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಸಮಸ್ಯೆ ಹಾಗೂ ಕೆಂಪು ಕಲ್ಲು ಗಣಿಗಾರಿಕೆ ಬಗ್ಗೆ ಮಹತ್ವದ ಸಭೆ ಬೆಂಗಳೂರು ವಿಧಾನ ಸೌಧದಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ದೊರಕಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮರಳು, ಕೆಂಪು ಕಲ್ಲಿನ ಲಭ್ಯತೆ ದೊರಕದೆ ನಿರ್ಮಾಣ ಕಾಮಗಾರಿಗಳು ಸ್ತಬ್ಧವಾಗಿದ್ದು, ಅಗಸ್ಟ್ 12 ಮಂಗಳವಾರದಂದು ನಡೆಯುವ ಸಭೆಯ ಬಗ್ಗೆ ಎಲ್ಲರ ಚಿತ್ತ ಅಡಗಿದೆ. ಈ ಹಿಂದೆ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಮಂಗಳೂರಿನಲ್ಲಿ ಅಧಿಕಾರಿಗಳು, ಗಣಿಗಾರಿಕೆ ಮಾಲೀಕರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ದ.ಕ ಜಿಲ್ಲೆಯ ಮರಳು, ಕಲ್ಲು ಗಣಿಗಾರಿಕೆ ಸಮಸ್ಯೆ ಬಗ್ಗೆ ಇತ್ತೀಚೆಗೆ ಜಿಲ್ಲೆಯ ಬಿಜೆಪಿ ನಿಯೋಗ, ಮಾಜಿ ಸಚಿವ ರಮಾನಾಥ ರೈ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಆಗ್ರಹಿಸಿತ್ತು.