✍️. ಇಸ್ಮಾಯಿಲ್ ಸುಣ್ಣಾಲ್ ವಕೀಲರು, ಮಂಗಳೂರು.
2025ರ ನವೆಂಬರ್ 10ರ ಸಂಜೆಯ ವೇಳೆಗೆ, ದೆಹಲಿಯ ಇತಿಹಾಸ ಪ್ರಸಿದ್ಧ ಕೆಂಪುಕೋಟೆಯ ಸಮೀಪ ಸಂಭವಿಸಿದ ಭೀಕರ ಕಾರ್ ಬಾಂಬ್ ಸ್ಫೋಟವು ರಾಷ್ಟ್ರವನ್ನೇ ನಡುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 12 ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದು, 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕ್ರೂರ ಕೃತ್ಯ ಕೇವಲ ಭಯೋತ್ಪಾದನೆಯಲ್ಲ- ಇದು ಮಾನವತೆಯ ವಿರುದ್ಧ ನಡೆದ ಪಾಶವಿಕ ದಾಳಿಯಾಗಿದೆ ಎನ್ನದೆ ವಿಧಿಯಿಲ್ಲ. ಮನುಷ್ಯತ್ವ ಇರುವ ಯಾವುದೇ ವ್ಯಕ್ತಿ ಆತ ಯಾವ ಧರ್ಮದವನೇ, ಅಥವಾ ಯಾವ ರಾಷ್ಟ್ರದವನೇ ಆಗಿರಲಿ, ಈ ಕೃತ್ಯವನ್ನು ಖಂಡಿಸದಿರಲು ಕಾರಣಗಳಿಲ್ಲ. ಯಾವುದೇ ಧರ್ಮ, ವಿಶೇಷವಾಗಿ ಇಸ್ಲಾಂ, ಇಂತಹ ಅಮಾನುಷ ಕೃತ್ಯಗಳನ್ನು ಯಾವಾಗಲೂ ಖಂಡಿಸುತ್ತದೆ. ಪವಿತ್ರ ಕುರಾನ್ ಹೇಳುವ ಪ್ರಕಾರ “ಯಾರು ನಿರಪರಾಧಿ ಜೀವವನ್ನು ಕೊಲ್ಲುತ್ತಾರೋ, ಅವರು ಸಂಪೂರ್ಣ ಮಾನವಕೋಟಿಯನ್ನೇ ಕೊಂದಂತಾಗುತ್ತದೆ” (ಸೂರಾ ಅಲ್ ಮಾಇದಾ 5:32). ನಿರಪರಾಧಿಯನ್ನು ಕೊಲ್ಲುವುದು ದೇವರ ಆಜ್ಞೆಗೆ ವಿರುದ್ಧ. ಹೀಗಿದ್ದೂ ಈ ಸ್ಫೋಟದ ರೂವಾರಿಗಳು ಮುಸ್ಲಿಮರಾಗಿದ್ದರು ಎನ್ನುವುದು ಅರಗಿಸಿಕೊಳ್ಳಲು ಕಷ್ಟದ ಸಂಗತಿಯಾಗಿದೆ. ಉತ್ತಮ ವಿದ್ಯೆಯನ್ನು ಪಡೆದು, ಉತ್ತಮ ಉದ್ಯೋಗ ಗಿಟ್ಟಿಸಿಕೊಂಡು, ಸಮಾಜಮುಖಿಗಳಾಗಿ, ಸಮಾಜಕ್ಕೆ ನೆರವಾಗಬೇಕಿದ್ದ ಈ ವೈದ್ಯರುಗಳು, ಮಾನವ ಜೀವ ಹರಣಕ್ಕೆ ಹೊರಟಿದ್ದು, ವಿಪರ್ಯಾಸವೇ ಸರಿ. ಈ ದೇಶ ನಮಗೆ ಅಂದರೆ ಇಲ್ಲಿನ ಪ್ರಜೆಗಳಿಗೆ ಎಲ್ಲವನ್ನೂ ನೀಡಿದೆ, ಎಲ್ಲವನ್ನೂ ನೀಡುತ್ತಿದೆ, ಆದಾಗ್ಯೂ, ಈ ದೇಶಕ್ಕೆ ದ್ರೋಹ ಬಗೆದು, ಇಲ್ಲಿನ ಪಾವನ ಮಣ್ಣಿನಲ್ಲಿ ರಕ್ತ ಬೀಜಾಸುರಗಳ ಸಂಹಾರ ಮಾಡಬೇಕಾಗಿದೆ ಹಾಗೂ ಈ ಸಂಹಾರಕ್ಕೆ ಕೈಜೋಡಿಸಬೇಕಾಗಿರುವುದು ಮುಸ್ಲಿಮನಾದ ನನ್ನ ಕರ್ತವ್ಯವೆಂದು ನಾನು ನಂಬಿದ್ದೇನೆ. ಅದೇ ರೀತಿ ನನ್ನ ಸಹ ಧರ್ಮಿಯರಲ್ಲೂ ನಾನು ಈ ರೀತಿ ಮಾಡಬೇಕಾಗಿ ವಿನಂತಿಸುತ್ತೇನೆ.
ದೆಹಲಿಯ ಪೈಶಾಚಿಕ ಕೃತ್ಯದಲ್ಲಿ ಸಾವಿಗೀಡಾದವರು ಸಾಮಾನ್ಯ ನಾಗರಿಕರು, ಬಸ್ ಕಂಡಕ್ಟರ್, ಟ್ಯಾಕ್ಸಿ ಚಾಲಕರು, ಬೀದಿ ವ್ಯಾಪಾರಿಗಳು ಮತ್ತು ಹಾದುಹೋಗುತ್ತಿದ್ದ ನಿಷ್ಕಪಟ ಜನರು. ಅವರ ಜೀವಹಾನಿ ಸಮಾಜದ ಹೃದಯಕ್ಕೆ ನೀಡಿದ ಬಹುದೊಡ್ಡ ಹೊಡೆತವಾಗಿದೆ. ದೇಶ ಭಕ್ತಿಯನ್ನು ಮಾತಿನ ಮೂಲಕ ಸಾರುವ ಬದಲು, ನಾವು ನಮ್ಮ ನಡೆ-ನುಡಿಗಳೆರಡರಲ್ಲೂ ದೇಶ ಭಕ್ತಿಯನ್ನು ತೋರ್ಪಡಿಸಿಕೊಳ್ಳಬೇಕಾಗಿದೆ. ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ನಾವು ಸಂಪೂರ್ಣ ಬೆಂಬಲ ನೀಡಬೇಕಾದಿದೆ. ದೇಶ ವಿರೋಧಿ ಕೃತ್ಯದಲ್ಲಿ ಪಾಲುಗೊಳ್ಳುವವರು ಹಾಗೂ ನಿರಪರಾಧಿಗಳ ರಕ್ತವನ್ನು ಸುರಿಸುವವರು ಧರ್ಮದ ಶತ್ರುಗಳೇ ಆಗಿದ್ದಾರೆ ಎನ್ನುವುದನ್ನು ನಾವು ಮನಗಾಣಬೇಕಾಗಿದೆ. ಇಸ್ಲಾಂ ಹೆಸರಿನಲ್ಲಿ ಬಾಂಬ್ ಇಡುವುದು ಅಥವಾ ನಿರಾಯುಧ ಜನರನ್ನು ಕೊಲ್ಲುವುದು ಕೇವಲ ಭಯೋತ್ಪಾದನೆಯೇ ಆಗಿದ್ದು, ಅದು ಧೈರ್ಯವಲ್ಲ, ಬದಲಾಗಿ ಷಂಡತನ ಎಂದು ನಾವು ಸಾರಬೇಕಾಗಿದೆ.

ಈ ಅಮಾನುಷ ಕೃತ್ಯವನ್ನು ಮಾಡಿದವರಷ್ಟೇ ಅಲ್ಲ, ಅದರ ಸಂಚುಕೋರರು, ಹಣಕಾಸು ಪೂರೈಕೆದಾರರು, ಬೆಂಬಲಿಗರು ಮತ್ತು ಸಹಾನುಭೂತಿಗರೂ ಸಹ ಮಾನವತೆಯ ವಿರುದ್ಧದ ಅಪರಾಧಿಗಳು. ಇವರ ಮೇಲೆ ಕಾನೂನು ಗರಿಷ್ಠ ಶಿಕ್ಷೆ ವಿಧಿಸಬೇಕಾಗಿದೆ. ಇಂತಹ ಕೃತ್ಯಗಳಿಗೆ ಕ್ಷಮೆ, ಕನಿಕರ ಅಥವಾ ಸಬೂಬುಗಳನ್ನು ನೀಡಲು ಸಾಧ್ಯವಿಲ್ಲ. ಮಾನವ ಸಮಾಜದ ಸುರಕ್ಷತೆಗೆ ಇಂತಹ ದುಷ್ಟಶಕ್ತಿಗಳಿಂದ ಸಂಪೂರ್ಣವಾಗಿ ಮುಕ್ತಿ ದೊರಕುವುದು ಅತ್ಯವಶ್ಯ.
ಭಾರತ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಈ ಘಟನೆಯ ಹಿಂದಿರುವವರನ್ನು ಶೀಘ್ರ ಪತ್ತೆಹಚ್ಚಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಫಾರೆನ್ಸಿಕ್ ತಪಾಸಣೆ, ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಮತ್ತು ಆರ್ಥಿಕ ವ್ಯವಹಾರಗಳ ಪತ್ತೆಹಚ್ಚುವಿಕೆ ಮೂಲಕ ಸಂಪೂರ್ಣ ಸಂಚು ಬಹಿರಂಗಪಡಿಸಬೇಕು. ತನಿಖೆ ವೇಗವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು.
ಈ ಘಟನೆ ಕೇವಲ ಬಾಂಬ್ ಸ್ಫೋಟವಲ್ಲ, ಇದು ಸಮಾಜದ ಮನೋವೈಕಲ್ಯವನ್ನು ಗಂಭೀರವಾಗಿ ಕದಡುವ ಕೃತ್ಯ. ಇದರಲ್ಲಿ ಭಾಗಿಯಾದವರು ಮುಸ್ಲಿಮರಾಗಿದ್ದಾರೆ ಎನ್ನುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸಮಾಜ ನಮ್ಮ ಸಮುದಾಯವನ್ನು ವಕ್ರ ದೃಷ್ಟಿಯಿಂದ ನೋಡುತ್ತಿರುವಾಗ, ಇಸ್ಮಾಮೊಫೋಬಿಯಾದಿಂದ ಇಲ್ಲಿನ ಸಾಮಾನ್ಯ ಮುಸ್ಲಿಮರು ಸಮಸ್ಯೆಗಳನ್ನು ಅನುಭವಿಸುತ್ತಿರುವಾಗ, ಮುಸ್ಲಿಂ ಮತಕ್ಕೆ ಸೇರಿದ ವ್ಯಕ್ತಿಗಳು ಮಾಡಿರುವ ಈ ಘೋರ ಕೃತ್ಯ ಇಡೀ ಮುಸ್ಲಿಂ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ನಮ್ಮ ಧರ್ಮದ ಮಾನ ಮರ್ಯಾದೆಯನ್ನು ಹರಾಜು ಹಾಕುತ್ತಿರುವ ಈ ರೀತಿಯ ಮನಸ್ಥಿತಿಯ ವಿರುದ್ಧ ದೇಶಭಕ್ತಿಯುಳ್ಳ ಮುಸ್ಲಿಮರು ಒಂದಾಗಬೇಕಾದ ಕಾಲ ಒದಗಿ ಬಂದಿದೆ. ಇಲ್ಲದಿದ್ದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ದುರುದ್ದೇಶಿಗಳಿಗೆ ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ದೇಶವಾಸಿಗಳಲ್ಲಿ ಓರ್ವ ಮುಸಲ್ಮಾನ್ ಎಂಬ ನೆಲೆಯಲ್ಲಿ ನನಗೆ ಹೇಳಲಿಕ್ಕಿರುವುದು, ಇಸ್ಲಾಂ ಧರ್ಮ ಇಂದಿಗೂ ಇಂತಹ ಕುಕ್ರತ್ಯಗಳನ್ನು ಬೆಂಬಲಿಸುವುದಿಲ್ಲ ಹಾಗೂ ನ್ಯಾಯ ನೀತಿಯಲ್ಲಿ ವಿಶ್ವಾಸವುಳ್ಳ ಯಾವುದೇ ಮುಸ್ಲಿಂ ಈ ಕೃತ್ಯವನ್ನು ಸಮರ್ಥಿಸಿಕೊಳ್ಳುವುದಿಲ್ಲ. ಇಂತಹ ದುರಂತ ಸಂಭವಿಸಿದಾಗ ಸೂಕ್ತ ಕಾನೂನು ಕ್ರಮ ಕೈಗೊಂಡು ಇದರ ಹಿಡಿರುವ ಸರ್ವತ್ರನ್ನು ಶಿಕ್ಷಿಸಲು ನಮ್ಮ ಸಂಪೂರ್ಣ ಬೆಂಬಲ ಇದೆ. ಭಾರತವು ನೂರಾರು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು ಹೊಂದಿದ್ದರೂ ಒಂದೇ ರಾಷ್ಟ್ರ. ಇಂತಹ ಘಟನೆಗಳು ನಮ್ಮಲ್ಲಿ ಉಗ್ರರ ವಿರುದ್ಧ ಹೊಸ ಶಕ್ತಿ, ಹೊಸ ಏಕತೆ ಮತ್ತು ಹೊಸ ದೃಢತೆಯೊಂದಿಗೆ ಹೋರಾಡುವಂತಾಗಲೀ, ಈ ದೇಶದಲ್ಲಿ ಶಾಂತಿ ಸಹಬಾಳ್ವೆ ನೆಲೆಸಲಿ ಎಂಬುವುದೇ ನಮ್ಮೆಲ್ಲರ ಆಶಯ.
ದೇಶದ ಶಾಂತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಗಳಿಗೆ ಶಾಂತಿ ಸಿಗಲಿ. ಅವರ ಕುಟುಂಬಗಳಿಗೆ ಭಗವಂತನು ಧೈರ್ಯ ಮತ್ತು ತಾಳ್ಮೆ ನೀಡಲಿ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.
