ಆಧಾರ್ -ಫ್ಯಾನ್-ಐಟಿ ಡೇಟಾಬೇಸ್ ಗಳು ಲಿಂಕ್ ಆಗಿರುವುದರಿಂದ ಸ್ವಯಂ ಚಾಲಿತವಾಗಿ ರದ್ದಾಗುತ್ತಿದೆ ರೇಷನ್ ಕಾರ್ಡ್ ಗಳು
ಒಂದು ಕಡೆ ಗ್ಯಾರಂಟಿ ಕೊಟ್ಟು, ಇನ್ನೊಂದು ಕಡೆ ಕಸಿದುಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವನಾಡಿ. ಆದರೆ ಈಗ ಹೊಸ ಸಮಸ್ಯೆ ತಲೆದೋರಿದೆ. ಕುಟುಂಬದ ಒಬ್ಬರು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೂ ಸಾಕು ಇಡೀ ಕುಟುಂಬದ ರೇಷನ್ ಕಾರ್ಡ್ನ್ನು ಸಾಫ್ಟ್ವೇರ್ ‘ಅನರ್ಹ’ ಎಂದು ಗುರುತಿಸಿ ರದ್ದುಗೊಳಿಸುತ್ತಿದೆ. ಆಧಾರ್-ಪ್ಯಾನ್- ಐಟಿ ಡೇಟಾಬೇಸ್ಗಳು ಪರಸ್ಪರ ಲಿಂಕ್ ಆಗಿರುವುದರಿ೦ದ ಸಿಸ್ಟಂ ಇದನ್ನು ಸ್ವಯಂಚಾಲಿತವಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ ಸಾವಿರಾರು ಕುಟುಂಬಗಳಲ್ಲಿ ಉಚಿತ ಅಕ್ಕಿ, ಗೃಹಲಕ್ಷ್ಮೀ ರೂ. 2,000, ಉಚಿತ ವಿದ್ಯುತ್, ಶಕ್ತಿ ಯೋಜನೆಯ ಬಸ್ ಪಾಸ್ ಸೌಲಭ್ಯಗಳು ನಿಂತುಹೋಗಿವೆ. ಸೆಪ್ಟೆಂಬರ್ -ಅಕ್ಟೋಬರ್ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಹಲವಾರು ಬಿಪಿಎಲ್ ಕಾರ್ಡ್ ರದ್ದಾಗಿದೆ. ಮೂವರು, ನಾಲ್ವರು ಸದಸ್ಯರ ಕುಟುಂಬ ನಡೆಸುತ್ತಿರುವ ಬಡ ಮನೆಗಳಿಗೆ ಇದು ನಿಜವಾದ ಸಂಕಟ.
ಸಿಸ್ಟಂ ರದ್ದುಗೊಳಿಸುವ ಮಾರ್ಗದರ್ಶನದಲ್ಲಿ ದೊಡ್ಡ ಅನ್ಯಾಯ ಕಂಡುಬರುತ್ತಿದ್ದು, ಕುಟುಂಬದ ಒಬ್ಬ ಯುವಕ ಖಾಸಗಿ ಉದ್ಯೋಗದಲ್ಲಿ ಇದ್ದು ITR ಸಲ್ಲಿಸಿದರೆ, ಅವನ ತಾಯಿ- ತಂದೆ, ಸಹೋದರ- ಸಹೋದರಿ, ಪತ್ನಿ, ಮಕ್ಕಳು ಎಲ್ಲರ ಬಿಪಿಎಲ್ ಕಾರ್ಡ್ ಒಂದೇ ಬಾರಿ ರದ್ದು ಆಗುತ್ತಿದೆ.

ಕೇವಲ ರದ್ದುಗೊಳಿಸುವುದಷ್ಟೇ ಅಲ್ಲ, ಹೊಸ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ಗಳನ್ನು ಸರ್ಕಾರ 2013-14 ರಿಂದ ನೀಡಲೇ ಇಲ್ಲ. ಮದುವೆಯಾಗಿ ರುವವರು, ಪ್ರತ್ಯೇಕ ಮನೆ ಕಟ್ಟಿಕೊಂಡವರು, ಹೊಸ ಕುಟುಂಬ ಆರಂಭಿಸಿದವರು ಎಲ್ಲರೂ ಹಳೆಯ ಕಾರ್ಡ್ನಲ್ಲೇ ಹೆಸರು ಉಳಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಒಬ್ಬರ ತೆರಿಗೆ ಪಾವತಿ ಇಡೀ ಮನೆತನವನ್ನು ಅನರ್ಹರನ್ನಾಗಿ ಮಾಡುತ್ತಿದೆ. NFSA ನಿಯಮಗಳಡಿ ಇದು ‘ಸ್ವಯಂಚಾಲಿತ ಪ್ರಕ್ರಿಯೆ’ ಎಂದು ಇಲಾಖೆಯವರು ಹೇಳುತ್ತಿದ್ದಾರೆ. ಆದರೆ ಜನರ ಪರದಾಟ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಒಂದು ಕಡೆ ಗ್ಯಾರಂಟಿ ಕೊಟ್ಟು ಇನ್ನೊಂದು ಕಡೆ ಕಸಿದುಕೊಳ್ಳುತ್ತಿದೆ. ಗ್ಯಾರಂಟಿ ಯ ನಿಜವಾದ ಅರ್ಥ ಸಾಕಾರಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
