ಸಂಕ್ರಾಂತಿ ಬಳಿಕ ಸಂಪುಟ ಪುನಾರಚನೆ ಬಹುತೇಕ ಖಚಿತ; ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯ

ರಾಜ್ಯ

ಸಂಕ್ರಾಂತಿ ಬಳಿಕ ಸಿದ್ದರಾಮಯ್ಯ ಸಂಪುಟ ವಿಸ್ತರಣೆ, ಪುನಾರಚನೆ ಆಗುವುದು ಬಹುತೇಕ ಖಚಿತವಾಗಿದೆ ಸಂಪುಟಕ್ಕೆ ಸೇರಿಸಿಕೊಳ್ಳುವ 14 ಶಾಸಕರ ಪಟ್ಟಿಯನ್ನು ಈಗಾಗಲೇ ತಯಾರಿ ಮಾಡಿದ್ದು, ಅದನ್ನು ಹಿಡಿದು ಸಿದ್ದರಾಮಯ್ಯ ದೆಹಲಿ ವಿಮಾನ ಏರಲಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನವರಿ 9ರ ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಸಿದ್ದರಾಮಯ್ಯ ಜನವರಿ 14ರ ಬಳಿಕ ದೆಹಲಿಗೆ ಭೇಟಿ ನೀಡಲಿದ್ದು, ಸಂಪುಟ ವಿಸ್ತರಣೆ, ಪುನಾರಚನೆಗೆ ಒಪ್ಪಿಗೆ ಪಡೆಯಲಿದ್ದಾರೆ.

ನವೆಂಬರ್ 20ರಂದು ಸರ್ಕಾರ ಎರಡೂವರೆ ವರ್ಷ ಪೂರೈಸಿದಾಗಲೇ ಸಿದ್ದರಾಮಯ್ಯ ಸಂಪುಟ ಪುನಾರಚನೆ ಬೇಡಿಕೆ ಮುಂದಿಟ್ಟಿದ್ದರು. ಆದರೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಉಂಟಾದ ಗೊಂದಲ, ಬೆಳಗಾವಿಯ ಚಳಿಗಾಲದ ಅಧಿವೇಶನದ ಕಾರಣ ಅದು ಮುಂದಕ್ಕೆ ಹೋಗಿತ್ತು. ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿ, ಹೊಸ ಶಾಸಕರಿಗೆ ಅವಕಾಶ ನೀಡಿ 2028ರ ಚುನಾವಣೆಯತ್ತ ಗಮನ ಹರಿಸಲಿದ್ದಾರೆ. ಇದಕ್ಕಾಗಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿದ್ದಾರೆ. ಜನವರಿ 14ರ ಬಳಿಕ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಗೆ ಬುಲಾವ್ ನೀಡುವ ನಿರೀಕ್ಷೆ ಇದ್ದು, ಆಗ ಸಿದ್ದರಾಮಯ್ಯ ತಯಾರು ಮಾಡಿದ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡಿ, ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.

ಇಬ್ಬರು ಸಚಿವ ರಾಜೀನಾಮೆ ನೀಡಿದ್ದು, ಸಂಪುಟದಲ್ಲಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ ಹೊಸ ಶಾಸಕರಿಗೂ ಸಚಿವರಾಗುವ ಅವಕಾಶ ನೀಡುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ. ಉತ್ಸಾಹದಿಂದ ಕೆಲಸ ಮಾಡುವ ಶಾಸಕರನ್ನು ಸಚಿವರನ್ನಾಗಿ ಮಾಡುವ ತಂತ್ರವನ್ನು ಸಿದ್ದರಾಮಯ್ಯ ರೂಪಿಸಿದ್ದಾರೆ. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಹೊಸ ಸಂಪುಟವನ್ನು ರಚನೆ ಮಾಡುವುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ. ಆದರೆ ಇದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕಿದೆ. ಡಿ.ಕೆ.ಶಿವಕುಮಾರ್ ಮತ್ತು ಅವರ ಬಣದ ಶಾಸಕರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಬೇಕಿದೆ.