ಬೆಳ್ತಂಗಡಿ ತಾಲೂಕಿನ ಪುತ್ತಿಲ-ಬಾರ್ಯ-ತೆಕ್ಕಾರು-ಸರಳಿಕಟ್ಟೆ ನಾಗರಿಕರ ಗೋಳು ಕೇಳುವವರಾರು.?
ಬೆಳ್ತಂಗಡಿ: ತಾಲೂಕಿನ ಪುತ್ತಿಲ ಗ್ರಾಮದಿಂದ ಸರಳಿಕಟ್ಟೆವರೆಗಿನ ಹಾಗೂ ಸುತ್ತಮುತ್ತಲಿನ ಒಳರಸ್ತೆಗಳ ಅತ್ಯಂತ ಶೋಚನೀಯ ಸ್ಥಿತಿಯನ್ನು ಖಂಡಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಪ್ರಮುಖ ರಸ್ತೆಗಳ ದುಸ್ಥಿತಿ ಮತ್ತು ಸಾರ್ವಜನಿಕರ ಗೋಳು ಕೇಳುವವರಿಲ್ಲಾಂತಗಿದೆ.
ಸಂಪೂರ್ಣ ಹದಗೆಟ್ಟ ಸಂಪರ್ಕ ಕೊಂಡಿ
ಪುತ್ತಿಲದಿಂದ ಸರಳಿಕಟ್ಟೆವರೆಗಿನ ಪ್ರಮುಖ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿವೆ. ಬಹುತೇಕ ಒಳರಸ್ತೆಗಳು ಅಭಿವೃದ್ಧಿ ಕಾಣದೆ ವರ್ಷಗಳೇ ಕಳೆದಿವೆ. ಬೇಸಿಗೆ ಕಾಲದಲ್ಲಿ ವಿಪರೀತ ದೂಳಿನಿಂದಾಗಿ ವಾಹನ ಸವಾರರು ಹಾಗೂ ಹಾದಿಹೋಕರು ಉಸಿರುಗಟ್ಟುವ ವಾತಾವರಣ ಎದುರಿಸುತ್ತಿದ್ದರು. ಇದೀಗ ಮಳೆಗಾಲದಲ್ಲಿ ಇಡೀ ರಸ್ತೆ ಕೆಸರುಗದ್ದೆಯಾಗಿ ಕಂಬಳದ ಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಇಲ್ಲಿ ನಡೆದಾಡುವುದೂ ದುಸ್ತರವಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ವಾಹನ ಚಾಲನೆ ಮಾಡುವುದು ಸಾರ್ವಜನಿಕರಿಗೆ ಜೀವ ಕೈಯಲ್ಲಿಡಿದು ಸಾಗಿದಂತಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಬಂದು ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಹೋಗುವ ನಾಯಕರು, ಗೆದ್ದ ನಂತರ ಇತ್ತ ಮುಖ ಮಾಡಿಯೂ ನೋಡುವುದಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆ ಈ ಭಾಗದ ಜನರ ಇಂದಿನ ತುರ್ತು ಬೇಡಿಕೆಯಾಗಿದೆ.
ಗ್ರಾಮಸ್ಥರ ಖಡಕ್ ತೀರ್ಮಾನ: “ರಸ್ತೆ ಇಲ್ಲದಿದ್ದರೆ ವೋಟು ಇಲ್ಲ” ಅಧಿಕಾರಿಗಳು ಮತ್ತು ರಾಜಕಾರಣಿಗಳ ಈ ಬೇಜವಾಬ್ದಾರಿತನಕ್ಕೆ ಬೇಸತ್ತ ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮ ಹಾಗೂ ಸುತ್ತಮುತ್ತಲಿನ ನೊಂದ ಮತದಾರರೆಲ್ಲರೂ ಒಟ್ಟಾಗಿ ಈ ಕೆಳಗಿನ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ರಸ್ತೆ ಸಮಸ್ಯೆ ಬಗೆಹರಿದು, ಕಾಮಗಾರಿ ಆರಂಭವಾಗುವವರೆಗೆ ಮುಂಬರುವ ಯಾವುದೇ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಮಾಡುವುದಿಲ್ಲವೆಂಬುದು ಗ್ರಾಮಸ್ಥರ ಒಂದೇ ನಿಲುವು.
ನಮಗೆ ಇನ್ನು ಮುಂದೆ ಯಾವುದೇ ಆಶ್ವಾಸನೆಗಳು ಬೇಡ, ಶಾಶ್ವತ ಪರಿಹಾರ ಬೇಕು. ಉತ್ತಮ ರಸ್ತೆ ನಿರ್ಮಾಣವಾಗಲಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರದಲ್ಲೇ ಆರಂಭವಾಗಲಿ. ಇದು ಬೆಳ್ತಂಗಡಿ ತಾಲೂಕಿನ ಬಾರ್ಯ, ಪುತ್ತಿಲ, ತೆಕ್ಕಾರು ಪ್ರದೇಶದ ನಾಗರಿಕರ ಒಕ್ಕೊರಲ ಆಗ್ರಹ.
