ಮೈಕ್ ನಲ್ಲಿ ಅಝಾನ್ ಗೆ ನಿಷೇಧವಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯ

ರಾಜ್ಯಾದ್ಯಂತ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಆಜಾನ್‌ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರಿ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಹೈಕೋರ್ಟ್‌,ಆಜಾನ್‌ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಧ್ವನಿವರ್ಧಕಗಳು ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವಾಗದಂತೆ ಸರ್ಕಾರಿ ಪ್ರಾಧಿಕಾರಗಳು ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.

ಈ ಕುರಿತು ನಗರದ ನಾಗರಭಾವಿ ನಿವಾಸಿ ಆರ್‌. ಚಂದ್ರಶೇಖರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಆಜಾನ್‌ ಕೂಗುವುದರಿಂದ ಉಂಟಾಗುವ ಶಬ್ದದಿಂದಾಗಿ ಇತರ ಜನರ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ನಿರಾಕರಿಸಿದೆ.ಸಂವಿಧಾನದ ಪರಿಚ್ಛೇದ 25(1)ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಧರ್ಮವನ್ನು ಆಚರಿಸುವ, ಪ್ರದರ್ಶಿಸುವ ಮತ್ತು ಪ್ರಚಾರ ಮಾಡುವ ಹಕ್ಕು ಹೊಂದಿರುತ್ತಾನೆ ಎಂದು ತಿಳಿಸಿದರು.

ಅರ್ಜಿದಾರರು ಸೇರಿದಂತೆ ಪ್ರತಿಯೊಬ್ಬರೂ ಸಹ ತಮ್ಮ,ತಮ್ಮ ಧರ್ಮ ಆಚರಿಸಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಜಾನ್‌ ಎಂಬುದು ಇಸ್ಲಾಂ ಧರ್ಮದವರಿಗೆ ಪ್ರಾರ್ಥನೆ ಸಲ್ಲಿಸಲು ನೀಡುವ ಕರೆ ಎಂದು ಹೈಕೋರ್ಟ್ ಇದೇ ವೇಳೆ ಹೇಳಿದೆ.