ಪುತ್ತೂರಿನ ವಾಸ್ತುವಿಗೂ ಕೂಡಲಗಿ ಜಾತಕಕ್ಕೂ ಯಾಕೋ ಕೂಡಿ ಬರುತ್ತಿಲ್ಲ. ಇದು ಪುತ್ತೂರಿಗೆ ಅಂಟಿದ ಶನಿಕಾಟವೋ ಏನೋ..?
ಪುತ್ತೂರು ತಹಶೀಲ್ದಾರ್ ಸೀಟು ಖಾಲಿ ಇದೆ. ಪುತ್ತೂರಿಗೆ ಆಡಳಿತ ಪಕ್ಷದ ಎಂಎಲ್ಎ ಇದ್ದಾರೆ. ಆದರೆ ತಹಶೀಲ್ದಾರ್ ಇಲ್ಲ. ಇತ್ತೀಚೆಗೆ ನಾಪತ್ತೆಯಾಗಿದ್ದಾರೆ. ಪುರಂದರ ಹೆಗ್ಡೆ ಮನೆಗೆ ಹೋದ ಮೇಲೆ ಪುತ್ತೂರು ತಹಶೀಲ್ದಾರ್ ಚೇಂಬರಿನಲ್ಲಿ ಕೂತವರು ಕೂಡಲಗಿ ಎಂಬವರು. ಪುತ್ತೂರಿನ ವಾಸ್ತುವಿಗೂ ಕೂಡಲಗಿ ಜಾತಕಕ್ಕೂ ಯಾಕೋ ಕೂಡಿ ಬರುತ್ತಿಲ್ಲ. ಇದು ಪುತ್ತೂರಿಗೆ ಅಂಟಿದ ಶನಿಕಾಟವೋ ಏನೋ..? ದಂಡಾಧಿಕಾರಿ ಪರಾರಿಯಾಗಿದ್ದಾರೆ!
ಪುತ್ತೂರು ಶಾಸಕರಾಗಿ ಅಶೋಕ್ ರೈ ಎಂಟ್ರಿ ಕೊಡುತ್ತಿದ್ದಂತೆ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ದೊಡ್ಡ ಸದ್ದು ಮಾಡಿತ್ತು. ಶಾಸಕ ಅಶೋಕ್ ರೈ ಹೋದ ಕಡೆಯಲ್ಲೆಲ್ಲಾ ಭ್ರಷ್ಟಾಚಾರದ ವಿರುದ್ಧ ಪುಂಖಾನುಪುಂಖವಾಗಿ ಭಾಷಣ ಮಾಡಿದ್ದರು. ಕಂದಾಯ ಅಧಿಕಾರಿ ಯಿಂದ ಆರೋಗ್ಯ ಅಧಿಕಾರಿವರೆಗೆ ಲಂಚಕ್ಕೆ ಕೈಯೊಡ್ಡಿದರೆ ಸುಮ್ಮನಿರಲ್ಲ ಎಂಬ ಟಾಂಟೂಂ ಹೊರಡಿಸಿದ್ದರು. ಆದರೆ ಅದೇ ಪುತ್ತೂರಿನಲ್ಲಿ ಲೋಕಾಯುಕ್ತ ರೈಡ್ ಗೆ ಹೆದರಿ ದಂಡಾಧಿಕಾರಿಯೇ ನಾಪತ್ತೆಯಾಗಿದ್ದಾರೆ. ಬಹುಶಃ ತಾಲೂಕಿನ ತಹಶೀಲ್ದಾರ್ ವೊಬ್ಬರು ಈ ರೀತಿ ಕಾಣೆಯಾಗಿರುವುದು ಇದೇ ಮೊದಲು.
ಜೂನ್ 26 ಕ್ಕೆ ಡ್ಯೂಟಿ ಜಾಯಿನ್ ಆದ ಕೂಡಲಗಿ ಜಾತಕದಲ್ಲಿ ಒಮ್ಮೆಲೇ ರಾಹು, ಕೇತು ಎಂಟ್ರಿ ಆಯಿತೋ ಏನೋ? ಮಿನಿ ವಿಧಾನಸೌಧದಲ್ಲಿ ನಡೆಯುತ್ತಿದ್ದ ಲಂಚದ ಜಾತ್ರೆಗೆ ಲೋಕಾಯುಕ್ತರು ಲಂಚದ ಜಾತ್ರೆ ನೋಡಲು ಬಂದರು. ಕೂಡಲಗಿ ಸಾಹೇಬ್ರು ಅವತ್ತು ಪುತ್ತೂರು ತಹಶೀಲ್ದಾರ್ ಚೇಂಬರ್ ಬಿಟ್ಟು ಓಡಿದವರು ಊರು ಬಿಟ್ಟು, ಜಿಲ್ಲೆ ಬಿಟ್ಟು, ರಾಜ್ಯ ಬಿಟ್ಟು ಓಡಿದ್ದಾರೆ.
ಓರ್ವ ತಹಶೀಲ್ದಾರ್ ಹೆಸರು ಲಂಚದ ಕೇಸಲ್ಲಿ ಇದ್ದರೂ ಕೇಸಿಗೆ ಸಂಬಂಧಪಟ್ಟಂತೆ ಅವರು ಲೋಕಾಯುಕ್ತರ ಕೈಗೆ, ಪೊಲೀಸರ ಕೈಗೂ ಸಿಗದೆ ಪರಾರಿಯಾಗಿದ್ದರೂ, ಇತ್ತ ಡ್ಯೂಟಿಗೂ ಹಾಜರಾಗದೆ, ಅತ್ತ ಕಾನೂನಿಗೂ ಸರೆಂಡರ್ ಆಗದೆ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಅಸಿಸ್ಟೆಂಟ್ ಕಮಿಷನರ್, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಪುತ್ತೂರಿನಂತಹ ತಾಲೂಕು ಹೆಡ್ ಕ್ವಾರ್ಟರ್ಸ್ ನಲ್ಲಿ ಓರ್ವ ತಹಶೀಲ್ದಾರ್ ಓಡಿ ಹೋಗಿದ್ದಾರೆ ಅನ್ನುವುದು ನಾಚಿಕೆಗೇಡಿನ ವಿಷಯ. ತಹಶೀಲ್ದಾರ್ ಕಾಣೆಯಾಗಿರುವುದು, ಎಲ್ಲೋ ಕೂತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿರುವುದು ಇದೀಗ ತಹಶೀಲ್ದಾರ್ ಇಲ್ಲದೆ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಪುತ್ತೂರು ತಾಲೂಕು ಆಡಳಿತ ಸೌಧ ಕಾರ್ಯವೈಖರಿ ಸಂಪೂರ್ಣ ಪಾತಾಳಕ್ಕೆ ಕುಸಿದಿದೆ.

ಏನಿದು ಘಟನೆ
ಪುತ್ತೂರು ತಹಶೀಲ್ದಾರ್ ಆಗಿದ್ದ ಪುರಂದರ ಹೆಗ್ಡೆಯವರು ಮೇ 31 ರಂದು ನಿವೃತ್ತಿ ಹೊಂದಿದ ಬಳಿಕ ಬಾಗಲಕೋಟೆ ಇಳಕಲ್ ಗ್ರೇಡ್ -1 ತಹಶೀಲ್ದಾರ್ ಆಗಿದ್ದ ವಿಜಯಪುರ ಮೂಲದ ಎಸ್ ಬಿ ಕೂಡಲಗಿ ಅವರು ಪುತ್ತೂರಿಗೆ ವರ್ಗಾವಣೆಗೊಂಡು ಜೂನ್ 26 ರಂದು ಅಧಿಕಾರ ಸ್ವೀಕರಿಸಿದ್ದರು. ಆಗಸ್ಟ್ 28 ರಂದು ಸಂಜೆ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಭೂಮಿ ಶಾಖೆಗೆ ದಾಳಿ ನಡೆಸಿ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ದೂರು ದಾಖಲಿಸಿಕೊಂಡಿದ್ದಲ್ಲದೆ ಕೇಸು ವರ್ಕರ್ ಸುನೀಲ್ ಎಂಬವರು 12 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಆ ಬಳಿಕ ತಹಶೀಲ್ದಾರ್ ಕೂಡಲಗಿ ಈತನಕ ಕಚೇರಿ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈಶ್ವರಮಂಗಲದ ಅಜಿತ್ ಎಂಬವರು ದೂರು ನೀಡಿದ್ದರು.
ಪುತ್ತೂರು ತಹಶೀಲ್ದಾರ್ ಕಾಣೆ ಪ್ರಕರಣ ಇಡೀ ವ್ಯವಸ್ಥೆಗೆ ಒಂದು ಶೇಮ್. ತಾಲೂಕಿನ ದಂಡಾಧಿಕಾರಿಯೊಬ್ಬರು ಕಾಣೆಯಾಗಿರುವುದು ವ್ಯವಸ್ಥೆಯ ಹುಳುಕಿಗೆ ಹಿಡಿದ ಕೈಗನ್ನಡಿ. ಇಡೀ ಪುತ್ತೂರನ್ನೇ ಭ್ರಷ್ಟಾಚಾರ ಮುಕ್ತ ಮಾಡಲು ಹೊರಟ ಶಾಸಕರೇ ಬಹುಶಃ ಪುತ್ತೂರಿನ ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಜಿಲ್ಲೆಯ ಬೇರೊಂದು ತಾಲೂಕಿನಲ್ಲಿ ನಡೆಯುತ್ತಿಲ್ಲ ಅನ್ನುವುದು ಸತ್ಯ. ಇಲ್ಲಿ ತಹಶೀಲ್ದಾರ್ ರೇ ಕಾಣೆಯಾಗಿದ್ದಾರೆ..! ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡಲಾಗುವುದು ಅನ್ನುವ ಜೋಕ್ ಹರಿದಾಡುತ್ತಿದೆ. ಅಷ್ಟರ ಮಟ್ಟಿಗೆ ಪುತ್ತೂರು ಹಂಡಾಲೆದ್ದುಹೋಗಿದೆ.

ಪುತ್ತೂರು ಕಾಂಗ್ರೆಸ್ ಸರ್ವಂ ಬಿಜೆಪಿ ಮಯಂ.!
ಪುತ್ತೂರಿನಲ್ಲಿ ಅರುಣ್ ಪುತ್ತಿಲರ ದಯೆಯಿಂದ ಗೆದ್ದು ಬಂದಿದ್ದ ಅಶೋಕ್ ರೈ ಯನ್ನು ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮತಗಳು ಸಂಪೂರ್ಣ ಕೈ ಹಿಡಿದಿತ್ತು. ರೈ ಯವರು ಬಿಜೆಪಿಯಿಂದ ಕಾಂಗ್ರೆಸ್ ಗೆ ಜಂಪ್ ಹೊಡೆದರೂ ಚುನಾವಣೆ ಸಮಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಅವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ರೈ ಯವರ ಮೇಲೆ ಭರವಸೆ ಇಟ್ಟು ಬೆಂಬಲಿಸಿದ್ದರು. ಇದೀಗ ಅಶೋಕ್ ರೈ ಪುತ್ತೂರು ಕಾಂಗ್ರೆಸ್ ಅನ್ನು ಸಂಪೂರ್ಣ ಬಿಜೆಪಿ ಮಯ ಮಾಡಿದ್ದಾರೆ. ಪಕ್ಷದ ಪ್ರಮುಖ ಆಯಕಟ್ಟಿನ ಜಾಗದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಬಂದವರಿಗೆ ಹುದ್ದೆ ನೀಡಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಚೊಂಬು ಕೊಟ್ಟಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಬಂಟ ಜಾತಿಯ ಬಿಜೆಪಿ ಶಾಸಕರೊಬ್ಬರ ಹತ್ತಿರದ ಸಂಬಂಧಿ! ಪುಡಾ ಅಧ್ಯಕ್ಷರು ಕೂಡ ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದವರು. ನಗರಸಭೆಯ ನಾಮನಿರ್ದೇಶಿತ ಸದಸ್ಯರ ಪೈಕಿ ಬಹುತೇಕರು ಬಂಟರು. ಅಕ್ರಮ ಸಕ್ರಮ ಸಮಿತಿ, ಗ್ಯಾರಂಟಿ ಯೋಜನೆ ಸಮಿತಿಯಲ್ಲೂ ಅಲ್ಪಸಂಖ್ಯಾತರಿಗೆ ದೊಡ್ಡ ಪ್ರಾಮುಖ್ಯತೆಯಿಲ್ಲ. ಬ್ಲಾಕ್ ಉಪಾಧ್ಯಕ್ಷ ಸ್ಥಾನ ಕೂಡ ಬಿಜೆಪಿಯಿಂದ ಇತ್ತೀಚೆಗೆ ಬಂದವರಿಗೆ ಸಿಕ್ಕಿರುವುದು. ಕಾಂಗ್ರೆಸ್ ಪಕ್ಷದಲ್ಲೇ ತನ್ನ ಸುತ್ತ ಬಿಜೆಪಿ ಕೋಟೆ ಕಟ್ಟಿಸುವಲ್ಲಿ ಅಶೋಕ್ ರೈ ಯಶಸ್ವಿಯಾಗಿದ್ದಾರೆ. ಮೂಲ ಕಾಂಗ್ರೆಸ್ಸಿಗರು ವಿಲವಿಲ ಒದ್ದಾಡುತ್ತಿದ್ದಾರೆ.
