ಪುತ್ತೂರು: ಸುಮಾರು ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ರಾಮ ಕುಂಜ ಗ್ರಾಮದ ಖಂಡಿಗ ನಿವಾಸಿ ಸೇಸಪ್ಪ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ನೊಂದ ಬಾಲಕಿಯ ಹಳೆ ನೇರಂಕಿಯಲ್ಲಿನ ಮನೆಯಲ್ಲೇ ಬೆದರಿಸಿ, ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿರುವುದಾಗಿದೆ. ಆಕೆಯ ದೈಹಿಕ ಬದಲಾವಣೆಯನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿ ಎಂಬುದಾಗಿ ತಿಳಿದಿರುವುದಾಗಿದೆ. ಈ ಬಗ್ಗೆ ಬಾಲಕಿಯ ಹೆತ್ತವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು ಆರೋಪಿ ಸೇಸಪ್ಪ ವಿರುದ್ದ ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 5 ಮತ್ತು 6 ರನ್ವಯ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಆರೋಪಿಯೆನ್ನಲಾಗಿದ್ದ ಸೇಸಪ್ಪ ವಿರುದ್ಧ ಪುತ್ತೂರು ಪೊಲೀಸರು ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕೇಸಿಗೆ ಸಂಬಂಧಿಸಿದಂತೆ ಆರೋಪಿ ಸೇಸಪ್ಪ ಜಾಮೀನು ಕೋರಿ ಮಾನ್ಯ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು.ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷಾಧಾರಗಳು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ,ದೂರಿನಲ್ಲಿನ ವಿಳಂಬ, ಡಿಎನ್ಎ ಋಣಾತ್ಮಕ ವರದಿ, ಸೂಕ್ತ ವೈಜ್ಞಾನಿಕ ಸಾಕ್ಷಾಧಾರಗಳ ಕೊರತೆ, ಎಂಬಿತ್ಯಾದಿ ಅಂಶಗಳನ್ನಿಟ್ಟು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ವಾದ -ಪ್ರತಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರು, ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್.ವಿ ರವರು ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿಯ ಪರವಾಗಿ ‘ಕಜೆ ಲಾ ಛೇಂಬರ್ಸ್’ ಪುತ್ತೂರು, ಇದರ ಮುಖ್ಯಸ್ಥರಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.