2022ರಲ್ಲಿ KFI ನ ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡಿದ್ದ ‘ಕಾಂತಾರ’ ಸಿನಿಮಾವು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್ಗೆ ಎಂಟ್ರಿ ಪಡೆದುಕೊಂಡಿದೆ. ಈ ಸಿನಿಮಾದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್, ಟ್ವಿಟರ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ‘ಕಾಂತಾರ ಚಿತ್ರವು ಎರಡು ಆಸ್ಕರ್ ವಿಭಾಗದಲ್ಲಿ ಭಾಗಿಯಾಗಲು ಅರ್ಹತೆ ಪಡೆದುಕೊಂಡಿದೆ ಎಂದು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ..’ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.
ಕನ್ನಡದ ಹಲವು ಮುಖ್ಯವಾಹಿನಿ ಮಾಧ್ಯಮಗಳು ಕಾಂತಾರ ಸಿನಿಮಾದ ಆಸ್ಕರ್ ಪ್ರಶಸ್ತಿಯನ್ನೆ ಪಡೆದುಕೊಂಡಿದೆ ಎನ್ನುವಂತೆ ಬಿಗ್ ಬ್ರೇಕಿಂಗ್ ನ್ಯೂಸ್ ಅನ್ನು ಪ್ರಸಾರ ಮಾಡುತ್ತಿವೆ. ‘ಕಾಂತಾರ’ ಚಿತ್ರಕ್ಕೆ 2 ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಪ್ರತಿಪಾದಿಸಿ ಸುದ್ದಿಯನ್ನು ಪ್ರಸಾರ ಮಾಡಿವೆ.
ಹೊಂಬಾಳೆ ಫಿಲ್ಮ್ಸ್ ನೀಡಿರುವ ಅಪ್ಟೇಡ್ ಪ್ರಕಾರ 2 ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ ಎಂದು ಹೇಳಿದೆ ಮಾಧ್ಯಮಗಳೂ ಅದೇ ದಾಟಿಯನ್ನು ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಹಾಗಿದ್ದರೆ ಈ ಎರಡು ವಿಭಾಗದ ಅರ್ಹತೆ ಎಂದರೆ ಯಾವುದು? ಕಾಂತಾರ ಚಿತ್ರ ಬಿಡುಗಡೆ ಆದಾಗಲೇ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು,
Academy of Motion Picture Arts and Sciences 95 ನೇ ಅಕಾಡೆಮಿ ಅವಾರ್ಡಿಗೆ ಅರ್ಹತೆ ಪಡೆದಿರುವ 301 ಚಿತ್ರಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದು ಪ್ರಾಥಮಿಕ ಹಂತ. ಸದ್ಯ ಕಾಂತಾರ ಚಿತ್ರ ಈ ಪಟ್ಟಿಯಲ್ಲಿ ಅರ್ಹತೆ ಪಡೆದಿದೆ.
ಈ ಅರ್ಹತೆ ಪಡೆಯಲು, ಆ ಸಿನಿಮಾ ಅಮೆರಿಕದ ಆರು ಮೆಟ್ರೊಪಾಲಿಟನ್ ನಗರಗಳಲ್ಲಿ (Los Angeles County; the City of New York; the Bay Area; Chicago, Illinois; Miami, Florida; and Atlanta, Georgia) ಎಲ್ಲಾದರೂ ಕನಿಷ್ಟ ಒಂದು ಕಡೆ, ಜನವರಿ 1, 2022, ಮತ್ತು ಡಿಸೆಂಬರ್ 31, 2022ರ ನಡುವೆ ಸತತ ಏಳು ದಿನ ಒಂದು ಜಾಗದಲ್ಲಿ ಪ್ರದರ್ಶನ ಕಂಡಿರಬೇಕು. ಈ ಪೂರೈಸಿರುವುದಕ್ಕಾಗಿ ಕಾಂತಾರ, ಈ ಬಾರಿ ಆಸ್ಕರ್ಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಹಾಗಾಗಿ ಕಾಂತಾರಕ್ಕ ಸಿಕ್ಕಿರುವುದು ಇನ್ನು ಅರ್ಹತೆ ಮಾತ್ರ.
95 ನೇ ಆಸ್ಕರ್ ಪ್ರದರ್ಶನಗಳು ಮಾರ್ಚ್ 12, 2023 ರಂದು Ovation ಹಾಲಿವುಡ್ನಲ್ಲಿರುವ Dolby® ಥಿಯೇಟರ್ನಲ್ಲಿ ನಡೆಯಲಿದೆ ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
95ನೇ ಅಕಾಡೆಮಿ ಅವಾರ್ಡ್ ಗಳ ನಾಮನಿರ್ದೇಶನಗಳನ್ನು 2023ರ ಜನವರಿ 24ರಂದು ಘೋಷಿಸಲಾಗುವುದು. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ನೀಡುವ the Academy of Motion Picture Arts and Sciences ನೀಡಿರುವ ಅಧಿಕೃತ ಹೇಳಿಕೆ. ನಮ್ಮ ಮಾಧ್ಯಮಗಳಿಗೆ ಯಾಕಿಷ್ಟು ಆತುರ? ವಿಷಯ ಏನು ಅಂದರೆ ಆಸ್ಕರ್ ಅರ್ಹತೆ ಪಟ್ಟಿಯಲ್ಲಿ 301 ಸಿನಿಮಾಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಕಾಂತಾರವೂ ಇದೆ, ವಿಕ್ರಾಂತ್ ರೋಣವೂ ಇದೆ. ಕನ್ನಡ ಸಿನಿಮಾಗಳಿಗೆ ಆಸ್ಕರ್ ಸಿಗಲಿ, ಅದು ನಮ್ಮ ಆಸೆಯೂ ಕೂಡ ಹೌದು. ಆದರೆ ಹೀಗೆ ಆತುರ ಪಟ್ಟರೆ ಹೇಗೆ?
ಒಟ್ಟಾರೆಯಾಗಿ ಹೇಳುವುದಾರೆ, 301 ಚಿತ್ರಗಳ ಸಾಲಿಗೆ ಅರ್ಹತೆ ಪಡೆದಿರುವ ಕಾಂತಾರ ಚಿತ್ರವು ನಟ-ನಟಿ ವಿಭಾಗದಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ ಎಂದು ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ತಪ್ಪು ತಪ್ಪಾಗಿ ಸುದ್ದಿ ಪ್ರಸಾರ ಮಾಡಿವೆ.
