ಬೆಳ್ತಂಗಡಿ ಪೊಲೀಸರ ಸಾಧನೆ; ಚಿನ್ನಾಭರಣ ಸಹಿತ ಕುಖ್ಯಾತ ಕಳ್ಳನ ಬಂಧನ

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಹೊರ ರಾಜ್ಯಗಳಲ್ಲಿ ಕಳವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ನಟೋರಿಯಸ್ ಕಳ್ಳನನ್ನು, ಉಜಿರೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ನಿವಾಸಿ ಉಮೇಶ್ ಯಾನೆ ಉಮೇಶ್ ಬಳೆಗಾರ ಎಂಬಾತನೇ ಬಂಧನಕ್ಕೊಳಗಾದ ಆರೋಪಿ.

2023 ಆ.12 ರಂದು ಉಜಿರೆ ಅಜಿತ್ ನಗರದ ಕಲ್ಲೆ ನಿವಾಸಿ ಫೆಲಿಕ್ಸ್ ರೋಡಿಗ್ರಸ್ ಅವರ ಮನೆಯಲ್ಲಿ ಹಗಲಿನ ಹೊತ್ತು ಯಾರು ಇಲ್ಲದ ವೇಳೆ ಹಿಂಬಾಗಿಲ ಚಿಲಕ ತೆಗೆದು ಮನೆಯಲ್ಲಿದ್ದ 6.92 ಲಕ್ಷ ರೂಪಾಯಿ ಮೌಲ್ಯದ 173 ಗ್ರಾಂ ಚಿನ್ನಾಭರಣ, 35,000 ರೂಪಾಯಿ ನಗದು, ಕಳವು ಮಾಡಿದ ವಿಚಾರಕ್ಕೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ದ.ಕ ಜಿಲ್ಲಾ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಬೆರಳಚ್ಚು ಘಟಕದ ಪೊಲೀಸ್ ಉಪ ಅಧೀಕ್ಷಕ ಗೌರೀಶ್ ನೇತೃತ್ವದ ತಂಡ ಆರೋಪಿತ ಉಮೇಶ್ ನ ಜಾಡು ಹಿಡಿದು ಮೈಸೂರಿನ ಹುಣಸೂರಿನಲ್ಲಿ ಬಂಧಿಸಿ ಮಾರಾಟ ಮಾಡಿದ ಚಿನ್ನಾಭರಣ ಸಹಿತ ವಶಕ್ಕೆ ಪಡೆದಿದ್ದಾರೆ.

ಆರೋಪಿ ಪುತ್ತೂರು ನಗರ ಠಾಣೆ, ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಬಂದರು ಠಾಣೆ, ಉರ್ವಾ ಠಾಣೆ, ಮೂಡುಬಿದಿರೆ ಠಾಣೆ ಮತ್ತು ಕೇರಳ ರಾಜ್ಯದ ಕಾಸರಗೋಡು, ಕುಂಬಳೆ, ಪಾಲಕ್ಕಾಡ್, ತ್ರಿಶೂರ್, ತಿರುವನಂತಪುರ ಹಾಗೂ ತಮಿಳುನಾಡು ರಾಜ್ಯದ ಸೇಲಂ, ಧರ್ಮಪುರಿ, ಕನ್ಯಾಕುಮಾರಿ, ದಿಂಡುಗಲ್ಲು ಮತ್ತು ಆಂಧ್ರ ರಾಜ್ಯದ ವೈಜಾಕ್ ಠಾಣಾ ವ್ಯಾಪ್ತಿಯಲ್ಲಿ ಹಲವು ರೀತಿಯ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.