ಸುಳ್ಳು ಜಾತಿ ಪ್ರಮಾಣಪತ್ರ, ಶಾಸಕ ಕೊತ್ತೂರು ಮಂಜುನಾಥ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ರಾಜ್ಯ

ಪರಿಶಿಷ್ಟ ಜಾತಿಗೆ ಮೀಸಲಾದ ಮುಳಬಾಗಿಲು ಕ್ಷೇತ್ರದಲ್ಲಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆಂಬ ಆರೋಪದ ಕುರಿತು ದಾಖಲಾಗಿದ್ದ ಎಫ್‌ಐಆರ್‌ ರದ್ದು ಕೋರಿ ಕೋಲಾರದ ಹಾಲಿ ಶಾಸಕ ಕೊತ್ತೂರು ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಅಲೋಕ್‌ ಅರಾಧೆ ಅವರಿದ್ದ ವಿಭಾಗೀಯಪೀಠ ಶುಕ್ರವಾರ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಹೈಕೋರ್ಟ್‌ ಆದೇಶದಂತೆ ಎಫ್‌ಐಆರ್‌ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ವಿಶೇಷ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಹೈಕೋರ್ಟ್‌ನ ವಿಭಾಗೀಯಪೀಠದ ಮುಂದೆ ಮಂಜುನಾಥ್‌ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬಾಕಿ ಇದ್ದು, ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ರಾಜ್ಯ ಸರಕಾರದ ಪರ ವಿಶೇಷ ವಕೀಲ ಸಿ.ಜಗದೀಶ್‌ ನ್ಯಾಯಪೀಠದ ಮುಂದೆ ಹಾಜರಾಗಿ, ”ಹೈಕೋರ್ಟ್‌ ವಿಭಾಗೀಯಪೀಠದ ಮುಂದೆ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರರು ಅಲ್ಲಿ19 ಕಚೇರಿ ಆಕ್ಷೇಪಣೆಗಳು ಬಾಕಿ ಇದ್ದರೂ ಅವುಗಳನ್ನು ಸರಿಪಡಿಸಿಲ್ಲ. ಜತೆಗೆ ವಿಚಾರಣೆಗೆ ಆಸಕ್ತಿ ತೋರುತ್ತಿಲ್ಲ. ಮುಂದಿನ ವಿಚಾರಣೆ 2026ರ ಜ.14ಕ್ಕೆ ನಿಗದಿಯಾಗಿದೆ” ಎಂದು ವಿವರಿಸಿದರು.

ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ”ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ವಿಭಾಗೀಯಪೀಠ ವಿಚಾರಣೆ ನಡೆಸುತ್ತಿದೆ. ಆದರೆ ಅರ್ಜಿದಾರರು ಅದರ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಅದರ ಮುಂದಿರುವ ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿಲ್ಲ. ಇದರಿಂದ ಕಾನೂನಿನ ದುರ್ಬಳಕೆ ಆಗಲಿದೆ. ಇಂತಹ ನಡೆಯನ್ನು ಸಹಿಸಲಾಗದು” ಎಂದು ಅರ್ಜಿಯನ್ನು ವಜಾಗೊಳಿಸಿದೆ.