ರಾಜ್ಯದಲ್ಲಿ ಸರಕಾರ ಬದಲಾವಣೆಯಾಗಿ ಆರು ತಿಂಗಳೇನೂ ಕಳೆದಿವೆ. ಆದರೆ ಪೊಲೀಸ್ ಇಲಾಖೆಯ ಮೇಜರ್ ಹುದ್ದೆಗೆ ಅಂದುಕೊಂಡಂತೆ ಭರ್ಜರಿ ಸರ್ಜರಿ ಏನೂ ನಡೆದಿರಲಿಲ್ಲ. ಕೆಲವೊಂದು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಹೊಸಬರನ್ನು ನೇಮಿಸಲಾಗಿದೆ. ತಳಮಟ್ಟದ ಪೊಲೀಸರ ಹುದ್ದೆಗಳಲ್ಲಿ ನಿರೀಕ್ಷಿಸಿದಷ್ಟು ದೊಡ್ಡ ಬದಲಾವಣೆಯೇನೂ ಆಗಿಲ್ಲ.
ಇನ್ನು ಮಂಗಳೂರಿನ ಪೊಲೀಸ್ ಇಲಾಖೆಯ ಅತ್ಯಂತ ಮಹತ್ವದ ಹುದ್ದೆ ಎಂದು ಬಿಂಬಿಸಲಾಗಿರುವ ಸಿಸಿಬಿಯ ಎಸಿಪಿ ಹುದ್ದೆಯ ಮೇಲೆ ಇದೀಗ ಹಲವಾರು ಮಂದಿ ಕಣ್ಣಿತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿಂದೆ ಎಸಿಪಿಯಾಗಿದ್ದ ಪಿ.ಎ ಹೆಗ್ಡೆ ಭಡ್ತಿ ಪಡೆದುಕೊಂಡು ಉಡುಪಿಗೆ ವರ್ಗಾವಣೆಯಾಗಿದ್ದಾರೆ. ಖಾಲಿ ಇರುವ ಸಿಸಿಬಿ ಎಸಿಪಿ ಸ್ಥಾನಕ್ಕೆ ಹಲವಾರು ಮಂದಿ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಭಾವ ಬಳಸಿ ಹುದ್ದೆಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜು ರವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಕಾಂಗ್ರೆಸ್ ನ ಪ್ರಭಾವೀ ರಾಜಕಾರಣಿಯೊಬ್ಬರು ಇವರಿಗೆ ಬೆಂಬಲವಾಗಿ ನಿಂತಿದ್ದು, ಸಿಸಿಬಿ ಎಸಿಪಿ ಸ್ಥಾನ ಅವರಿಗೆ ಫಿಕ್ಸ್ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇತ್ತ ರೀನಾ ಸುವರ್ಣ, ಕೋದಂಡರಾಮ ಅವರು ಕೂಡ ತಮ್ಮ ಪ್ರಯತ್ನ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಕೋದಂಡರಾಮ ರವರು ಈ ಹಿಂದೆ ಪಣಂಬೂರು, ಬಂದರು ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಪೊಳಲಿ ಅನಂತು ಹತ್ಯೆಯ ಸಂದರ್ಭದಲ್ಲಿ ಪಣಂಬೂರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದು ಹತ್ಯಾ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುತ್ತಾರೆ.
ಇನ್ನು ಪಣಂಬೂರು ಉಪ-ವಿಭಾಗ ಎಸಿಪಿ ಸ್ಥಾನಕ್ಕೆ ಉಳ್ಳಾಲ ಉಪ-ವಿಭಾಗದ ಎಸಿಪಿ ಆಗಿರುವ ಧನ್ಯಾ ನಾಯಕ್ ರವರನ್ನು ಜಿಲ್ಲೆಯ ಪ್ರಭಾವಿ ರಾಜಕರಣಿಯೊಬ್ಬರು ಪಣಂಬೂರು ಉಪ-ವಿಭಾಗಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಇದರ ಜೊತೆಗೆ ಮಂಗಳೂರಿನ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಪ್ರಸ್ತುತ ಮಂಗಳೂರು ಕಮೀಷನರ್ ಕಚೇರಿಯಲ್ಲಿ ಸೇವೆಯಲ್ಲಿರುವ ರವೀಶ್ ನಾಯಕ್ ಕೂಡ ಮುಂಚೂಣಿಯಲ್ಲಿರುವ ಸುದ್ದಿಯೂ ಇದೆ. ಇವರ ಬೆನ್ನ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ಸಿನ ಇಬ್ಬರು ಯುವ ಪ್ರಭಾವಿ ಮುಖಂಡರು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ ಅನ್ನುವ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.