ಉಸಿರಾಟ ಸಮಸ್ಯೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯ ಗ್ರಾಮದ ನಿವಾಸಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯ ವೆಚ್ಚವನ್ನು ಮಂಜೂರು ಮಾಡಲು ನಿರಾಕರಿಸಿದ್ದ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಗೆ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ ಚಿಕಿತ್ಸಾ ವೆಚ್ಚವನ್ನು ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಸಮೇತ ಪಾವತಿಸಲು ಆದೇಶ ನೀಡಿದೆ.
ದೂರುದಾರರು ತನ್ನ ಕುಟುಂಬಕ್ಕೆ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಯ ಪಾಲಿಸಿಯನ್ನು 2021 ರಿಂದಲೇ ಹೊಂದಿದ್ದು, 2024 ಇಸವಿಯಲ್ಲಿ ದೂರುದಾರರ ಮಗಳಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ವೈದ್ಯರು ರಿನೋ ಪ್ಲಾಷ್ಟಿ (Rhinoplasty) ಮಾಡಲು ಸೂಚಿಸಿ ಆ ಬಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅನೇಕ ವರ್ಷದಿಂದ ಕೇರ್ ಹೆಲ್ತ್ ಇನ್ಸೂರೆನ್ಸ್ ಪಾಲಿಸಿಗೆ ಪ್ರೀಮಿಯಮ್ ಕಟ್ಟುತ್ತಾ ಬಂದಿದ್ದ ದೂರುದಾರರು ಶಸ್ತ್ರಚಿಕಿತ್ಸೆಯ ವೆಚ್ಚ ಒಟ್ಟು ರೂಪಾಯಿ 2,76,165 ಪಾವತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಸಂಸ್ಥೆಯು ಸದರಿ ಶಸ್ತ್ರಚಿಕಿತ್ಸೆ ಪರಿಹಾರಕ್ಕೆ ಒಳಪಡುವುದಿಲ್ಲ. ಅದು ಸೌಂದರ್ಯವರ್ಧಕ ಥೆರಪಿ (cosmatic) ಪಟ್ಟಿಗೆ ಬರುತ್ತದೆ ಎಂದು ಯಾವುದೇ ಆಧಾರವಿಲ್ಲದೆ ಅರ್ಜಿದಾರರ ಕ್ಲೈಮನ್ನು ತಿರಸ್ಕರಿಸಿತ್ತು.
ಇದರ ವಿರುದ್ಧ ಅರ್ಜಿದಾರರು ವಕೀಲರ ಮೂಲಕ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವೈದ್ಯಕೀಯ ತುರ್ತಿಗೆ ಮಾಡಲಾಗಿದ್ದ ಚಿಕಿತ್ಸಾ ವೆಚ್ಚ ನಿರಾಕರಿಸಿದ ಸದರಿ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದ್ದು, ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ಇನ್ಸೂರೆನ್ಸ್ ಸಂಸ್ಥೆಯು ಆಧಾರ ರಹಿತವಾಗಿ ಕ್ಲೈಮ್ ತಿರಸ್ಕರಿಸಿದೆ, ದೂರುದಾರರ ದಾಖಲೆಗಳು ವೈದ್ಯಕೀಯ ಅವಶ್ಯಕತೆಗೆ ಚಿಕಿತ್ಸೆ ನಡೆದಿದೆ ಎಂದು ಸಾಬೀತು ಮಾಡುತ್ತದೆ ಎಂದು ತೀರ್ಪು ನೀಡಿ ಇನ್ಸೂರೆನ್ಸ್ ಸಂಸ್ಥೆಯು ಸಂಪೂರ್ಣ ಚಿಕಿತ್ಸಾ ವೆಚ್ಚ ರೂಪಾಯಿ 2,76,165 ಅನ್ನು 6% ಬಡ್ಡಿಯೊಂದಿಗೆ ಪಾವತಿಸಬೇಕು ಹಾಗೂ ರೂಪಾಯಿ 20,000 ಯನ್ನು ಪರಿಹಾರ ಮತ್ತು ವ್ಯಾಜ್ಯ ವೆಚ್ಚವಾಗಿ ಪಾವತಿಸಬೇಕು ಎಂದು ಆದೇಶಿಸಿದೆ. ದೂರುದಾರರ ಪರವಾಗಿ ಪುತ್ತೂರಿನ ಹರೀಶ್ ಕುಮಾರ್ ಬಳಕ್ಯ, ದೀಪಕ್ ಬೊಳುವಾರ್, ಭುವನೇಶ್ವರಿ ಎಂ, ಪಿ ವಿನೀಶಾ ವಾದಿಸಿದ್ದರು.
