✍️. ಭರತ್ ರಾಜ್, ದ.ಕ ಜಿಲ್ಲಾ ವರದಿಗಾರ, ಸುವರ್ಣ ನ್ಯೂಸ್
ಕಳೆದ 15 ವರ್ಷಗಳಲ್ಲಿ ವರದಿ ಮಾಡಿದ ಯಾವುದೇ ಸುದ್ದಿಯ ಬಗ್ಗೆ ಏನೇ ಪರ-ವಿರೋಧಗಳು ಬಂದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಮಾಧ್ಯಮ ಜಗತ್ತಿನಲ್ಲಿ ಸುದ್ದಿಗಳ ಬಗ್ಗೆ ಟೀಕೆ-ಟಿಪ್ಪಣಿಗಳು ಸಹಜ, ಹಾಗಾಗಿ ಎಲ್ಲವನ್ನೂ ತಾಳ್ಮೆಯಿಂದ ಸ್ವೀಕರಿಸಿದ್ದೇನೆ. ಆದರೆ ಇವತ್ತು ಮಧ್ಯಾಹ್ನದಿಂದ ದೃಶ್ಯ ಮಾಧ್ಯಮದ ತಾಂತ್ರಿಕ ಜ್ಞಾನ ಇರದ ಕೆಲ ಅತೃಪ್ತ ಆತ್ಮಗಳು ವಿಡಿಯೋವೊಂದನ್ನ ಹರಿಬಿಟ್ಟು ಸಾಮಾಜಿಕ ತಾಣಗಳಲ್ಲಿ ಒಂದೇ ಸಮನೇ ಅರಚಾಡುತ್ತಿವೆ. ಹಾಗಂತ ಈ ಅರಚಾಟಕ್ಕೂ ನಾನು ಪ್ರತಿಕ್ರಿಯೆ ನೀಡುವವನಲ್ಲ. ಆದರೆ ನನ್ನ ಬಗ್ಗೆ ತಿಳಿದಿರೋ, ಹಲವು ವರ್ಷಗಳಿಂದ ನನ್ನನ್ನ ಪತ್ರಕರ್ತನಾಗಿ ಬಲ್ಲ ಹಲವಾರು ಹಿತೈಷಿಗಳು, ಮಿತ್ರರು ಕರೆ ಮಾಡಿ, ಸಂದೇಶಗಳ ಮೂಲಕ ವೈರಲ್ ವಿಡಿಯೋದ ಬಗ್ಗೆ ಕೇಳುತ್ತಿದ್ದಾರೆ. ಹಾಗೆ ಕರೆ ಮಾಡಿದ ಎಲ್ಲರಿಗೂ ನನ್ನ ಬಗ್ಗೆ ಸ್ಪಷ್ಟತೆ ಇದೆ. ಜೊತೆಗೆ ವಿಡಿಯೋ ಬಗ್ಗೆಯೂ ಕ್ಲಾರಿಟಿ ಇದೆ. ಆದರೂ ಆ ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡುವುದು ನನ್ನ ಜವಾಬ್ದಾರಿ ಅಂದುಕೊಳ್ತೇನೆ.
ಮಂಗಳೂರಿನ ಜೆರೋಸಾ ಶಾಲೆಯ ವಿಚಾರದಲ್ಲಿ ಎಲ್ಲಾ ಮಾಧ್ಯಮಗಳಂತೆ ಸುವರ್ಣ ನ್ಯೂಸ್ ವರದಿಗಾರನಾದ ನಾನು ಕೂಡ ವರದಿ ಮಾಡಿದ್ದೇನೆ. ಆ ದಿನ ಶಾಲೆಯ ಗೇಟ್ ಬಳಿ ನಡೆದ ಪ್ರತಿಭಟನೆಯ ವೇಳೆ ಬಹುತೇಕ ಎಲ್ಲಾ ವಾಹಿನಿಗಳಲ್ಲಿ ಲೈವ್ ಕವರೇಜ್ ಆಗಿದೆ. ಅದರಂತೆ ಸಂಜೆ 4 ಗಂಟೆ ಸುಮಾರಿಗೆ ನನಗೂ ರಿಪೋರ್ಟರ್ ಲೈವ್ ಇದ್ದು, ಶಾಲೆಯ ಗೇಟ್ ಬಳಿಯಿಂದಲೇ ಲೈವ್ ಕೊಟ್ಟಿದ್ದೇನೆ. ಆ ಹೊತ್ತಿಗಾಗಲೇ ಅದೇ ಶಾಲೆಯ ಮಕ್ಕಳು ಭಾರೀ ಸಂಖ್ಯೆಯಲ್ಲಿ ಸೇರಿ ಘೋಷಣೆ ಕೂಗಿದ್ದು, ಆ ವೇಳೆ ನಾನು ಲೈವ್ ಗೆ ನಿಂತಿರೋ ವಿಡಿಯೋ ಹರಿಬಿಡಲಾಗಿದೆ. ಇದರಲ್ಲಿ ನಾನು ಮೊಬೈಲ್ ನೋಡ್ತಿರೋದನ್ನ ಬೇರೆಯದ್ದೇ ಅರ್ಥ ಕಲ್ಪಿಸಿ ವೈರಲ್ ಮಾಡಲಾಗಿದೆ. (ವಿದ್ಯಾರ್ಥಿಗಳಿಗೆ ಏನು ಹೇಳಬೇಕು ಅಂತ ನಾನೇ ಬರೆದು ಮೊಬೈಲ್ ನಲ್ಲಿ ತೋರಿಸುತ್ತಿರೋದಾಗಿ ವೈರಲ್ ವಿಡಿಯೋದಲ್ಲಿ ಬರೆಯಲಾಗಿದೆ). ಆದರೆ ಒಬ್ಬ ಸಾಮಾನ್ಯ ಜ್ಞಾನ ಇರದವರು ಮಾತ್ರ ಇಂಥದ್ದನ್ನ ನಂಬಿ ಹಂಚಿಕೊಳ್ಳಲು ಸಾಧ್ಯ. ಅಸಲಿಗೆ ದೃಶ್ಯ ಮಾಧ್ಯಮದ ಆ ಅಷ್ಟು ಪ್ರಕ್ರಿಯೆಯ ಬಗ್ಗೆ ಕ್ಲಾರಿಟಿ ಕೊಟ್ಟು ಬಿಡ್ತೀನಿ. ಸಹಜವಾಗಿ ಫೀಲ್ಡ್ ನಿಂದ ರಿಪೋರ್ಟರ್ ಲೈವ್ ಪಡೆಯುವ ನಾಲ್ಕೈದು ನಿಮಿಷ ಮೊದಲೇ ನಮಗೆ ಕಚೇರಿಯಿಂದ ನಮಗೆ ಫೋನ್ ಕನೆಕ್ಟ್ ಆಗಿರುತ್ತೆ. ಅಷ್ಟೊತ್ತಿಗೆ ಲೈವ್ ಕಿಟ್ ಆನ್ ಮಾಡಿಕೊಂಡು ಹಿಯರ್ ಫೋನ್ ಹಾಕಿಕೊಂಡು ಲೈವ್ ಗೆ ಸಿದ್ದವಾಗಿ ಕ್ಯಾಮಾರ ಎದುರು ನಿಲ್ಲಬೇಕು. ಆಗ ಹಿರಯ್ ಫೋನ್ ನಲ್ಲಿ ಆಂಕರ್ ಮಾತನಾಡುವ ಆಡಿಯೋ ಕೇಳಿಸುತ್ತೆ. ಆದರೆ ಟಿವಿಯಲ್ಲಿ ಯಾವ ವಿಶ್ಯುಲ್ಸ್ ಹೋಗ್ತಿದೆ, ಏನು ಕಂಟೆಂಟ್ ಆನ್ ಏರ್ ಆಗ್ತಿದೆ ಅನ್ನೋದನ್ನ ನೋಡಲು ಮೊಬೈಲ್ ನಲ್ಲಿ ಯೂ ಟ್ಯೂಬ್ ಆನ್ ಮಾಡಿಕೊಂಡು ನಿಂತಿದ್ದೆ. ಆಂಕರ್ ಪ್ರಶ್ನೆ ನನಗೆ ಕನೆಕ್ಟ್ ಆಗೋವರೆಗೂ ಯೂ ಟ್ಯೂಬ್ ನಲ್ಲಿ ಲೈವ್ ವೀಕ್ಷಿಸಿ ಮತ್ತೆ ಮೊಬೈಲ್ ತೆಗಿದಿಟ್ಟು ಲೈವ್ ನಲ್ಲೇ ಮಾತನಾಡಬೇಕು. ಇವಿಷ್ಟು ದೃಶ್ಯ ಮಾಧ್ಯಮದ ಬಹುತೇಕ ಪತ್ರಕರ್ತರು ಫೀಲ್ಡ್ ಲೈವ್ ಹೊತ್ತಲ್ಲಿ ಮಾಡುವ ಕೆಲಸ.

ಜೆರೋಸಾ ಶಾಲೆಯ ಬಳಿಯ ಲೈವ್ ನ ಹೊತ್ತಲ್ಲೂ ನಾನು ಲೈವ್ ಕನೆಕ್ಟ್ ಆಗಿದ್ದ ಹೊತ್ತಲ್ಲಿ ಯೂ ಟ್ಯೂಬ್ ನಲ್ಲಿ ನಮ್ಮ ಚಾನೆಲ್ ನೋಡ್ತಾ ಇದ್ದೆ. ಆ ವೇಳೆ ಪಕ್ಕದಲ್ಲೇ ಇದ್ದ ಮಕ್ಕಳು ಕೂಡ ಮೊಬೈಲ್ ಇಣುಕಿ ನೋಡ್ತಿರೋದನ್ನ ವಿಡಿಯೋದಲ್ಲಿ ಗಮನಿಸಬಹುದು. ಅಲ್ಲದೇ ಕೆಲವೊಮ್ಮೆ ಆಡ್ ಬ್ರೇಕ್ ಹೋದಾಗಲೂ ಲೈವ್ ಕನೆಕ್ಟ್ ಆಗಿದ್ದಾಗ ನನ್ನಂಥ ಅನೇಕ ರಿಪೋರ್ಟರ್ ಗಳು ಯೂ ಟ್ಯೂಬ್ ನಲ್ಲಿ ಲೈವ್ ನೋಡ್ತಾ ಇರ್ತಾರೆ. ಇವಿಷ್ಟು ಆ ದಿನ ನಡೆದ ಘಟನೆ ಮತ್ತು ವೈರಲ್ ಆಗ್ತಿರೋ ವಿಡಿಯೋದ ವಿಚಾರ. ಆದರೆ ಕೆಲವರು ಈ ವಿಡಿಯೋವನ್ನ ನಾನೇನೋ ಬರೆದು ಮಕ್ಕಳಿಗೆ ತೋರಿಸ್ತಿದ್ದೇನಂತೆ, ಅದನ್ನ ನೋಡಿ ಮಕ್ಕಳು ಹೇಳಿದ್ದಂತೆ, ವರದಿಗಾರನೇ ಮಕ್ಕಳಿಗೆ ಫೀಡ್ ಮಾಡಿದ್ದಾನೆ ಅಂತೆಲ್ಲಾ ಸಾಮಾಜಿಕ ತಾಣಗಳಲ್ಲಿ ಭರ್ಜರಿಯಾಗಿ ತೇಲಿ ಬಿಡ್ತಿದಾರೆ. ಹೀಗೆ ತೇಲಿ ಬಿಡೋರ ಗಮನಕ್ಕೆ ಮತ್ತೊಂದು ವಿಷಯವನ್ನು ತರಲೂ ಬಯಸ್ತೀನಿ. ಅಸಲಿಗೆ ಜೆರೋಸಾ ಶಾಲೆಯ ವಿವಾದದಲ್ಲಿ ಶಿಕ್ಷಕಿ ವಿರುದ್ದ ಆರೋಪ ಮಾಡ್ತಿರೋ ಏಳನೇ ತರಗತಿ ಮಕ್ಕಳು ಕೂಡ ಮಾಧ್ಯಮಗಳ ಎದುರು ಮಾತನಾಡೋಕೆ ಸಿದ್ದರಿದ್ದಾರೆ. ಅವರ ಪೋಷಕರೇ ಸ್ವತಃ ನನಗೆ ಕರೆ ಮಾಡಿ ಮಕ್ಕಳು ಮಾತನಾಡ್ತಾರೆ, ಬೈಟ್ ತೆಗೋಳಿ ಅಂತ ಹೇಳಿದ್ದಾರೆ. ಅದೇ ತರಗತಿಯ ಇಬ್ಬರು ಮಕ್ಕಳ ಜೊತೆಗೂ ನಾನು(ಆಫ್ ದಿ ರೆಕಾರ್ಡ್) ಮಾತನಾಡಿದ್ದೇನೆ. ಆದರೆ ಏಳನೇ ತರಗತಿಯ ಸಣ್ಣ ಮಕ್ಕಳನ್ನ ಟಿವಿ ಕ್ಯಾಮಾರದ ಎದುರು ನಿಲ್ಲಿಸಿ ಸತ್ಯಶೋಧನೆ ನಡೆಸೋ ಅನಿವಾರ್ಯತೆ ನನಗಿಲ್ಲ. ಇದೇ ಕಾರಣಕ್ಕೆ ಆ ಮಕ್ಕಳ ಪೋಷಕರು ಸಿದ್ದವಾಗಿದ್ರೂ ನಾನು ಪೋಷಕರ ಬಳಿಯಷ್ಟೇ ಹೇಳಿಕೆ ಪಡೆದು ಸುದ್ದಿ ಮಾಡಿದ್ದೇನೆ. ಅದರಾಚೆಗೆ ಈ ವಿಚಾರದಲ್ಲಿ ನಡೀತಿರೋ ರಾಜಕೀಯ, ಪರ-ವಿರೋಧ, ವಾದ-ಪ್ರತಿವಾದಗಳನ್ನ ಪತ್ರಕರ್ತನಾಗಿ ಸುದ್ದಿ ಮಾಡಿದ್ದು ಬಿಟ್ಟರೆ ಮತ್ತಿನ್ನೇನೂ ಇಲ್ಲ. ಸತ್ಯಶೋಧನೆ, ಸಮಾನ ಮನಸ್ಕರು ಅಥವಾ ಎಡ-ಬಲ ಸಂಘಟನೆ ಹೆಸರಿನಲ್ಲಿ ಶಾಲಾ ಮಕ್ಕಳ ವಿಚಾರದಲ್ಲಿ ತೂರಿಕೊಳ್ಳೋ ಜರೂರತ್ತು ನನಗಿಲ್ಲ.
ಇನ್ನು ರಾಮ, ಅಲ್ಲಾ ಅಥವಾ ಯೇಸುವಿನ ಬಗ್ಗೆ ಯಾರು ಏನೇ ಅಂದರೂ ಸಹಿಸಿಕೊಂಡು ಕೂರುವ ಮಕ್ಕಳಾಗಲೀ, ಪೋಷಕರಾಗಲೀ ಯಾವ ಧರ್ಮದಲ್ಲೂ ಇಲ್ಲ ಅಂದುಕೊಳ್ತೀನಿ. ಶಾಲೆಯಲ್ಲಿ ಕಲಿಸೋ ಪಾಠವನ್ನೇ ಸೂಪರ್ ಫಾಸ್ಟ್ ಆಗಿ ತಲೆಗೆ ಹತ್ತಿಸಿಕೊಳ್ಳದ ಮಕ್ಕಳು ನಾನು ಆನ್ ಸ್ಪಾಟ್ ಫೀಡ್ ಮಾಡಿದ್ದನ್ನ(ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದಂತೆ) ಇಷ್ಟು ಚೆನ್ನಾಗಿ ಹೇಳ್ತಾರಂದ್ರೆ ಆ ಶಾಲೆಯ ಬಗ್ಗೆಯೂ ಹೆಮ್ಮೆ ಅನಿಸ್ತಿದೆ. ನಾವು ಕಲಿತ ಶಿಕ್ಷಣವೇ ನಾವೇನು ಮಾತನಾಡಬೇಕು ಅನ್ನೋದನ್ನ ಕಲಿಸುತ್ತಂತೆ. ಹಾಗಾದ್ರೆ ಆ ಶಾಲೆಯಲ್ಲಿ ಕಲಿಸಿದ್ದನ್ನೇ ಮಕ್ಕಳು ಹೊರಗೆ ಬಂದು ಮಾಧ್ಯಮಗಳ ಎದುರು ಹೇಳಿದ್ದಾರಷ್ಟೇ ಅಂದುಕೊಂಡಿದ್ದೆ. ಅದರಾಚೆಗೆ ಮತ್ಯಾರೋ ಫೀಡ್ ಮಾಡಿದ್ದಾರೆ, ಯಾರೋ ಹೇಳಿಕೊಟ್ಟಿದ್ದಾರೆ ಅನ್ನೋ ವಾದಗಳಿದ್ದರೆ ಅದನ್ನೂ ಒಪ್ಪೋಣ. ಜೊತೆಗೆ ಸಾಮಾಜಿಕ ತಾಣಗಳಲ್ಲಿ ಕೆಲ ಅತೃಪ್ತ ಆತ್ಮಗಳು ಬರೆದಂತೆ ನಾನು ಬರೆದಿದ್ದನ್ನ ಚಿಲ್ಲರೆ ಸೆಕೆಂಡ್ ನಲ್ಲಿ ಮೊಬೈಲ್ ಮೂಲಕವೇ ಓದಿ ನಿಮಿಷಗಟ್ಟಲೇ ಮಕ್ಕಳು ಮಾತನಾಡಿದ್ದನ್ನೂ ಒಮ್ಮೆ ನೋಡಿ ಬಿಡಿ.(ಲಿಂಕ್ ಕೆಳಗೆ ಹಾಕಿದ್ದೇನೆ) ಕೊನೆಯದಾಗಿ ಇಷ್ಟುದ್ದ ಬರೆಯಬೇಕಾಗಿ ಬಂದಿದ್ದು ನನ್ನನ್ನ ಒಪ್ಪುವ ಮತ್ತು ಅರಿತಿರೋ ಎಲ್ಲಾ ಜಾತಿ, ಧರ್ಮ, ಪಂಥ, ಪಂಗಡ, ಎಡ-ಬಲ, ಸಮಾನ ಮನಸ್ಕ ಗೆಳೆಯರಿಗಾಗಿಯಷ್ಟೇ……
ಭರತ್ ರಾಜ್
ದ.ಕ ಜಿಲ್ಲಾ ವರದಿಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
