ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಠಾಣೆಯ ಸಿಬ್ಬಂದಿಗಳು ಬೆಳಗಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಈಚರ್ ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ, ಬೆಳಿಗ್ಗೆ ಜಾವ ಸುಮಾರು 06:30 ಸಮಯಕ್ಕೆ ಆಡ್ಯಾರು ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುತ್ತಿದ್ದ EICHER ಲಾರಿ ಕಂಡುಬಂದಿದ್ದು, ಸದರಿ ಲಾರಿಯನ್ನು ಬೆನ್ನಟ್ಟಿ ಪಡೀಲ್ ಟೊಯೋಟಾ ಕಾರ್ ಶೋರೂಮ್ ಎದುರುಗಡೆ ತಡೆದ ಸಂದರ್ಭದಲ್ಲಿ ಲಾರಿಯಲ್ಲಿದ್ದ ಓರ್ವ ವ್ಯಕ್ತಿ ಲಾರಿಯಿಂದ ಇಳಿದು ಪರಾರಿಯಾಗಿರುತ್ತಾನೆ.
ಲಾರಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು EICHER ಲಾರಿಯನ್ನು ಪರಿಶೀಲಿಸಿದಾಗ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಸದರಿ ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೊಂದರಂತೆ ಬಿಗಿಯಾಗಿ ಹಗ್ಗಗಳಿಂದ ಲಾರಿಯ ಬಾಡಿಗೆ ಕಟ್ಟಿ, ಕತ್ತುಗಳನ್ನು ಮೇಲಕ್ಕೆ ಎತ್ತಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಲಾರಿ ಚಾಲಕ ಸಾಧಿಕ್ ಎಂಬಾತನನ್ನು ಬಂಧಿಸಿ, 17 ಜಾನುವಾರುಗಳ ಸಹಿತ, ಪ್ರಕರಣಕ್ಕೆ ಸಂಬಂಧಿಸಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಮತ್ತು ರೆಹಮಾನ್ ಎಂಬವರ ಪತ್ತೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
