ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದೆ ಇರುವ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳುಗಳ ಕಾಲ ವಿಸ್ತರಿಸಬೇಕೆಂದು ಸರ್ಕಾರಕ್ಕೆ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಒತ್ತಾಯಿಸಿದೆ. ಅವಧಿ ವಿಸ್ತರಣೆ ಮಾಡದೆ ಇದ್ದರೆ 27ರಂದು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ-ಮುಖ್ಯ ಮಂತ್ರಿ ಅವರಿಗೆ ಪತ್ರ ಬರೆದಿರುವ ಮಹಾಒಕ್ಕೂಟ, ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದೆ ಇರುವ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳು ಮುಂದುವರಿಸುವಂತೆ ಮನವಿ ಮಾಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ 1993ರ ಪ್ರಕರಣ ಅನ್ವಯ ಚುನಾಯಿತರಾಗಲು ಅರ್ಹರಾದ ವ್ಯಕ್ತಿಗಳನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಬಹುದು. ಅಥವಾ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬಹುದು ಎಂದು ಕಾಯ್ದೆಯಲ್ಲಿ ಉಲ್ಲೇಖವಿದೆ. ಇದೇ ಮಾದರಿಯಲ್ಲಿ 1990ರ ದಶಕದಲ್ಲಿ ಗ್ರಾಮ ಪಂಚಾಯಿತಿಗಳ ಅವಧಿಯನ್ನು ವಿಸ್ತರಿಸಿದ್ದನ್ನು ಗಮನಿಸಬಹುದಾಗಿದೆ ಎಂದು ಮಹಾಒಕ್ಕೂಟದ ಅಧ್ಯಕ್ಷ ಕಾಡುಶೆಟ್ಟಿಹಳ್ಳಿ ಸತೀಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
2020ರ ಅವಧಿಯಲ್ಲಿ ಕೋವಿಡ್ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಾಗದೆ ಚುನಾವಣಾ ಆಯೋಗ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಗ್ರಾಪಂ ಸದಸ್ಯರ ಅವಧಿ ಮುಕ್ತಾಯ ಆಗುತ್ತಿದ್ದಾಗ ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಂದಿನ ಸಿಎಂ ಯಡಿಯೂರಪ್ಪಗೆ ಆಡಳಿತ ಸಮಿತಿಯ ಅವಧಿಯನ್ನು ಆರು ತಿಂಗಳ ಕಾಲ ಮುಂದುವರಿಸುವಂತೆ ಒತ್ತಾಯ ಮಾಡಿದ್ದರು ಎಂದು ನೆನಪಿಸಿದ್ದಾರೆ. ಅವಧಿ ವಿಸ್ತರಣೆ ಮಾಡದೆ ಇದ್ದರೆ ಹೋರಾಟ ನಡೆಸುವುದಾಗಿ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ಎಚ್ಚರಿಕೆ ನೀಡಿದೆ.
