ಪಾಕಿಸ್ತಾನದ ‘ಹನಿ ಟ್ರ್ಯಾಪ್’ ಜಾಲಕ್ಕೆ ಬಿದ್ದು, ದೇಶದ ರಕ್ಷಣಾ ಮಾಹಿತಿ ಹಂಚಿಕೊಂಡ ಭಾರತೀಯ ವಾಯುಸೇನೆ IAF ಅಧಿಕಾರಿ

ರಾಷ್ಟ್ರೀಯ

ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಭಾರತೀಯ ವಾಯುಪಡೆಯ ರಕ್ಷಣಾ ಸಂಬಂಧಿತ ಅತ್ಯಂತ ಸೂಕ್ಷ್ಮ ಹಾಗೂ ಕಾರ್ಯತಂತ್ರದ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ವಾಯುಪಡೆ(IAF)ಯ ವಿಂಗ್‌ ಕಮಾಂಡರ್‌ ಹುದ್ದೆಯ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೇ 30 ರಂದು ಅವರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಜುಲೈ 30 ರಂದು ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣವು ಕೇವಲ ವ್ಯಕ್ತಿಗತ ಕೃತ್ಯವಲ್ಲದೆ, ಕಾರ್ಯತಂತ್ರದ ಮಿಲಿಟರಿ ಗುಪ್ತಚರವನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಬೇಹುಗಾರಿಕೆ ಜಾಲದ ಭಾಗವಾಗಿರಬಹುದು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ಶಂಕಿಸಿದ್ದಾರೆ.

ತನಿಖೆಯ ಪ್ರಕಾರ, ವೈಯಕ್ತಿಕ ಜೀವನದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದ ಅಧಿಕಾರಿಯನ್ನು ಗುರಿಯಾಗಿಸಲು ಸೋಶಿಯಲ್‌ ಮೀಡಿಯಾ ಮೂಲಕ ಮಹಿಳೆಯೊಬ್ಬರು ಸಂಪರ್ಕ ಸಾಧಿಸಿದ್ದಾರೆ. ಚಾಟ್‌ಗಳು ಮತ್ತು ವಿಡಿಯೋ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಅಧಿಕಾರಿಯ ವಿಶ್ವಾಸ ಗಳಿಸಲಾಗಿದೆ. ಸೇನಾ ಪಡೆಗಳ ಚಲನವಲನಗಳು, ನಿಯೋಜನೆಗಳು, ಫೋಟೋಗಳು ಮತ್ತು ವೀಡಿಯೊಗಳಂತಹ ಸೂಕ್ಷ್ಮ ದತ್ತಾಂಶಗಳನ್ನು ಡಿಜಿಟಲ್‌ ಮಾಧ್ಯಮದ ಮೂಲಕ ಮಹಿಳೆಗೆ ವರ್ಗಾಯಿಸಲಾಗಿದೆ.

ಕೇವಲ ಅಧಿಕಾರಿಯಷ್ಟೇ ಅಲ್ಲದೆ, ಮತ್ತೊಬ್ಬ ಸಹೋದ್ಯೋಗಿಯ ಮೊಬೈಲ್‌ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್‌ ಒಂದನ್ನು ಇನ್‌ಸ್ಟಾಲ್‌ ಮಾಡಲು ಸೂಚಿಸಲಾಗಿದೆ. ಇದು ಡೇಟಾ ಕದಿಯಲು, ಲೊಕೇಶನ್‌ ಟ್ರ್ಯಾಕ್‌ ಮಾಡಲು ಹಾಗೂ ಸಂವಹನಗಳನ್ನು ಪ್ರತಿಬಂಧಿಸಲು ಬಳಸುವ ಸ್ಪೈವೇರ್‌ ಅಥವಾ ರಿಮೋಟ್‌-ಆಕ್ಸೆಸ್‌‍ ಮಾಲ್‌ವೇರ್‌ ಆಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಕ್ಕೆ ಬಂದ ಆ ಮಹಿಳೆ, ತೆರೆಮರೆಯಲ್ಲಿ ಪಾಕಿಸ್ತಾನ ಮೂಲದ ಹ್ಯಾಂಡ್‌ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಳು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ