ತಮಿಳುನಾಡು ಮೂಲದ ವಂಚಕನ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು
ಮಂಗಳೂರಿನ ಚಿನ್ನದ ವ್ಯಾಪಾರಿಯೊಬ್ಬರಿಂದ 31 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್ತು ಪಡೆದು ಪರಾರಿಯಾಗಿದ್ದ ಅಂತರಾಜ್ಯ ವಂಚಕ ತಮಿಳುನಾಡು ಮೂಲದ ಅರುಣ್ ಎಂಬಾತನನ್ನು ಮಂಗಳೂರಿನ ಉರ್ವ ಪೊಲೀಸರು ಕೊಯಂಬತ್ತೂರಿನಲ್ಲಿ ಬಂಧಿಸಿ, ಮಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈತ ವಂಚಿಸಿದ 240 ಗ್ರಾಂ ತೂಕದ ಚಿನ್ನದ ಬಿಸ್ಕೀಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನವಂಬರ್ 21 ರಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಉರ್ವಾದ ಗುಜ್ಜಾಡಿ ಚೇಂಬರ್ಸ್‌ನಲ್ಲಿರುವ ಸ್ವರ್ಣ ಜುವೆಲರ್ಸ್‌ಗೆ ಭೇಟಿ ನೀಡಿ, ತಾನು ಬಿಜೈ ಕಾಪಿಕಾಡ್‌ನಲ್ಲಿ ಕಚೇರಿ ತೆರೆಯುತ್ತಿದ್ದು, ಅತಿಥಿಗಳಿಗೆ ನೀಡಲು 10 ಗ್ರಾಂ ತೂಕದ 24 ಚಿನ್ನದ ಬಿಸ್ಕೀಟ್‌ಗಳ ಅಗತ್ಯವಿದೆ ಎಂದು ಸ್ವರ್ಣ ವ್ಯಾಪಾರಿಯನ್ನು ನಂಬಿಸಿದ್ದನು. ನ.22 ರಂದು ಮಧ್ಯಾಹ್ನ ಸಮಯ ಚಿನ್ನವನ್ನು ಬಿಜೈ ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ಗೆ ತಲುಪಿಸಿದರೆ, ತಕ್ಷಣವೇ RTGS ಮೂಲಕ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದನು. ಇದನ್ನು ನಂಬಿದ ಜುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕೀಟ್‌ಗಳನ್ನು ತೆಗೆದುಕೊಂಡು ಹೋದಾಗ, ಆರೋಪಿ ಅವರನ್ನು ಕಟ್ಟಡದ 5ನೇ ಮಹಡಿಯ ಕೆಫೆಟೇರಿಯಾಕ್ಕೆ ಕರೆದೊಯ್ದು ಚಿನ್ನವನ್ನು ಪಡೆದು, ತಾನು ಮೂರನೇ ಮಹಡಿಯಲ್ಲಿರುವ ಕಚೇರಿಗೆ ಹೋಗಿ RTGS ಮಾಡುತ್ತೇನೆಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದನು.

ಈ ಬಗ್ಗೆ ಸ್ವರ್ಣ ಜುವೆಲರ್ಸ್ ಮಾಲಿಕರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಬೆನ್ನು ಹತ್ತಲು ಕಾರ್ಯಪ್ರವೃತ್ತರಾದ ಉರ್ವ ಪೊಲೀಸರು ಗುಪ್ತ ಮಾಹಿತಿಗಳನ್ನು ಆಧರಿಸಿ, ಆರೋಪಿಯನ್ನು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪತ್ತೆ ಹಚ್ಚಿ, ನ.26 ರಂದು ಕೊಯಂಬತ್ತೂರು ಜಿಲ್ಲೆಯ ಪುಲಿಯಕುಲಂನಲ್ಲಿ ಆರೋಪಿಯನ್ನು ಬಂಧಿಸಿ, ಆತನನ್ನು ವಿಚಾರಣೆ ನಡೆಸಿದಾಗ ಆತನ ನಿಜವಾದ ಹೆಸರು ಪುಗಲ್ ವಾಸನ್ ಯಾನೆ ಪುಗಲ್ ಹಸನ್ ಯಾನೆ ಅರುಣ್ ಎಂದು ತಿಳಿದುಬಂದಿದೆ. ಈತ ನಕಲಿ ಹೆಸರುಗಳನ್ನು ಬಳಸಿ ವಂಚನೆ ಮಾಡುವ ಚಟ ಹೊಂದಿದ್ದಾನೆ. ಆರೋಪಿಯಿಂದ ಕಳವಾಗಿದ್ದ 31,04,000 ರೂ. ಮೌಲ್ಯದ 240 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬಿಸ್ಕೀಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕುಖ್ಯಾತ ವಂಚಕನಾಗಿದ್ದು, ದೇಶದ ವಿವಿದ ರಾಜ್ಯಗಳಲ್ಲಿ ಇದೇ ಮಾದರಿಯ ಹಲವು ವಂಚನೆ ಕೃತ್ಯಗಳನ್ನು ಎಸಗಿದ್ದು, ಆ ಬಗ್ಗೆಯೂ ಪ್ರಕರಣಗಳು ದಾಖಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತರಾದ ಸುದೀರ್ ಕುಮಾರ್ ರೆಡ್ಡಿ, IPS, ಅವರ ಮಾರ್ಗದರ್ಶನದಲ್ಲಿ, ಬಂದರು ಎಸಿಪಿಯವರ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಮ್, PSI ಗುರಪ್ಪಕಾಂತಿ, PSI ಮಂಜುಳಾ, ASI ವಿನಯ್ ಕುಮಾರ್, ಸಿಬ್ಬಂದಿಗಳಾಗ ಅನಿಲ್, ಭಾಸ್ಕರ್, ಹರೀಶ್, ವೆಂಕಟೇಶ್, ಚಂದ್ರಹಾಸ, ಯೆಲ್ಲಾಲಿಂಗ, ಮೊದಲಾದವರು ಈ ಯಶಸ್ವಿ ಕಾರ್ಯಾಚರಣೆ ಭಾಗವಹಿಸಿದ್ದರು.
