ಇದು ಬಂಟ್ವಾಳ ಪುರಸಭೆಯ ಕಥೆ ವ್ಯಥೆ . ಇಲ್ಲಿ ಅಧಿಕಾರಿಗಳು ಅನ್ನಿಸಿಕೊಂಡವರು ನಾಮ್ ಕಾವಸ್ತೆ ಮಾತ್ರ. ಆದರೆ ಕಾರುಬಾರು ನಡೆಯುತ್ತಿರುವುದೆಲ್ಲವೂ ದಿನಗೂಲಿ ನೌಕರರದ್ದೇ.
ಬಂಟ್ವಾಳ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲ ಕಾರಣವೇ ಈ ದಿನಗೂಲಿ ನೌಕರರು. ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಧಿಕಾರಿ ವರ್ಗ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಮಾತ್ರ ಅಚ್ಚರಿ ಪಡುವಂತದ್ದು.
ಬಂಟ್ವಾಳ ಪುರಸಭೆಯ ಒಳಹೊಕ್ಕರೆ ಯಾವೊಂದು ಕೆಲಸವೂ ಸಲೀಸಾಗಿ ನಡೆಯುತ್ತಿಲ್ಲ. ಖಾತಾ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಲೈಸೆನ್ಸ್ ಯಾವ ಕೆಲಸವೂ ಇಲ್ಲಿ ನಡೆಯುತ್ತಿಲ್ಲ. ಸರ್ವರ್ ಇಲ್ಲ ಅನ್ನುವ ರೆಡಿಮೇಡ್ ಉತ್ತರ ಮಾತ್ರ ದೊರೆಯುತ್ತದೆ. ಜನಪ್ರತಿನಿಧಿಗಳೆನಿಸಿಕೊಂಡವರು ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಜನಸಾಮಾನ್ಯ ಕೆಲಸ ಕಾರ್ಯಗಳಿಗೆ ಪುರಸಭೆ ಕಚೇರಿಯಲ್ಲಿ ದಿನಗೂಲಿ ನೌಕರರು ಕೈಗೆ ಸಿಗುವುದೇ ಇಲ್ಲ. ಅಧಿಕಾರಿಗಳು ಕಚೇರಿಯಲ್ಲಿದ್ದರೂ ಇವರು ಮಾತ್ರ ಜನರ ಕೈಗೆ ಸಿಗುತ್ತಿಲ್ಲ. ಅಧಿಕಾರಿಗಳು ಒಳ್ಳೆಯವರಿದ್ದರೂ ಈ ಸಿಬ್ಬಂದಿಗಳ ಕಾರುಬಾರೇ ಹೆಚ್ಚು. ಅಧಿಕಾರಿಗಳ ಮಾತಿಗೂ ಕ್ಯಾರೇ ಅನ್ನುತ್ತಿಲ್ಲ ಅನ್ನುವ ಆರೋಪಗಳು ಕೇಳಿ ಬರುತ್ತಿವೆ.
ದಿನಗೂಲಿ ನೌಕರರು ಸರಕಾರಿ ನೌಕರರಲ್ಲ. 11 ತಿಂಗಳ ಮಟ್ಟಿಗೆ ಅವರನ್ನು ನೇಮಿಸಲಾಗುತ್ತದೆ. ಆ ನಂತರ ಅವರನ್ನು ರಿಲೀವ್ ಮಾಡಬೇಕಾಗಿದೆ. ಆದರೆ ಬಂಟ್ವಾಳ ಪುರಸಭೆಯಲ್ಲಿ 10-15 ವರ್ಷಗಳಿಂದ ದಿನಗೂಲಿ ನೌಕರರು ಇಲ್ಲೇ ಝಂಡಾ ಹೂಡಿ ಕೂತಿದ್ದಾರೆ. ಒಬ್ಬೊಬ್ಬ ದಿನಗೂಲಿ ನೌಕರ ಅಧಿಕಾರಿಗಳನ್ನು ಮೀರಿಸುವಂತ ಭ್ರಷ್ಟಾಚಾರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು ಮಾತ್ರ ನಿಸ್ಸಾಯಕರಾಗಿದ್ದಾರೆ.

ಅಧಿಕಾರಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಳ್ಳೆಯ ಅಭಿಪ್ರಾಯ ಇದ್ದರೂ ದಿನಗೂಲಿ ನೌಕರರ ದುರಹಂಕಾರದಿಂದ ಕೆಟ್ಟ ಹೆಸರು ಬರುತ್ತಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿ ವರ್ಗ ಇವರ ಮೇಲೆ ನಿಗಾ ಇಡುವ ಕೆಲಸ ಮಾಡಬೇಕಾಗಿದೆ.
ಶಾಸಕರೇ ಎಲ್ಲಿದ್ದೀರಿ.?
ಬಂಟ್ವಾಳ ತಾಲೂಕಿನಾದ್ಯಂತ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇತ್ತೀಚೆಗೆ ಬಂಟ್ವಾಳ ತಾಲೂಕು ಆಡಳಿತ ಸೌಧಕ್ಕೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಗೊಂಡಿದ್ದರು. ಶಾಸಕರು ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಂಡ ಮಾತುಗಳು ತಾಲೂಕಿನಾದ್ಯಂತ ಕೇಳಿ ಬರುತ್ತಿದೆ. ಹೀಗಾಗಿ ಅಧಿಕಾರಿಗಳ ಮೇಲೆ ನಿಗಾ ವಹಿಸುವ ಕೆಲಸ ಮಾಡುತ್ತಿಲ್ಲವಂತೆ. ಇದರಿಂದಾಗಿ ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣ ಬೀಳುತ್ತಿಲ್ಲ ಅನ್ನುವ ಮಾತುಗಳು ಕೇಳಿ ಬರತೊಡಗಿದೆ. ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳನ್ನು ಮೀರಿ ದಿನಗೂಲಿ ನೌಕರರು ಜನಸಾಮಾನ್ಯರನ್ನು ಸತಾಯಿಸುತ್ತಿದ್ದರೂ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ಇನ್ನಾದರೂ ಶಾಸಕರು ಝಂಡಾ ಹೂಡಿ ಕೂತಿರುವ ಇಲ್ಲಿನ ದಿನಗೂಲಿ ನೌಕರರ ಬಗ್ಗೆ ಶಾಸಕರು ಖಡಕ್ ಸೂಚನೆ ನೀಡಬೇಕಾಗಿದೆ.
