ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಎಂಟ್ರಿ ನಂತರ ಪಕ್ಷಕ್ಕೆ ಹೊಸ ಹುರುಪು ಬಂದಿದ್ದು, ಸಂಘಟನೆ ಮೂಲಕ ಮತ್ತೆ ಪಕ್ಷವನ್ನು ಗತಕಾಲದ ವೈಭವಕ್ಕೆ ಮರಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಈ ನಡುವೆ ಅನ್ಯಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವರು ಇಲ್ಲಸಲ್ಲದ ಆರೋಪ ಮಾಡಿ ಜಿಲ್ಲಾ ನಾಯಕರ ಮಧ್ಯೆ ಇನಾಯತ್ ಅಲಿ ಯವರನ್ನು ಎತ್ತಿಕಟ್ಟುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದ ಪ್ರಯತ್ನ ನಡೆಸುತ್ತಿದ್ದು, ಈ ಬಗ್ಗೆ ಸುರತ್ಕಲ್,ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸುರತ್ಕಲ್ ಮತ್ತು ಬಜಪೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಫೆಬ್ರವರಿ 17 ರಂದು ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಕಾರ್ಯಕ್ರಮದ ಉಸ್ತುವಾರಿಯನ್ನು ಕನಕಪುರ ಬಂಡೆ ಆಪ್ತ ಇನಾಯತ್ ಅಲಿ ವಹಿಸಿದ್ದರು ಎನ್ನಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದಿಂದ 150 ಕ್ಕೂ ಮಿಕ್ಕ ಬಸ್ ಗಳ ಮೂಲಕ ಸಾವಿರಾರು ಕಾರ್ಯಕರ್ತರು ಸಮಾವೇಶಕ್ಕೆ ತೆರಳಿದ್ದರು. ಕ್ಷೇತ್ರದಲ್ಲಿ ಇಷ್ಟೊಂದು ಜನ ಸೇರಲು ಇನಾಯತ್ ಅಲಿಯವರ ಪ್ರಯತ್ನ ಪ್ರಮುಖವಾಗಿತ್ತು. ಅದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರ ಪರಿಶ್ರಮದಿಂದ ಸಾವಿರಾರು ಜನ ಸಮಾವೇಶಕ್ಕೆ ಹರಿದು ಬಂದಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡಿಸಿ ಇನಾಯತ್ ಅಲಿಯವರನ್ನು ಜಿಲ್ಲಾ ನಾಯಕರ ನಡುವೆ ಎತ್ತಿಕಟ್ಟುವ ವ್ಯವಸ್ಥಿತ ಷಡ್ಯಂತ್ರವೊಂದು ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಗುರುಪುರ ಬ್ಲಾಕ್ ಅಧ್ಯಕ್ಷರು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆಬ್ರವರಿ 17 ರಂದು ಮಂಗಳೂರಿನ ಅಡ್ಯಾರಿನಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಸಮಾವೇಶ ನಡೆದಿರುತ್ತದೆ. ಈ ಸಮಾವೇಶಕ್ಕೆ ಪಕ್ಷದ ಎಲ್ಲಾ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಬಹು ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ. ಇದನ್ನು ಸಹಿಸದ ಕೆಲವು ಪ್ರೇತಾತ್ಮಗಳು ಜಿಲ್ಲಾ ನಾಯಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುಳ್ಳು ಮಾಹಿತಿಯನ್ನು ಹರಡಿ ಹುಳಿ ಹಿಂಡುವಂತಹ ಕೆಲಸಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ‘Ex-MLA Dr. M Bava fans’ ಮತ್ತು 2023 ಶಾಸಕರು ಮೊಯ್ದೀನ್ ಬಾವಾ’ ವಾಟ್ಸಾಪ್ ಗ್ರೂಪಿನಲ್ಲಿ ಮಾಹಿತಿ ಹರಿದಾಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
