ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ 19 ವರ್ಷ ಪ್ರಾಯದ ಇಕ್ರಾ ಜೀವನಿ ಎಂಬ ಯುವತಿ ಹಾಗೂ ಆಕೆಯ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಮುಲಾಯಂ ಎಂಬ ಯುವಕನ ಜೊತೆ ಮದುವೆ ಆಗಿದ್ದ ಪಾಕಿಸ್ತಾನದ ಇಕ್ರಾ, ಬೆಂಗಳೂರಿನ ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ನೆಲೆಸಿದ್ದರು.ಖಚಿತವಾದ ಮಾಹಿತಿಯನ್ನು ಅಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು,ಪಾಕ್ ಮೂಲದ ಯುವತಿ ಇಕ್ರಾ ಜೀವನಿ ಹಾಗೂ ಆಕೆಯ ಪತಿ ಮುಲಾಯಂ ಎಂಬವನನ್ನೂ ಬಂಧಿಸಿದ್ದಾರೆ.
ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದ ಇಕ್ರಾ, ಡೇಟಿಂಗ್ ಆ್ಯಪ್ ಮೂಲಕ ಮುಲಾಯಂ ಜೊತೆ ಮದುವೆಯಾಗಿ ಜುನ್ನಸಂದ್ರದಲ್ಲಿ ನೆಲೆಸಿದ್ದಳು. ಈ ನಡುವೆ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದ ಇಕ್ರಾ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು.ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಮತ್ತು ಮುಲಾಯಂನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾವಾ ಯಾದವ್ ಎಂದು ಹೆಸರು ಬದಲಿಸಿ ಪಾಸ್’ಪೋರ್ಟ್’ಗೆ ಅರ್ಜಿ ಹಾಕಿರುವ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರು FRRO ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಕ್ರಾಳನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.
ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿದೆ. ಬಳಿಕ ಒಬ್ಬರ ನಡುವೆ ಪ್ರೀತಿ ಶುರುವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆಗ ಇಕ್ರಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು. ಮುಲಾಯಂ ಬೆಂಗಳೂರಿನ ಖಾಸಗಿ ಕಂಪನಿಯ ಸೆಕ್ಯೂರಿಟಿಯಾಗಿದ್ದಾನೆ.ಕಳೆದ ವರ್ಷ ಇಕ್ರಾ ಭಾರತಕ್ಕೆ ಬಂದಿದ್ದಳು. ಸದ್ಯ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.