ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ನಹೀಮ್ ಅಹ್ಮದ್ ಎಂಬಾತನನ್ನು ಗಿರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ನಹೀಮ್ ವಶವಿದ್ದ 22 ಕೆ.ಜಿ. ಗಾಂಜಾ, ರೂ. 2.90 ಸಾವಿರ ನಗದು, 88 ಗ್ರಾಂ ಚಿನ್ನಾಭರಣ, ಐದು ಮೊಬೈಲ್ ಫೋನ್ಗಳು, ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಮೂರು ಮಂದಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

16-09-2025 ರಂದು ಸಂಜೆ 5ರ ಸುಮಾರಿಗೆ ಬನಶಂಕರಿ ಸಂಚಾರ ಠಾಣೆ ಪೊಲೀಸರು ನಾಯಂಡಹಳ್ಳಿ-ಕನಕಪುರ ರಸ್ತೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿ ತನ್ನ ಸ್ವಿಫ್ಟ್ ಕಾರಿನಲ್ಲಿ ನಾಯಂಡಹಳ್ಳಿಯಿಂದ ಕನಕಪುರ ಕಡೆ ಹೋಗುತ್ತಿದ್ದ. ಕಾರಿನ ಕಿಟಕಿಗಳಿಗೆ ಟಿಂಟೆಡ್ ಗ್ಲಾಸ್ ಹಾಕಲಾಗಿತ್ತು. ಆರೋಪಿ ಮೊಬೈಲ್ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುತ್ತಿದ್ದ. ಅದನ್ನು ಗಮನಿಸಿದ್ದ ಸಂಚಾರ ಪೊಲೀಸರು ವಾಹನ ನಿಲುಗಡೆ ಮಾಡುವಂತೆ ಸೂಚಿಸಿದ್ದರು. ಆದರೆ ಪರಾರಿಯಾಗಲು ಯತ್ನಿಸಿದ್ದ ವೇಳೆ ಕಾರನ್ನು ತಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದ ಮೂವರು ಆರೋಪಿಗಳು ಚಾಲಕನನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಕಾರಿನ ಒಳಗಡೆ ತಪಾಸಣೆ ನಡೆಸಿದಾಗ ಚೀಲಗಳಲ್ಲಿ 22 ಕೆ.ಜಿ. ಗಾಂಜಾ, ನಗದು ಪತ್ತೆಯಾಗಿತ್ತು. ಕೂಡಲೇ ಗಿರಿನಗರ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ನಹೀಮ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ಮೂಲಗಳು ಹೇಳಿವೆ.
