ಜಿಲ್ಲೆಯಲ್ಲಿ ಮತ್ತೆ ಚಿಗಿತುಕೊಳ್ಳುತ್ತಿರುವ ಅನೈತಿಕ ಪೊಲೀಸ್ ಗಿರಿ.!

ಕರಾವಳಿ

ಗಂಜಿಮಠ ಗೂಡಂಗಡಿಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ದುರ್ಷ್ಕರ್ಮಿಗಳು; ಎಫ್ ಐ ಆರ್ ದಾಖಲು

ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಿಗಿತುಕೊಳ್ಳುತ್ತಿದ್ದು, ಬಾಲ ಬಿಚ್ಚುವ ದುರ್ಷ್ಕರ್ಮಿಗಳ ಬಾಲ ಕಟ್ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಖಡಕ್ ಆಫೀಸರ್ಸ್ ಇಲ್ಲದೇ ಇದ್ದರೆ ಇಂತಹ ಕ್ಷುಲ್ಲಕ ಘಟನೆಗಳು ಕೋಮು ಗಲಭೆಗಳಿಗೆ ಕಾರಣವಾಗುತ್ತಿತ್ತು. ಆ ಮಟ್ಟಿಗೆ ಇಲ್ಲಿನ ಪೊಲೀಸ್ ಇಲಾಖೆಯ ಸ್ಥೈರ್ಯವನ್ನು ಮೆಚ್ಚಲೇಬೇಕು.

ಗಂಜಿಮಠ ಗಾಂಧಿನಗರ ಬಳಿಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವ, ಜಾತ್ರೆ, ಕಾರ್ಯಕ್ರಮಗಳಿಗೆ ತೆರಳಿ ಚರಂಬುರಿ ವ್ಯಾಪಾರ ಮಾಡುವ ದುಗ್ಗೋಡಿ ಉಮರಬ್ಬ ಎಂಬವರ ಗೂಡಂಗಡಿಗೆ ನುಗ್ಗಿದ ದುರ್ಷ್ಕರ್ಮಿಗಳು ಗಾಂಧಿನಗರದ ಜಂಕ್ಷನ್ ನಲ್ಲಿರುವ ಅಂಗಡಿಯನ್ನು ಮುಚ್ಚಬೇಕು, ಇಲ್ಲದಿದ್ದರೆ ಅಂಗಡಿಯನ್ನೇ ಧ್ವಂಸ ಮಾಡಿ ಬಿಡುವುದಾಗಿ ಬೆದರಿಕೆ ಹಾಕಿದ್ದು, ಜೀವ ಸಹಿತ ಬಿಡುವುದಿಲ್ಲ, ದನಕ್ಕೆ ಮಾಡಿದ ಹಾಗೆ ನಿನಗೂ ಮಾಡುತ್ತೇವೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ಉಮರಬ್ಬನವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .ಈ ಸಂಬಂಧ ಅನೈತಿಕ ಪೊಲೀಸ್ ಗಿರಿ ಗೆ ಮುಂದಾದ ದುರ್ಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾಗಿದೆ.

ದುಗ್ಗೋಡಿ ಉಮರಬ್ಬ ಎಂಬವರು ಎಡಪದವು ಬಳಿಯ ಪೂಪಾಡಿಕಲ್ಲು ಎಂಬಲ್ಲಿ ಜನವರಿ 11 ರಂದು ಅಯ್ಯಪ್ಪ ಮಾಲಾಧಾರಿಗಳ ಪೂಜಾ ಕಾರ್ಯಕ್ರಮಕ್ಕೆ ಚರುಂಬರಿ ಇಟ್ಟು ವ್ಯಾಪಾರ ಮಾಡುತ್ತಿದ್ದರು. ಏಕಾಏಕಿಯಾಗಿ ಚರುಂಬುರಿ ಅಂಗಡಿಗೆ ದನ ನುಗ್ಗಿದಾಗ ನೀರುಳ್ಳಿ ತುಂಡು ಮಾಡುವ ಚಾಕು ದನದ ಮುಖಕ್ಕೆ ಬಡಿದು ವಿಪರೀತ ಗಾಯವಾಗಿತ್ತು. ಸ್ಥಳೀಯರು ದನಕ್ಕೆ ಪ್ರಥಮ ಚಿಕಿತ್ಸೆ ನೀಡಿದ್ದರು. ಈ ವಿಚಾರಕ್ಕೆ ಬಣ್ಣ ಕಟ್ಟಲಾಗಿತ್ತು. ಪೊಲೀಸ್ ಠಾಣೆಗೆ ದೂರು ಹೋಗಿತ್ತು. ಬಜಪೆ ಪೊಲೀಸರು ಉಮರಬ್ಬರವರನ್ನು ಕರೆಸಿ ವಿಚಾರಣೆ ಕೂಡ ನಡೆಸಿದ್ದರು. ಆದರೆ ಇದು ಉದ್ದೇಶಪೂರ್ವಕ ಕೃತ್ಯವಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂಬುದಾಗಿ ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿತ್ತು. ಇಷ್ಟಕ್ಕೆ ತೃಪ್ತರಾಗದ ದುರ್ಷ್ಕರ್ಮಿಗಳು ಬಡ ವ್ಯಾಪಾರಿಯ ಗೂಡಂಗಡಿ ಗೆ ನುಗ್ಗಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅ.ಕ್ರ.ಸಂಖ್ಯೆ 0023/2026 ರಂತೆ ಆರೋಪಿಗಳಾದ ಲತೀಶ್, ಸುಭಾಶ್ ಮತ್ತಿತರರ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿಯ ಗೂಂಡಾ ವರ್ತನೆಗಳು ಮರುಕಳಿಸುತ್ತಿದೆ. ಮಳಲಿ ಎಂಬಲ್ಲಿ ಅಕ್ರಮವಾಗಿ ದನ ಸಾಗಿಸುವುದಾಗಿ ಆರೋಪಿಸಿ ಬೈಕ್ ನಲ್ಲಿ ತೆರಳುತ್ತಿದ್ದ ತಂದೆ, ಮಗಳ ಮೇಲೆ ದಾಳಿ ನಡೆಸಲಾಗಿತ್ತು. ಜಾರ್ಖಂಡ್ ಮೂಲದ ನಿವಾಸಿಯನ್ನು ಅಕ್ರಮ ಬಾಂಗ್ಲಾ ಪ್ರಜೆ ಎಂದು ಆರೋಪಿಸಿ ಥಳಿಸಿದ ಪ್ರಕರಣ ನಡೆದಿತ್ತು. ಜಿಲ್ಲೆಯಲ್ಲಿ ಮತೀಯ ಗಲಭೆಗಳಿಗೆ ಇಂತಹ ಅನೈತಿಕ ಪೊಲೀಸ್ ಗಿರಿ ಪ್ರಕರಣ ಕೂಡ ದೊಡ್ಡ ಪಾತ್ರ ವಹಿಸುತ್ತಿತ್ತು. ಆದರೆ ಮಂಗಳೂರಿನ ಪೊಲೀಸರು ಅನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದು ದುರ್ಷ್ಕರ್ಮಿಗಳಿಗೆ ನಡುಕ ಹುಟ್ಟಿಸಿದೆ.