ನೆಲ್ಲಿಕಾರು ಪಂಚಾಯತ್ ಗೆ ಹಿಡಿಶಾಪ; ಕಂದಾಯ ಇಲಾಖೆಯ ಬೇಜವಾಬ್ದಾರಿತನ

ಕರಾವಳಿ

ಅನುದಾನ ಮಂಜೂರು ಆದರೂ ರಸ್ತೆಗಿಲ್ಲ ಕಾಯಕಲ್ಪ; ಮೂಡಬಿದ್ರೆ ಮಾಂಟ್ರಾಡಿ ನಾಗರಿಕರ ನರಕಯಾತನೆ.!

ಇನ್ನೇನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳಲಿದೆ. ಸುಸ್ಥಿತಿಯಲ್ಲಿರುವ ರಸ್ತೆಯಲ್ಲೇ ವಾಹನ ಓಡಿಸುವುದು ಕಷ್ಟ. ಅಂತಹದರಲ್ಲಿ ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದು ಹೇಗೆ ಸಾಧ್ಯ.? ಇಂತಹದ್ದೊಂದು ನರಕಯಾತನೆ ಮಾಂಟ್ರಾಡಿ ಕ್ರಾಸ್ ರಸ್ತೆಯಲ್ಲಿ ಕಂಡುಬಂದಿದೆ.

ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕ್ರಾಸ್ (ಕೈಕಂಬ) ರಸ್ತೆ ಅಷ್ಟೊಂದು ಹದಗೆಟ್ಟಿದೆ. ವಾಹನ ಸಂಚಾರ ಬಿಡಿ ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ಅಯೋಗ್ಯವಾದ ಸ್ಥಿತಿಯಲ್ಲಿದೆ.

ಒಂದು ಗುಂಡಿ ದಾಟಿ ಇನ್ನು ನಿರಾಳವಾದೆವು ಎಂದು ವಾಹನ ಸವಾರರು ಎಕ್ಸ್ ಲೇಟರ್ ಒತ್ತಿ ಸರಾಗವಾಗಿ ಸಾಗಬಹುದು ಎಂದು ಅಂದಾಜಿಸುವಷ್ಟರಲ್ಲಿ ಧುತ್ತನೆ ಎದುರಾಗುತ್ತದೆ ಭಯಾನಕ ಗುಂಡಿಗಳು. ಇಲ್ಲಿ ರಸ್ತೆ ಹಾದು ಹೋದ ಪರಿಸರದಲ್ಲಿ ನೂರಾರು ಮನೆಗಳಿವೆ. ಇಲ್ಲಿಂದ ಹೊಸ್ಮಾರು, ಕಾರ್ಕಳ, ಮೂಡಬಿದ್ರೆಗೆ ತೆರಳಬೇಕಾದರೆ ಇದೇ ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಆದರೆ ಈ ರಸ್ತೆಯ ಸ್ಥಿತಿಯಂತೂ ಅತ್ಯಂತ ಶೋಚನೀಯ. ವಿದ್ಯಾರ್ಥಿಗಳು, ಉದ್ಯೋಗಿಗಳು, ಮಹಿಳೆಯರು, ಮಕ್ಕಳು, ವೃದ್ಧರು, ಕೂಲಿ ಕಾರ್ಮಿಕರು ಹಾಗೂ ಈ ರಸ್ತೆ ಬಳಸುವ ನಾಗರಿಕರು ಈ ರಸ್ತೆಯ ನರಕಯಾತನೆ ಅನುಭವಿಸಿ ಸುಸ್ತಾಗಿದ್ದಾರೆ. ಮಳೆ ಬಂದರಂತೂ ರಸ್ತೆಗಳೂ ಕೊಳದಂತಾಗುತ್ತದೆ. ದ್ವಿಚಕ್ರ, ಆಟೋ ರಿಕ್ಷಾ ಹಾಗೂ ವಾಹನ ಸಂಚಾರವೂ ಕಷ್ಟ ಕಷ್ಟ. ಇಲ್ಲಿನ ನಾಗರಿಕರು ಪಂಚಾಯತ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಪಂಚಾಯತ್ ಕೂಡ ಇಲ್ಲಿನ ನಾಗರಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಲ್ಲಿನ ನಾಗರಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ.

‘ದೇವರು ಕೊಟ್ಟರೂ ಪೂಜಾರಿ ಬಿಡ’ ಅನ್ನುವ ಗಾದೆ ಮಾತಿನಂತೆ ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ರಸ್ತೆಯ ಅಭಿವೃದ್ಧಿಗೆ 10 ಲಕ್ಷ ಅನುದಾನ ಮಂಜೂರು ಮಾಡಿದರೂ, ರಸ್ತೆ ಅಭಿವೃದ್ಧಿಗೆ ಇಲ್ಲದ ಕಥೆ ಕಟ್ಟಿ ಕಂದಾಯ ಇಲಾಖೆ ಮುಂದೆ ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ನಾಗರಿಕರು ಹೈರಣಾಗಿದ್ದಾರೆ. ಇನ್ನಾದರೂ ಇಲಾಖೆ ಇಲ್ಲಿನ ನಾಗರಿಕರ ಗೋಳಿಗೆ ಸ್ಪಂದಿಸಲಿ. ಇಲ್ಲವಾದರೆ ನಾಗರಿಕರ ಪ್ರತಿಭಟನೆ ಎದುರಿಸಲು ಅಧಿಕಾರಿಗಳು ಸಜ್ಜಾಗಿ ಅನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.