ಮಂಗಳೂರು ಮಹಾನಗರ ಪಾಲಿಕೆ: ಇಲ್ಲಿ ಲಂಚ ಮುಟ್ಟದವ ಪಾಪಿ.!

ಕರಾವಳಿ

ಯಾರೇ ಅಧಿಕಾರಕ್ಕೂ ಬಂದರೂ ನಿವೃತ್ತಿಯಾದರೂ ಪರ್ಮನೆಂಟ್ ಗೂಟ ಹೊಡೆದ ಆರೋಗ್ಯಾಧಿಕಾರಿ.!

ಇಲ್ಲಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಕಹಾನಿ

ಮಂಗಳೂರು ಮಹಾನಗರ ಪಾಲಿಕೆ ಭ್ರಷ್ಟ ತಿಮಿಂಗಿಲಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಇಲ್ಲಿ ಏನುಂಟು ಏನಿಲ್ಲ.. ಮಹಾನಗರ ಪಾಲಿಕೆಯ ಒಂದೊಂದು ಗೋಡೆಗಳು ಒಂದೊಂದು ಕಥೆ ತೆರೆದಿಡುತ್ತದೆ. ಇಲ್ಲಿ ಅಧಿಕಾರ ಯಾವ ಪಕ್ಷದ್ದು ಅನ್ನುವುದು ಮುಖ್ಯವಲ್ಲ. ಯಾವುದೇ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದ ರೇಟು ಏರಿಕೆಯಾಗುತ್ತಲೇ ಇರುತ್ತದೆ. ಆ ಮಟ್ಟಿಗೆ ಮಂಗಳೂರು ಮಹಾನಗರ ಪಾಲಿಕೆ ಹಂಡಾಲೆದ್ದು ಹೋಗಿದೆ.

ಇಲ್ಲಿ ಲಂಚ ಮುಟ್ಟದ ಅಧಿಕಾರಿ ಪಾಪಿ ಅನ್ನುವ ಮಟ್ಟಿಗೆ ಮಹಾನಗರ ಪಾಲಿಕೆಯ ಲಂಚ ರುಷುವತ್ತುಗಳು ಬಾಯ್ತೆರೆದು ಕೊಂಡು ಕೂತಿದೆ. ಇಲ್ಲಿ ಏನಿದ್ದರೂ ಮಧ್ಯವರ್ತಿಗಳ, ಗುತ್ತಿಗೆದಾರರು, ಅವರ ಚೇಲಾ ಗಳ ಪಾಲಿಗೆ ಮಹಾನಗರ ಪಾಲಿಕೆಯ ಕ್ಯಾಬಿನ್ ಗಳು ತೆರೆದುಕೊಳ್ಳುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ಇಲ್ಲಿ ಕೆಲಸಕ್ಕೆ ಬಂದರೆ ಆತನ ಗತಿ ನಾಯಿಪಾಡು. ಆತನ ಫೈಲ್ ಮೂವ್ ಆಗಬೇಕಾದರೆ ಆತ ಮಧ್ಯವರ್ತಿಯೊಬ್ಬನನ್ನು ಹಿಡಿಯಲೇ ಬೇಕು. ಮಧ್ಯವರ್ತಿ ಮುಖಾಂತರ ಸಂಬಂಧಪಟ್ಟ ಇಲಾಖೆಗೆ ಒಂದೊಂದು ಫೈಲಿಗೂ ಇಂತಿಷ್ಟು ರೇಟ್ ಅನ್ನುವಂತೆ ಅಧಿಕಾರಿಗಳ ಕೈ ಬೆಚ್ಚ ಮಾಡಲೇಬೇಕು. ಹಾಗಾದರೆ ಮಾತ್ರ ಇಲ್ಲಿ ಕೆಲಸ ಸಲೀಸು. ಇಲ್ಲವಾದರೆ ತಿಂಗಳುಗಟ್ಟಲೆ ಆತನ ಕೆಲಸ ನಡೆಯುವುದೇ ಇಲ್ಲ.

ಇಲ್ಲಿ ಕಂದಾಯ ಇಲಾಖೆ ಒಂದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಜನರು ತಮ್ಮ ದಾಖಲೆ, ಸಹಿ, ಕೆಲಸಕ್ಕೆ ಈ ಇಲಾಖೆಗೆ ಹೋದರೆ ಸಾಕು. ಲಂಚ ಕೊಡದೇ ಯಾವುದೇ ಕೆಲಸ ಇಲ್ಲಿ ನಡೆಯಲ್ಲ. ಲಂಚಕ್ಕಾಗಿ ಜಾತಕಪಕ್ಷಿಗಳಂತೆ ಇಲ್ಲಿನ ಅಧಿಕಾರಿ ವರ್ಗ ಕಾದುಕುಳಿತಿರುತ್ತಾರೆ.

ಇನ್ನು ಇಂಜಿನಿಯರಿಂಗ್ ಇಲಾಖೆಯ ಕಥೆ ಹೇಳುವುದೇ ಬೇಡ. ತಿಮಿಂಗಿಲಗಳಂತೆ ಸುಲಿಗೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಒಂದೊಂದು ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ಸಂದಾಯವಾದರೆ ಮಾತ್ರ ಬಿಲ್ ಗೆ ಸಹಿ ಬೀಳುತ್ತದೆ. ಇನ್ನು ಜನರು ಸಣ್ಣ ಪುಟ್ಟ ಸಮಸ್ಯೆ ಹಿಡಿದು ಬಂದರೂ ಅವರನ್ನು ಸತಾಯಿಸಲಾಗುತ್ತದೆ ಅನ್ನುವ ಮಾತಿದೆ.

ಇನ್ನು ಟಿ.ಪಿ.ಓ ಅನ್ನುವ ಸೆಕ್ಷನ್ ಇದೆ. ಬಹುಶಃ ಇದು ಚಿನ್ನದ ಮೊಟ್ಟೆ ಇಡುವ ಇಲಾಖೆ. ಇಲ್ಲಿ ಏನಿದ್ದರೂ ದೊಡ್ಡ ದೊಡ್ಡ ಡೀಲ್ ಗಳೇ ನಡೆಯುತ್ತದೆ. ದುಡ್ಡು ಪಡೆದುಕೊಂಡು ಬೇಕಾಬಿಟ್ಟಿ ಲೈಸೆನ್ಸ್ ನೀಡಲಾಗುತ್ತದೆ. ಕಾನೂನು ಏನಿದ್ದರೂ ಪುಸ್ತಕದ ಬದನೆಕಾಯಿ ಅಷ್ಟೇ.

ಅಬ್ಬಬ್ಬಾ.. ಇಲ್ಲಿನ ಸ್ಮಾರ್ಟ್ ಸಿಟಿ ಅಧಿಕಾರಿಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ದೊಡ್ಡ ಕಾದಂಬರಿಯಾದೀತು. ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಈ ಸ್ಮಾರ್ಟ್ ಸಿಟಿ ಇಡೀ ಮಂಗಳೂರನ್ನು ಲಗಾಡಿ ತೆಗೆದದರಲ್ಲಿ ಇವರದ್ದು ಮಹತ್ವದ ಪಾತ್ರ. ದೂರದರ್ಶಿ ಇಲ್ಲದೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು, ಕಾಮಗಾರಿ ಮುಕ್ತಾಯವಾಗಿ ಮತ್ತೆ ಆರು ತಿಂಗಳೊಳಗೆ ಮಾಡಿದ ಕಾಮಗಾರಿ ಕೆಡವಿ ಬೇರೆ ಕಾಮಗಾರಿ ನಡೆಸುವುದು. ಇದೇ ರೀತಿ ಎಡವಟ್ಟು ಮಾಡುತ್ತಿರುವ ಸ್ಮಾರ್ಟ್ ಇಲಾಖೆಗೆ ಸ್ವಲ್ಪನೂ ಕಾಮನ್ ಸೆನ್ಸ್, ಬುದ್ಧಿಯೇ ಇಲ್ಲದ ಇಂಜಿನಿಯರ್ ಗಳು ತುಂಬಿ ಹೋಗಿದ್ದಾರೆ. ಇಂತಹ ಇಂಜಿನಿಯರ್ ಗಳನ್ನು ಸಮಾಜಕ್ಕೆ ಅರ್ಪಿಸಿದ ಕಾಲೇಜಿಗೆ ಗೋಲ್ಡ್ ಮೆಡಲ್ ಕೊಡಬೇಕು. ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಿಗೆ ಇರುವಷ್ಟು ಜ್ಞಾನ ಈ ಇಲಾಖೆಯ ಅಧಿಕಾರಿಗಳಲ್ಲಿ ಇಲ್ಲ ಅನ್ನುವುದು ಖೇದಕರ. ಮಂಗಳೂರು ಹಂಪನಕಟ್ಟೆ ಹಳೇ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ನಿರ್ಮಾಣ ಕಾರ್ಯ ಇನ್ನೂ ಆಮೆಗತಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಕಾಯಬೇಕೋ? ಪಂಪ್ ವೆಲ್ ಮೇಲ್ಸೆತುವೆ ದಾಖಲೆಯನ್ನು ಇದು ಮುರಿಯುತ್ತದೊ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಇನ್ನು ಆರೋಗ್ಯ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೃತ್ತಿಯಾಗಿದ್ದರೂ ಈಗಲೂ ಕೂಡ ಗೂಟ ಹೊಡೆದುಕೊಂಡು ಕೂತಿದ್ದಾರೆ ಆರೋಗ್ಯಾಧಿಕಾರಿಗಳು. ಇಲ್ಲಿ ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆರೋಗ್ಯಾಧಿಕಾರಿಗಳ ಸ್ಥಾನಕ್ಕೇನೂ ಕುತ್ತು ಇಲ್ಲ. ವರ್ಷಂಪ್ರತಿ ಸಾವಿರಾರು ಸರಕಾರಿ ಅಧಿಕಾರಿಗಳು ಪರೀಕ್ಷೆ ಬರೆದು ಉದ್ಯೋಗಕ್ಕಾಗಿ ಕಾಯುತ್ತಾ ಕುಳಿತಿದ್ದರೂ ಇಲ್ಲಿ ನಿವೃತ್ತಿಯಾದರೂ ಮತ್ತೆ ಅದೇ ಸ್ಥಾನದಲ್ಲಿ ಉಳಿಸಿಕೊಂಡಿರುವ ಮಹಿಮೆ ಏನಿರಬಹುದು?

ಇನ್ನು ಇಲ್ಲಿ ಸಾಮಾನ್ಯ ನಾಗರಿಕರಿಗೊಂದು ಅಧಿಕಾರಿಗಳಿಗೊಂದು ನ್ಯಾಯ ಇಲ್ಲಿದೆ. ಇಲ್ಲಿ ಹೊಸದಾಗಿ ಬಂದಿರುವ ಆಯುಕ್ತರು ಕೆಲಸದ ಅವಧಿಯಲ್ಲಿ ಏಸಿ ಇಲ್ಲದೆ ಕೆಲಸ ಮಾಡುವುದಿಲ್ಲ. ಆದರೆ ಸಮಸ್ಯೆ ಹಿಡಿದುಕೊಂಡು ಬರುವ ನಾಗರೀಕರು ಆಯುಕ್ತರ ಕಚೇರಿಯ ಹೊರಗಡೆ ಕೂತಾಗ ಫ್ಯಾನ್ ಹಾಕಲು ಇಲ್ಲಿನ ಸಿಬ್ಬಂದಿ ಬಿಡುವುದಿಲ್ಲ. ಆಯುಕ್ತರು ಆರ್ಡರ್ ಎಂದು ಸಿಬ್ಬಂದಿಗಳು ಹೇಳುತ್ತಾರೆ. ಆಯುಕ್ತರು ಏಸಿ ಇಲ್ಲದಿದ್ದರೆ ಕಚೇರಿಯತ್ತ ಕಣ್ಣು ಹಾಯಿಸುವುದೇ ಇಲ್ಲ. ಅಂತದರಲ್ಲಿ ನಾಗರೀಕರು ಈ ಬೇಸಿಗೆಯಲ್ಲಿ ಫ್ಯಾನ್ ಹಾಕಬಾರದಂತೆ. ಇದೆಂತಹ ಕಾನೂನು ಆಯುಕ್ತರೇ.. ಇಲ್ಲಿ ಏಸಿ ಕಚೇರಿಯಲ್ಲಿ ಕೂತಿರುವ ಸಾಹೇಬ್ರ ಕರೆಂಟ್ ಬಿಲ್ಲು ಕಟ್ಟುವುದು ಜನರ ತೆರಿಗೆ ಹಣದಿಂದ. ಅವರ ಸಂಬಳದಿಂದ ಅಲ್ಲ. ಇದು ಆಯುಕ್ತರ ಮನೆಗೆ ನಾಗರೀಕರು ಬಂದಿರುವುದಲ್ಲ, ಜನರ ತೆರಿಗೆ ಹಣದಿಂದ ಖರ್ಚು ಮಾಡುವ ಆಯುಕ್ತರ ಸರಕಾರಿ ಕಚೇರಿಗೆ ಅನ್ನುವುದನ್ನು ಇನ್ನಾದರೂ ತಿಳಿದುಕೊಂಡರೆ ಉತ್ತಮ.