ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ; ಎಂಡಿಎಂಎ ಮಾದಕ ವಸ್ತು ಸಹಿತ ಮೂರು ಮಂದಿ ಆರೋಪಿಗಳ ಬಂಧನ

ಕರಾವಳಿ

ಎಂಡಿಎಂಎಯನ್ನು ಖರೀದಿಸಿ ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಂಪ್ವೆಲ್ ಉಜ್ಜೋಡಿ ನಿವಾಸಿ ಜೈಸನ್ ಮಿನೇಜಸ್, ತೊಕ್ಕೊಟ್ಟು ಪೆರ್ಮನ್ನೂರಿನ ಚೆಂಬುಗುಡ್ಡೆ ನಿವಾಸಿಗಳಾದ ಹೈದರ್ ಅಲಿ, ಮುಹಮ್ಮದ್ ಸಜಾದ್, ಎಂದು ತಿಳಿದು ಬಂದಿದೆ. ಆರೋಪಿಗಳು ಆಟೋ ರಿಕ್ಷಾದಲ್ಲಿ ಪಂಪ್ ವೆಲ್-ಎಕ್ಕೂರು ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕುರಿತು ಲಭಿಸಿದ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ನಿಷೇಧಿತ ಎಂಡಿಎಂಎ, 37,000 ರೂ., 5 ಮೊಬೈಲ್ ಫೋನ್ ಗಳು, ತೂಕಮಾಪನ, ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.