ಕರಾವಳಿ ಕಾಂಗ್ರೆಸ್ ನಲ್ಲಿ ಮೊಯ್ಲಿ, ಪೂಜಾರಿ, ರೈ ಬಣ ಯುಗ ಮುಗಿಯಿತು.. ಈಗೇನಿದ್ದರೂ ಡಿ.ಕೆ, ಸಿದ್ದು ಬಣ.!

ಕರಾವಳಿ

ಕೆಟ್ಟ ಮೇಲೂ ಬುದ್ಧಿ ಬರದ ಕಾಂಗೈ ನಾಯಕರು!

ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಅನ್ನುವ ಮಾತಿದೆ. ಆದರೆ ಕರಾವಳಿಯ ಕಾಂಗೈ ನಾಯಕರಿಗೆ ಅದೂ ಬಂದಿಲ್ಲ ಅನ್ನುವುದೇ ದುರ್ದೈವದ ಸಂಗತಿ. ಎಂಭತ್ತು, ತೊಂಬತ್ತರ ದಶಕದಲ್ಲಿ ಕರಾವಳಿ ಕಾಂಗ್ರೆಸ್ ಅನ್ನು ಆಳುತ್ತಿದ್ದುದು ಆಸ್ಕರ್, ಮೊಯ್ಲಿ, ಪೂಜಾರಿ ಅನ್ನುವ ತ್ರಿಮೂರ್ತಿಗಳು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಹವಾ.. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಪರಿಸ್ಥಿತಿ. ಗತವೈಭವದಲ್ಲಿ ಮೆರೆಯುತ್ತಿದ್ದ ಪಕ್ಷ ಹರಿದು ಹಂಚಿ ಹೋಗಲು ಮುಖ್ಯ ಕಾರಣವಾಗಿದ್ದೇ ಬಣ ಬಡಿದಾಟ. ಮೊಯ್ಲಿ, ಪೂಜಾರಿ ಬಣ ತಾರಕಕ್ಕೇರಿ ಪಕ್ಷದೊಳಗಿನ ಒಬ್ಬೊಬ್ಬ ನಾಯಕರು ಒಂದೊಂದು ಬಣದಲ್ಲಿ ಗುರುತಿಸಿ ಮೆರೆದಾಡುತ್ತಿದ್ದ ಪಕ್ಷವನ್ನು ಮೋರಿಗೆ ಹಾಕಿದರೇ ವಿನಃ ಪಕ್ಷ ಕಟ್ಟುವ ಉತ್ಸಾಹ ತೋರಲಿಲ್ಲ. ತಮ್ಮ ತಮ್ಮ ಅಧಿಕಾರಕ್ಕಾಗಿ ನಾಯಕರ ಹಿಂಬಾಲಕರಾಗಿ ಬಣ ಬಡಿದಾಟದ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಜಕೀಯ ಅಧೋಗತಿಗೆ ತಂದರು. ಮೊಯ್ಲಿ, ಪೂಜಾರಿ ಯುಗ ಮುಗಿದ ನಂತರ ಕರಾವಳಿಯಲ್ಲಿ ರಮಾನಾಥ ರೈ ಬಣ ಕೈ ಮೇಲಾಯಿತು. ತಮ್ಮ ಬಣದವರಿಗೆ ಅಧಿಕಾರ ನೀಡಲು ಇನ್ನಿತರ ಕಾಂಗೈ ನಾಯಕರನ್ನು ಮೂಲೆಗುಂಪು ಮಾಡಿದರು. ಕಾಂಗೈ ಪಕ್ಷದೊಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಎನ್ ಕ್ಯಾಶ್ ಮಾಡಿಕೊಂಡ ಬಿಜೆಪಿ ಕರಾವಳಿಯಲ್ಲಿ ಸದೃಢವಾಗಿ ಬೆಳೆಯಿತು.

ಕರಾವಳಿಯಲ್ಲಿ ಬಿಜೆಪಿ ಸದೃಢವಾಗಿ ಬೆಳೆದ ಹಿಂದೆ ಮತೀಯವಾದದ ಪಾತ್ರ ಹಿಂದೆ ಎಂದು ವಿಶ್ಲೇಷಿಸಲಾಗುತ್ತದೆ. ಅದು ಒಂದು ಭಾಗವಷ್ಟೇ. ಕಾಂಗೈ ನಾಯಕರೊಳಗೆ ತಾರಕಕ್ಕೇರಿದ ಗುಂಪುಗಾರಿಕೆಯ ಯಥೇಚ್ಛ ಲಾಭ ಪಡೆದು ಬಿಜೆಪಿ ಫೀನಿಕ್ಸ್ ನಂತೆ ಎದ್ದುಬಂದಿದೆ ಅನ್ನುವುದನ್ನು ಅಲ್ಲಗಳೆಯಲಾಗದು. ಕಾಂಗೈ ನಾಯಕರು ಬಣ ರಾಜಕಾರಣದಲ್ಲೇ ಬ್ಯುಸಿಯಾಗಿ ಪಕ್ಷ ಕಟ್ಟುವ ಕೆಲಸ ಮಾಡದ ಪರಿಣಾಮ ಕರಾವಳಿಯಲ್ಲಿ ಕೇಸರಿ ಪಡೆ ರಾರಾಜಿಸಿತು.

ಇಂದು ಕರಾವಳಿಯಲ್ಲಿ ಮೊಯ್ಲಿ ಬಣವಿಲ್ಲ, ಪೂಜಾರಿ ಬಣವಿಲ್ಲ. ಅದೆಲ್ಲ ಮುಗಿದ ಅಧ್ಯಾಯ. ರೈ ಯಂತಹ ಘಟಾನುಘಟಿ ನಾಯಕ ರಾಜಕೀಯವಾಗಿ ಮೂಲೆಗುಂಪು ಆದ ಪರಿಣಾಮ ರೈ ಬಣ ಕೂಡ ತೆರೆಮರೆಗೆ ಸರಿಯಿತು. ಬಣ ರಾಜಕಾರಣದ ಲಾಭ ಪಡೆದ ಕಮಲ ಪಕ್ಷ ಕರಾವಳಿಯಲ್ಲಿ ಫಳ ಫಳ ಹೊಳೆಯಿತು. ಆದರೆ ತಮ್ಮ ಹಿಂದಿನವರು ಮಾಡಿದ ತಪ್ಪನ್ನು ಈಗಿನ ಹೊಸ ಜಮಾನದ ಕರಾವಳಿಯ ಕಾಂಗೈ ನಾಯಕರು ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ.

ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿದೆ. ಉಡುಪಿಯಲ್ಲಿ ಕಾಂಗ್ರೆಸ್ ಉಸಿರಾಡಲು ಕಷ್ಟಪಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು (ಉಳ್ಳಾಲ) ಬಿಟ್ಟರೆ ಬೇರೆ ಕಡೆ ಗೆಲ್ಲಲು ಹರಸಾಹಸ ಪಡುತ್ತಿದೆ. ಉಳ್ಳಾಲ ಅಲ್ಪಸಂಖ್ಯಾತ ಸಮುದಾಯ ಮೇಜರಿಟಿ ಇರುವುದರಿಂದ ಅಲ್ಲಿ ಕಾಂಗ್ರೆಸ್ ಉಸಿರಾಡುತ್ತಿದೆ. ಪುತ್ತೂರಿನಲ್ಲಿ ಬಿಜೆಪಿಯೊಳಗಿನ ಗುದ್ದಾಟ ಅಶೋಕ್ ರೈ ಗೆ ಅದೃಷ್ಟ ನೀಡಿದೆ ಹೊರತು ಅಲ್ಲಿ ಕಾಂಗ್ರೆಸ್ ಸಾಧನೆಯಿಂದ ಗೆಲುವಾಗಿಲ್ಲ. ಪೂರ್ತಿ ಮಣ್ಣು ಮುಕ್ಕಿರುವ ಕಾಂಗ್ರೆಸ್ ಪಕ್ಷವನ್ನು ಮರಳಿ ಕಟ್ಟಿ ರಾಜವೈಭೋಗದಿಂದ ಮೆರೆಸಬೇಕಾದ ಹೊಸ ತಲೆಮಾರಿನ ಕಾಂಗೈ ನಾಯಕರು ಮತ್ತೆ ಹಿಂದಿನವರು ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಿದ್ದಾರೆ.

ಕರಾವಳಿಯಲ್ಲಿ ಪಕ್ಷ ಪೂಜೆ ಬದಲು ನಾಯಕರು ವ್ಯಕ್ತಿ ಪೂಜೆಗೆ ಇಳಿದಿದ್ದಾರೆ. ಗುರು ಗಾಂಧಿ ಸಂವಾದದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮುಂದೆ ಕರಾವಳಿಯ ಕೆಲ ಕಾಂಗ್ರೆಸ್ ನಾಯಕರು ಗುಂಪುಗಾರಿಕೆಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮುಂದೆ ಕರಾವಳಿಯ ಯುವ ನಾಯಕರ ಗುಂಪು ಡಿಕೆಶಿ ಮುಖ್ಯಮಂತ್ರಿ ಆಗಲಿ ಅನ್ನುವ ಜೈಕಾರ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದಾಗ ಅವರ ಪರವಾಗಿ ಗುರುತಿಸಿಕೊಂಡವರು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಜಯಘೋಷ ಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಬೆಳವಣಿಗೆಗೆ ಇತಿಶ್ರೀ ಹಾಕಲು ಡಿನ್ನರ್ ಪಾರ್ಟಿ ಆಯೋಜಿಸಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾದರೆ, ಇತ್ತ ಕರಾವಳಿ ಕಾಂಗೈ ನಾಯಕರೊಳಗಡೆ ಸೃಷ್ಟಿಯಾದ ಬಣ ರಾಜಕಾರಣ ನಿಷ್ಠಾವಂತ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಇರಿಸು ಮುರಿಸು ತರಿಸಿದೆ. ಪಕ್ಷ ಕಟ್ಟಬೇಕಾದ ಯುವ ನಾಯಕರೇ ಡಿಕೆಶಿ, ಸಿದ್ಧು ಬಣವೆಂದು ಬಹಿರಂಗವಾಗಿ ಫೀಲ್ಡಿಗೆ ಇಳಿದರೆ ಕಾಂಗ್ರೆಸ್ ಪಕ್ಷವನ್ನು ಕಟ್ಟುವವರು ಯಾರು? ಕರಾವಳಿಯಲ್ಲಿ ಕಾಂಗೈಗೆ ಅಂತಿಮ ಮೊಳೆ ಹೊಡೆಯುವ ಮುನ್ನ ಪಕ್ಷದ ಪ್ರಾಮಾಣಿಕ, ನಿಷ್ಠಾವಂತರು ಮುಂದೆ ಬರಬೇಕಾಗಿದೆ.