ಗ್ರಾಮ ಸಭೆಗೆ ಗೈರು, ನಿರಂತರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಸುಶೀಲ ಅವರನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಘೋಷಣೆ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕರಡು ಅಧಿಸೂಚನೆಯ ಪರಿಣಾಮ ಕುರಿತು ಸೆಪ್ಟೆಂಬರ್ 25 ರಂದು ಶಿರ್ಲಾಲು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸಭೆಯನ್ನು ತಾಲೂಕು ಪಂಚಾಯತ್ ಆದೇಶದ ಮೇರೆಗೆ ನಿಗದಿಗೊಳಿಸ ಲಾಗಿತ್ತು. ಆದರೆ ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ ಅವರು ಸ್ವ ಇಚ್ಛೆಯಿಂದ ದಿನಾಂಕ ಬದಲಾಯಿಸಿ ಸೆಪ್ಟೆಂಬರ್ 21 ರಂದು ಗ್ರಾಮ ಸಭೆಯನ್ನು ಆಯೋಜಿಸಿದ್ದರು. ಗ್ರಾಮ ಸಭೆಯ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಗ್ರಾಮಸಭೆಗೆ ಆಗಮಿಸಿದ್ದರು. ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮಸಭೆಗೆ ಬಾರದೆ ಗೈರು ಹಾಜರಾಗಿದ್ದರು. ಪಿಡಿಒ ಅವರ ಈ ನಡೆ ಸ್ಥಳೀಯವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಗೈರು ಹಾಜರಾಗುವ ಬಗ್ಗೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೂ ಯಾವುದೇ ಮಾಹಿತಿ ನೀಡಿರುವುದಿಲ್ಲ.
ಶಿರ್ಲಾಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ ಅವರು ಈ ಹಿಂದೆಯೂ ಅನೇಕ ಬಾರಿ ಈ ರೀತಿ ಗಂಭೀರ ಕರ್ತವ್ಯ ಲೋಪ ಎಸಗಿದ್ದು, ಪಂಚಾಯತ್ ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಇರುವುದು ಈ ಬಗ್ಗೆ ಗ್ರಾಮಸ್ಥರಿಂದ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ದೂರು ಕೂಡ ನೀಡಲಾಗಿತ್ತು.

ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿಗಳು 2021 ರ ನಿಯಮವನ್ನು ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮ 1957 ರ ಪ್ರಕಾರ ತಕ್ಷಣದಿಂದಲೇ ಜಾರಿಯಾಗುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ ಅವರನ್ನು ಸೇವೆಯಿಂದ ಅಮಾನತು ಮಾಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
