ಮಗು ಕಳೆದುಕೊಂಡ ಬಾಣಂತಿ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ನಷ್ಟ ಪರಿಹಾರ ಒದಗಿಸಿ ಕೊಡಲು ಜಿಲ್ಲಾಧಿಕಾರಿಗಳಿಗೆ ಡಿವೈಎಫ್ಐ ಮನವಿ
ಕೈಕಂಬ: ಬಂಟ್ವಾಳ ಭಾಗದ ಅಮ್ಮುಂಜೆ ಪ್ರದೇಶದ ನಿವಾಸಿ ದಿವ್ಯ ನವೀನ್ ದಿನಾಂಕ 28-11-2025 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುರುಪುರ-ಕೈಕಂಬದ ವಿಜಯ ನರ್ಸಿಂಗ್ ಹೋಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಕಳೆದ ಒಂಬತ್ತು ತಿಂಗಳ ಎಲ್ಲಾ ಬಗೆಯ ಪರೀಕ್ಷೆಗಳು ಅದೇ ನರ್ಸಿಂಗ್ ಹೋಮ್ ನಲ್ಲಿ ನಡೆಸಿದ್ದರು ಆ ಎಲ್ಲಾ ಪರೀಕ್ಷೆಗಳು ಸಹಜವಾಗಿರುವ (NORMAL) ವರದಿಗಳೇ ಆಗಿದ್ದವೆಂದು ವೈದ್ಯರು ತಿಳಿಸಿದ್ದರು.
ದಿವ್ಯ ನವೀನ್ ದಾಖಲಾದ ದಿನದಂದೇ ರಾತ್ರಿ 8-45 ರ ಹೊತ್ತಿಗೆ ಗಂಡು ಮಗುವಿಗೆ ಜನ್ಮ ನೀಡಿರುತ್ತಾರೆ. ಈ ವೇಳೆ ಮಗು ಹಲವು ಬಗೆಯ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದೆ ರಾಕರ್ ಬಾಟಮ್ ಫೂಟ್, ಮತ್ತದರ ಕೈ, ಕಿವಿ, ಮೂಗು, ಖಾಸಗಿ ಭಾಗಗಳು ಯಾವೂದು ಸರಿಯಾಗಿರದೆ ಜನನವನ್ನು ಹೊಂದಿರುತ್ತದೆ. ಈ ಎಲ್ಲಾ ಗಂಭೀರ ಸಮಸ್ಯೆಗಳಿದ್ದರೂ ಆಸ್ಪತ್ರೆ ವೈದ್ಯರು ಮಾತ್ರ ಯಾವೊಂದು ವಿಚಾರಗಳನ್ನು ಮನೆ ಮಂದಿಗೆ ತಿಳಿಸದೆ ಮುಚ್ವಿಟ್ಟಿರುತ್ತಾರೆ. ಕೇವಲ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ತಿಳಿಸಿ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಅತ್ತಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕೆಂದು ತಾರತುರಿಯಲ್ಲಿ ಬಾಣಂತಿಯಿಂದ ಬಿಲ್ಲನ್ನು ಕೂಡಾ ಸಂಗ್ರಹಿಸದೆ ಡಿಸ್ಚಾರ್ಜ್ ಮಾಡಿಸಿರುತ್ತಾರೆ. ಮಗು ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರವಷ್ಟೇ ಅದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಮನೆಮಂದಿ ತಿಳಿದುಕೊಂಡಿದ್ದರು. ನಂತರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕುಟುಂಬ ಮಗುವನ್ನು ವೆನ್ಲಾಕಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ದಿನಾಂಕ: 30-11-25 ರಂದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು ದಿನಾಂಕ 10-12-25 ರಂದು ಕೊನೆಯುಸಿರೆಳೆದಿದೆ.

ಮಗುವಿನ ಸಾವಿನಿಂದ ತಾಯಿ ದಿವ್ಯ ನವೀನ್ ಮತ್ತು ಮನೆ ಮಂದಿ ಮಾನಸಿಕವಾಗಿ ಕುಗ್ಗಿಹೋಗಿದ್ದು ಈ ಎಲ್ಲಾ ಸಮಸ್ಯೆಗಳಿಗೆ ವಿಜಯ ನರ್ಸಿಂಗ್ ಹೋಮ್ ನ ವೈದ್ಯರಾದ ಮೆಕಲಾ ಕಾರಣರಾಗಿರುತ್ತಾರೆ. ಮಗುವಿನ ಬೆಳವಣೆಗೆಗಳ ಬಗ್ಗೆ ಪ್ರತೀ ಬಾರಿ ಪರೀಕ್ಷೆ ಮಾಡುವಾಗ ಯಾವುದೇ ರೀತಿಯ ಮಾಹಿತಿಯನ್ನು ನೀಡಿದೆ ಕರ್ತವ್ಯ ಲೋಪ ಎಸಗಿರುತ್ತಾರೆ. ಮತ್ತು ಎಲ್ಲಾ ಬಗೆಯ ಪರೀಕ್ಷೆಗಳನ್ನು ತಮ್ಮ ಆಸ್ಪತ್ರೆಯಲ್ಲೇ ನಡೆಸಿ ತಪ್ಪಾದ ಮಾಹಿತಿಗಳನ್ನು ಒದಗಿಸಿರುತ್ತಾರೆ. ಕನಿಷ್ಟ 22ನೇ ವಾರದ ಪರೀಕ್ಷೆಗಳನ್ನು ಮಾಡಿದ ನಂತರವೂ ಮಗುವಿನ ಬೆಳವಣೆಗೆಗಳ ಕನಿಷ್ಟ ಮಾಹಿತಿಯನ್ನು ಕೂಡ ಒದಗಿಸದೆ ಗಂಭೀರವಾದ ತಪ್ಪನ್ನು ಎಸಗಿರುತ್ತಾರೆ. ಸಾಮಾನ್ಯವಾಗಿ 22ನೇ ವಾರದ ರೇಡಿಯೋಲಾಜಿಸ್ಟ್ ಬಳಿ ಮಾಡಿಸಬೇಕಾಗಿದ್ದ ಪರೀಕ್ಷೆಯನ್ನು ಕೂಡಾ ಗೈನಕೊಲಾಜಿಸ್ಟ್ ಬಳಿಯೇ ನಡೆಸಿರುವುದು ಅತ್ಯಂತ ಗಂಭೀರ ಅಪರಾಧವಾಗಿದೆ. ಇಂತಹ ಹಲವಾರು ಲೋಪಗಳು ಈ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ ಎಂಬ ಆರೋಪಗಳು ಕೂಡಾ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈಗಾಗಲೇ ಬಾಣಂತಿ ದಿವ್ಯ ನವೀನ್ ಅವರು ತಮ್ಮ ಮಗುವನ್ನು ಕಳೆದುಕೊಂಡಿದ್ದಲ್ಲದೆ ಮಾನಸಿಕವಾಗಿ ವೇದನೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ತಪ್ಪೆಸಗಿದ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಬಾಣಂತಿ ದಿವ್ಯ ನವೀನ್ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ನಷ್ಟ ಪರಿಹಾರ ಒದಗಿಸಿ ಕೊಡಲು ಮುಂದಾಗಬೇಕೆಂದು ಸಂತ್ರಸ್ತೆಯೊಂದಿಗೆ ಡಿವೈಎಫ್ಐ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದೆ.
