“ಒಬ್ಬ ಶಿಕ್ಷಕ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸಬಹುದು ಅಥವಾ ಆತನ ಭವಿಷ್ಯವನ್ನು ಹಾಳುಮಾಡಬಹುದು. ಶಿಕ್ಷಕನ ಕೈಯಲ್ಲಿರುವುದು ಕೇವಲ ದಂಡನೆ ಅಲ್ಲ – ಅದು ಬದುಕನ್ನು ಕಟ್ಟುವ ಶಕ್ತಿ”
ಇಸ್ಮಾಯಿಲ್ ಸುನಾಲ್, ವಕೀಲರು, ಬರಹಗಾರರು
“ಶಿಕ್ಷಕರ ಭವಿಷ್ಯದ ಪ್ರಜೆಗಳ ಶಿಲ್ಪಿಗಳು” ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಅತೀ ಪ್ರಾಚೀನ. ಆದರೆ ಪ್ರತಿಯೊಬ್ಬ ಶಿಕ್ಷಕನು ಶಿಲ್ಪಿಗಳಂತೆ ಇರಲೇಬೇಕೆಂಬುದಿಲ್ಲ ಎಂಬುದನ್ನು ನಾನು ನನ್ನ ಜೀವನದ ಮೂಲಕವೇ ಅನುಭವಿಸಿದ್ದೇನೆ. ಶಿಕ್ಷಕನು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಮಿಸಬಹುದು, ಹಾಳುಮಾಡಬಹುದು ಎಂಬ ಮಾತು ನಿಜಕ್ಕೂ ನನ್ನ ಬದುಕಿನ ಕಹಿ-ಮಧುರ ಸತ್ಯವಾಗಿದೆ.
ನನ್ನ ಬಾಲ್ಯದ ಶಿಕ್ಷಕರ ಅನುಭವ
ನಾನು ಕಲಿತಿದ್ದು, ಆಗಿನ ಕಾಲದಲ್ಲಿ ತೀರಾ ಹಿಂದುಳಿದ್ದ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಧಿನಿಕತೆಯಲ್ಲಿ ಹಿಂದುಳಿದ್ದರೂ ಆ ಹಳ್ಳಿ ಸತ್ಯ, ಶ್ರಮ ಮತ್ತು ಪ್ರಾಮಾಣಿಕತೆಯ ಮಡಿಲಾಗಿತ್ತು. ಪ್ರಾಥಮಿಕ ಶಾಲೆಗೆ, ನನ್ನ ಪಾಲಕರು ನನ್ನನ್ನು ಸೇರಿಸಿದಾಗ, ನಾನು ಜ್ಞಾನ ಪಡೆಯಬೇಕು ಕಲಿತು ಒಳ್ಳೆಯ ವ್ಯಕ್ತಿಯಾಗಿ ರೂಪುಕೊಗಲ್ಲಬೇಕೆಂಬ ಕನಸು ಹಾಗೂ ನಿರೀಕ್ಷೆ ಅವರಿಗೂ, ಅವರಂತೆ ನನಗೂ ಇತ್ತು. ಆದರೆ ಆ ಪ್ರಾಥಮಿಕ ಶಾಲೆಯಲ್ಲಿ ನಾನು ಎದುರಿಸಬೇಕಾದದ್ದು ನಿರಂತರ ದಂಡನೆ, ಜಾತಿನಿಂದನೆ, ಅವಮಾನ, ಹಾಗೂ ಹಿಂಸೆ. ಕೋಲಿನ ಹೊಡೆತ, ಧಿಕ್ಕಾರ, ಹಾಗೂ ಧರ್ಮ-ಜಾತಿಯ ಆಧಾರದ ಮೇಲೆ ನಡೆದ ನಿಂದನೆಗಳು ನನ್ನ ಹೃದಯವನ್ನು ಹೊಸಕಿ ಹಾಕಿದ್ದವು. ಓರ್ವ ಶಿಕ್ಷಕಿ “ಬೀರಿ ಕುಟ್ಟಿ”, “ಬ್ಯಾರಿ ಬುದ್ಧಿ” ಎಂದೆಲ್ಲ ಮೂದಲಿಸಿ, ಅವಮಾನಿಸುತ್ತಿದ್ದರು. ಬಾಬು ಮಾಸ್ಟರ್ ಎಂಬ ಮುಖ್ಯಶಿಕ್ಷಕರು ಲಿಂಗಪ್ಪ ಎಂಬವನಿಗೆ ಕಾಲಿಗೆ ರಕ್ತ ಬರುತ್ತಿದ್ದರೂ ಬಿಡದೆ ಹೊಡೆಡಿದ್ದು, ಹಾಗೂ ಮುಂದೆಂದೂ ಲಿಂಗಪ್ಪ ಶಾಲೆಗೆ ಬಾರದೆ ವಿದ್ಯಾಭ್ಯಾಸದಿಂದ ವಂಚಿತನಾಗಿದ್ದೂ ನನ್ನ ಬದುಕಿನಲ್ಲಿ ಮರೆಯಲಾರದ ಘಟನೆ – ಇವು ನನಗೆ ಶಾಲೆಯನ್ನು “ಶಿಕ್ಷಣ ಕೇಂದ್ರ” ಅಲ್ಲ, “ಶಿಕ್ಷೆ ಕೇಂದ್ರ” ಎಂದು ಭಾಸವಾಗುವಂತೆ ಮಾಡಿತು. ನಾನು ಶಾಲೆ ಬಿಟ್ಟುಬಿಡಬೇಕು ಎಂದು ನನ್ನ ತಂದೆಗೆ ಹೇಳುವಷ್ಟರ ಮಟ್ಟಿಗೆ ನಾನು ಶಾಲೆಯನ್ನು ಹಾಗೂ ಶಿಕ್ಷಕರನ್ನು ದ್ವೇಷಿಸುತ್ತಿದ್ದೆ. ಸ್ವಲ್ಪ ಸಮಯ ಶಾಲೆ ಬಿಟ್ಟು ದೂರವೂ ಉಳಿದಿದ್ದೆ. ಆದರೆ ಪೋಷಕರ ಒತ್ತಡದಿಂದ ಮತ್ತೆ ಶಾಲೆಯ ಕಡೆಗೆ ಮುಖ ಮಾಡಬೇಕಾಗಿತ್ತು.
ಒಂದು ಒಳ್ಳೆಯ ಶಿಕ್ಷಕನ ಬದಲಾವಣೆ
ಆದರೆ ಅದೇ ಜೀವನದಲ್ಲಿ, ಕೆಲವರ ದಯೆ ನನ್ನನ್ನು ಹೊಸ ದಾರಿಗೆ ತಳ್ಳಿತು. ಬೆಳ್ತಂಗಡಿ ಹೈಸ್ಕೂಲಿನಲ್ಲಿ ಶಿಕ್ಷಕರ ಶಿಕ್ಷೆ ತಪ್ಪಿಸಲು ಸದಾ ಶಾಲೆಗೆ ಚಕ್ಕರ್ ಹೊಡೆದು ತಿರುಗಾಡುತ್ತಿದ್ದ ನನ್ನನ್ನು ಎಸ್.ಎಸ್. ಎಲ್. ಸಿ. ಪರೀಕ್ಷೆಗೆ ಕೇವಲ ಹದಿನೈದು ದಿವಸಗಲ್ಲಿದ್ದಾಗ, ರಂಗನಾಥ ಮಾಸ್ಟರ್ ಎಂಬವರು ನನ್ನನ್ನು ಕರೆದು ಕಾಫಿ-ತಿಂಡಿ ಕೊಟ್ಟು, ಕೈಯಲ್ಲಿ ಒಂದು ಡೈಜೆಸ್ಟ್ ಪುಸ್ತಕ ನೀಡಿ, “ಕನಿಷ್ಠ ಈಗಲಾದರೂ ಪರೀಕ್ಷೆಗೆ ಕಲಿತು ಪಾಸಾಗಿ ಜೀವನ ರೂಪಿಸಿಕೋ” ಎಂದು ಪ್ರೀತಿಯಿಂದ ಹೇಳಿದ ಮಾತು ನನ್ನ ಮನಸ್ಸಿಗೆ ತಾಕಿತು. ಆ ಹದಿನೈದು ದಿನಗಳಲ್ಲಿ ನಾನು ಓದಿದ್ದು, ನನ್ನ ಜೀವನದ ಅತ್ಯಂತ ತಿರುವಾಗಿ ಸಾಬೀತಾಯಿತು. ಅವರ ಪ್ರೀತಿಯ ಸಲಹೆಯ ಫಲವಾಗಿ ನಾನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆನು.
ಮತ್ತೊಮ್ಮೆ ಪಿಯುಸಿಯಲ್ಲಿದ್ದಾಗ, ನನ್ನ ಹಾಸ್ಯ ಬರಹಗಳನ್ನು ಕಸಿದುಕೊಂಡಿದ್ದ ಇಂದಿರಾ ಮ್ಯಾಡಂ, ಯಾವುದೇ ದಂಡನೆ ನೀಡದೇ “ಇಂಥ ತಪ್ಪು ಮಾಡಬೇಡ” ಎಂದು ಸೌಮ್ಯವಾಗಿ ಎಚ್ಚರಿಸಿದ ಕ್ಷಣ – ಇದು ನನಗೆ ಶಿಕ್ಷಕರಿಗೂ ಮಾನವೀಯತೆ ಇದೆ ಎಂಬ ನಂಬಿಕೆ ತಂದುಕೊಟ್ಟಿತು.

ಪಾಠ: ಶಿಕ್ಷಕರ ಶಕ್ತಿ
ಈ ಅನುಭವಗಳು ನನಗೆ ಕಲಿಸಿದ ಪಾಠ ಏನೆಂದರೆ –
- ಶಿಕ್ಷಕನೊಬ್ಬ ಬದುಕು ರೂಪಿಸಬಹುದು ಅಥವಾ ಬದುಕನ್ನು ಕಸಿಯಲೂಬಹುದು ಎಂಬುದಾಗಿದೆ.
- ಒಂದು ಕಠೋರ ಶಿಕ್ಷಕ ವಿದ್ಯಾರ್ಥಿಯ ಕನಸುಗಳನ್ನು ಮುಕಸಿಯಬಲ್ಲನು.
- ಆದರೆ ಒಂದು ಸೌಮ್ಯ, ಪ್ರೇರಣಾದಾಯಕ ಶಿಕ್ಷಕ ವಿದ್ಯಾರ್ಥಿಯ ಬದುಕನ್ನು ಬದಲಾಯಿಸಬಲ್ಲನು.
ವಿದ್ಯಾರ್ಥಿಯ ಭವಿಷ್ಯ ಒಂದು ಸೂಕ್ಷ್ಮ ತಂತಿಯಂತಿದೆ. ಶಿಕ್ಷಕರ ವರ್ತನೆ, ಅವರ ಮಾತುಗಳು, ಅವರ ಕೈಯಲ್ಲಿರುವ ಕೋಲು – ಇವು ಆ ತಂತಿಯನ್ನು ಮುರಿಯಬಹುದೇ ಅಥವಾ ಸಂಗೀತವನ್ನಾಗಿ ಮಾಡಬಹುದೇ ಎಂಬುದನ್ನು ನಿರ್ಧರಿಸುತ್ತವೆ.

ಶಿಕ್ಷಕರ ದಿನದ ಸಂದೇಶ
ಶಿಕ್ಷಕರು ಮಕ್ಕಳಿಗೆ ಕೇವಲ ಪಾಠವನ್ನೇ ಬೋಧಿಸಬಾರದು; ಅವರು ಮಕ್ಕಳ ಮನಸ್ಸನ್ನು ಬೆಳೆಸುವ, ಆತ್ಮವಿಶ್ವಾಸ ತುಂಬುವ, ಮಾನವೀಯ ಮೌಲ್ಯಗಳನ್ನು ಬೋಧಿಸುವವರಾಗಬೇಕು. ಒಬ್ಬ ಶಿಕ್ಷಕನ ಕ್ರೂರ ಮಾತು ಜೀವಪರ್ಯಂತ ನರಳುವಂತೆ ಮಾಡಬಹುದು, ಆದರೆ ಒಬ್ಬ ಶಿಕ್ಷಕನ ಸೌಮ್ಯ ಮಾತು ವಿದ್ಯಾರ್ಥಿಯ ಜೀವನವನ್ನೇ ಬದಲಾಯಿಸಬಹುದು.
“ಒಬ್ಬ ಶಿಕ್ಷಕ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸಬಹುದು ಅಥವಾ ಆತನ ಭವಿಷ್ಯವನ್ನು ಹಾಳುಮಾಡಬಹುದು. ಆದ್ದರಿಂದ ಶಿಕ್ಷಕನ ಕೈಯಲ್ಲಿರುವುದು ಕೇವಲ ದಂಡನೆ ಅಲ್ಲ – ಅದು ಬದುಕನ್ನು ಕಟ್ಟುವ ಶಕ್ತಿ”
{ಲೇಖಕರ ಅನುಭವ}
