ಪೊಲೀಸರ ಡ್ಯಾಶಿಂಗ್ ರೀತಿಯ ಭಾಷೆಯನ್ನು ಕರಾವಳಿಯ ಜನ ಒಪ್ಪಿಕೊಳ್ಳಲ್ಲ. ಘಟ್ಟದಾಚೆಗಿನ ಪೊಲೀಸರ ಕಟು ಭಾಷೆ ಇಲ್ಲಿ ವರ್ಕೌಟ್ ಆಗಲ್ಲ.!

ಕರಾವಳಿ

ಸಂಚಾರಿ ಪೊಲೀಸಪ್ಪನ ರೌದ್ರಾವತಾರ.. ವಿಡಿಯೋ ವೈರಲ್.. ಕರಾವಳಿ ಪೊಲೀಸರು ಅನುಸರಿಸಬೇಕಾದ ಮಾನದಂಡವೇನು.?

ಪೊಲೀಸರಷ್ಟು ಟೀಕೆಗೆ ಗುರಿಯಾಗುವ ವ್ಯಕ್ತಿ ಈ ಜಗತ್ತಿನಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಗಲಾಟೆ, ದೊಂಬಿ, ಕೋಮುಗಲಭೆ ನಡೆದರೆ ಮೊದಲು ಟೀಕೆಗೊಳಗಾಗುವುದು ಪೊಲೀಸರು. ಗಲಾಟೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಅಮಾಯಕರ ಮೇಲೆ ದೌರ್ಜನ್ಯ ಅನ್ನುವ ಮತ್ತೊಂದು ಹೊಸ ಕೂಗು ಕೇಳಿ ಬರುತ್ತದೆ. ದಿನದ 24 ತಾಸು ಮಳೆ, ಬಿಸಿಲು ಅನ್ನದೆ ಕಾರ್ಯನಿರ್ವಹಿಸಬೇಕಾದವರು ಪೊಲೀಸರು. ಕೆಲವೊಮ್ಮೆ ನಡುಬೀದಿಯ ರಸ್ತೆಯ ಬಸ್ಸು ನಿಲ್ದಾಣ ಪೊಲೀಸರಿಗೆ ರಾತ್ರಿಯ ನಿದ್ರಿಸುವ ಸ್ಥಳವೂ ಆಗಿರುತ್ತದೆ. ಒಂಥರಾ ಕಲ್ಲು ಮುಳ್ಳಿನ ಜೀವನ ಪೊಲೀಸರದ್ದು.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಬಹುತೇಕ ಪೊಲೀಸರು ಹೊರಜಿಲ್ಲೆಯವರು ಅನ್ನುವುದು ನೂರಕ್ಕೆ ನೂರು ಸತ್ಯ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹೊರಜಿಲ್ಲೆಯ ಪೊಲೀಸರು ಕಾರ್ಯನಿರ್ವಹಿಸಿದಂತೆ ದ.ಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಅನೇಕ ಕಾರಣಗಳೂ ಕೂಡ ಇದೆ. ಮೊದಲನೆಯದಾಗಿ ಕರಾವಳಿಯ ಭೌಗೋಳಿಕ ಪ್ರದೇಶ ಕಾರಣವಾದರೆ, ಎರಡನೆಯದು ಭಾಷಾ ಸಮಸ್ಯೆ ಅಡ್ಡಿಯಾಗುತ್ತದೆ. ದ.ಕ ಜಿಲ್ಲೆಯಲ್ಲಿ ಸ್ಥಳೀಯವಾಗಿ ಹಲವಾರು ಭಾಷೆಗಳನ್ನಾಡುವ ಜನರಿದ್ದಾರೆ. ಮುಖ್ಯವಾಗಿ ತುಳು, ಬ್ಯಾರಿ, ಕೊಂಕಣಿ, ಮಲಯಾಳಂ ಮಿಶ್ರಿತ ಭಾಷೆ ಪ್ರಮುಖವಾದುದು. ಹೊರ ಜಿಲ್ಲೆಯಿಂದ ನೇಮಕಗೊಂಡ ಪೊಲೀಸರಿಗೆ ಈ ಸ್ಥಳೀಯ ಭಾಷೆ ಕಾರ್ಯನಿರ್ವಹಿಸಲು ಅಡ್ಡಿಯಾಗುತ್ತದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ದ.ಕ ಜಿಲ್ಲೆಯವರದ್ದು, ಘಟ್ಟದಾಚೆಗಿನ ಹೊರಜಿಲ್ಲೆಯವರದ್ದು ಮಾತನಾಡುವುದು ಕನ್ನಡ ಭಾಷೆಯಾದರೂ, ಮಾತನಾಡುವ ಶೈಲಿಯಲ್ಲಿ ಭಿನ್ನತೆ ಇರುತ್ತದೆ. ದ.ಕ ಜಿಲ್ಲೆಯವರ ಕನ್ನಡ ಭಾಷೆ ಸೌಮ್ಯ, ಮೃದುವಾಗಿದ್ದರೆ, ಘಟ್ಟದಾಚೆಗಿನವರ ಕನ್ನಡ ಭಾಷೆ ಅಲ್ಲಿನ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕಟುವಾಗಿರುತ್ತದೆ. ಅಂತಹ ಕನ್ನಡ ಭಾಷೆಯನ್ನು ಜಿಲ್ಲೆಯವರು ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಸಾರ್ವಜನಿಕರೊಂದಿಗೆ ಹೊರಜಿಲ್ಲೆಯ ಪೊಲೀಸರು ಅದೇ ಶೈಲಿಯಲ್ಲಿ ಮಾತನಾಡಿದರೆ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಇದಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯ ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭ ನಡೆದ ಮಾತಿನ ಜಟಾಪಟಿ ವಿಡಿಯೋ ವೈರಲ್ ಆಗಿದೆ. ಈ ಪೊಲೀಸಪ್ಪ ಹೊರಜಿಲ್ಲೆಯವರಾಗಿದ್ದು, ಸಾರ್ವಜನಿಕರೊಂದಿಗೆ ಡ್ಯಾಶಿಂಗ್ ರೀತಿಯಲ್ಲಿ ಮಾತನಾಡುವ ದೃಶ್ಯವನ್ನು ಕರಾವಳಿಯ ಜನತೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ತವರಿನಲ್ಲಿ ಈ ಭಾಷೆ ಸಹ್ಯವಾದರೆ, ಕರಾವಳಿ ಭಾಗದಲ್ಲಿ ಇಂತಹ ಭಾಷೆಯ ಬಳಕೆ ಅನಾಗರಿಕತೆಯ ವರ್ತನೆಯಾಗಿದೆ. ಘಟ್ಟದ ಮೇಲಿನ ಕೆಲವು ಮಂದಿ ಪೊಲೀಸರು ಕರಾವಳಿ ಭಾಗದ ಜನರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ ಕೆಲವು ಮಂದಿ ಹೊಸಬರಿಗೆ ಇಲ್ಲಿನ ಬಗ್ಗೆ ಅರಿವು ಇಲ್ಲದ ಕಾರಣ ಇಂತಹ ಅನಾಹುತಗಳು ಸಂಭವಿಸುತ್ತದೆ. ಕರಾವಳಿ ಭಾಗದ ನಾಗರಿಕರನ್ನು ಹ್ಯಾಂಡಲ್ ಮಾಡುವಾಗ ಪೊಲೀಸರು ಸಂಯಮ, ಮೃದು ಭಾಷೆಯನ್ನು ಬಳಸಬೇಕಾಗಿದೆ. ಇದು ಕರಾವಳಿ ಭಾಗದ ಪೊಲೀಸರಿಗೆ ಅರಿವಿದೆ. ಆದರೆ ಘಟ್ಟದ ಮೇಲಿನ ಪೊಲೀಸರು ಅಂತಹ ಕಟು ಭಾಷೆಯನ್ನು ಇಲ್ಲಿ ಪ್ರಯೋಗಿಸಲು ಮುಂದಾದರೆ ವಿವಾದಕ್ಕೆ ಕಾರಣವಾಗಬಹುದು. ಪೊಲೀಸ್ ಇಲಾಖೆ ಈ ಬಗ್ಗೆ ಯೋಚಿಸಿ, ಹೊರಜಿಲ್ಲೆಯಿಂದ ಬರುವಂತ ಪೊಲೀಸರಿಗೆ ಅರಿವು ಮೂಡಿಸುವುದು ಒಳಿತು.